ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಮೈದುಂಬಿದ ಹೇಮೆಗೆ ಬಾಗಿನದ ಗೌರವ

ಆರು ಕ್ರಸ್ಟ್ ಗೇಟ್‌ಗಳಿಂದ ಐದು ಸಾವಿರ ಕ್ಯುಸೆಕ್‌ ನದಿಗೆ ನೀರು
Last Updated 21 ಆಗಸ್ಟ್ 2020, 12:44 IST
ಅಕ್ಷರ ಗಾತ್ರ

ಹಾಸನ: ಮೈದುಂಬಿದ ಜೀವನದಿ ಗೊರೂರಿನ ಹೇಮಾವತಿ ಜಲಾಶಯಕ್ಕೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಶುಕ್ರವಾರ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಸಚಿವರಿಗೆ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಎ.ಟಿ.ರಾಮಸ್ವಾಮಿ, ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮತ್ತು ಅಧಿಕಾರಿಗಳು ಸಾಥ್ ನೀಡಿದರು.

ಬಾಗಿನ ಅರ್ಪಣೆಗೂ ಮುನ್ನ ತುಂಬಿದ ಮೊರ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಇದಕ್ಕಾಗಿ ಅಣೆಕಟ್ಟೆಯ ಮೇಲ್ಭಾಗವನ್ನು ಹೂವು, ಚಪ್ಪರಗಳಿಂದ ಅಲಂಕರಿಸಲಾಗಿತ್ತು. ಬಳಿಕ 6 ಕ್ರಸ್ಟ್ ಗೇಟ್ ಗಳ ಮೂಲಕ ಅಣೆಕಟ್ಟೆಯಿಂದ ಐದು ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಯಿತು. ಈ ದೃಶ್ಯ ನೋಡುಗರಿಗೆ ವಿಶೇಷ ಆನಂದ ನೀಡಿತು.

ಈ ವೇಳೆ ಮಾತನಾಡಿದ ಸಚಿವರು, ಹೇಮಾವತಿ ಜಲಾಶಯದಿಂದ ಹಾಸನ, ಮಂಡ್ಯ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಿಗೆ ನೀರು ಹರಿಸಲಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಬೆಂಗಳೂರು ಜನರಿಗೆ ಕುಡಿಯಲು ಹೇಮಾವತಿ ನೀರು ಪೂರೈಕೆ ಮಾಡಲಾಗುವುದು. ಈಗಾಗಲೇ ಹೇಮೆ ಅಚ್ಚುಕಟ್ಟು ಭಾಗದ ನೀರಾವರಿಗೆ ಬೇಕಾದ ನೀರನ್ನು ಹರಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ನಷ್ಟವಾಗಿರುವ ಬೆಳೆಗೆ ಪರಿಹಾರ ನೀಡುವ ಸಂಬಂಧ ಈಗಾಗಲೇ ಸಮೀಕ್ಷೆ ಕಾರ್ಯ ನಡೆದಿದೆ. ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಸತತ ಮೂರನೇ ವರ್ಷವೂ ಜಲಾಶಯ ತುಂಬಿರುವುದು ಅಚ್ಚುಕಟ್ಟು ಭಾಗದ ರೈತರಲ್ಲಿ ಮಂದಹಾಸ ಮೂಡಿಸಿದೆ. 2922 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 2921.47 ಅಡಿ ನೀರು ಸಂಗ್ರಹವಿದ್ದು, 5300 ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಹಾಸನ ಜಿಲ್ಲೆಯ 112450 ಎಕರೆ, ಮಂಡ್ಯ ಜಿಲ್ಲೆಯ 232917 ಎಕರೆ, ಮೈಸೂರು ಜಿಲ್ಲೆಯ 5600 ಎಕರೆ, ತುಮಕೂರು ಜಿಲ್ಲೆಯ 304033 ಎಕರೆ ಸೇರಿ ಒಟ್ಟು 65500 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಆ. 3ರಿಂದ ಹೇಮಾವತಿ ಬಲಮೇಲ್ದಂಡೆ ನಾಲೆ ಮತ್ತು ಅಣೆಕಟ್ಟು ನಾಲೆ, ಆ.7ರಿಂದ ಹೇಮಾವತಿ ಎಡದಂಡೆ ನಾಲೆ ಹಾಗೂ ಬಲದಂಡೆ ನಾಲೆಗೆ ಆ.17ರಿಂದ ನೀರಾವರಿ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದೆ. ಆ. 10 ರಂದು ನಡೆದ ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ, ಹೇಮಾವತಿ ಯೋಜನಾ ವ್ಯಾಪ್ತಿಯ ಮೂರು ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶ, ಕುಡಿಯುವ ನೀರಿನ ಯೋಜನೆ ಹಾಗೂ ಕೆರೆ, ಕಟ್ಟೆ ತುಂಬಿಸಲು ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜಲಾಶಯ ಯೋಜನೆ ಮುಖ್ಯ ಎಂಜಿನಿಯರ್‌ ಮಂಜಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT