ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿಗಳಿಗೆ ಕಾನೂನು ಪ್ರಕಾರ ಮೀಸಲಾತಿ ನಿಗದಿ ಮಾಡಲು ರೇವಣ್ಣ ಆಗ್ರಹ

ರಾಜಕೀಯ ಒತ್ತಡಕ್ಕೆ ಮಣಿಯದಿರಿ: ಶಾಸಕ ಎಚ್.ಡಿ.ರೇವಣ್ಣ
Last Updated 4 ಜನವರಿ 2021, 11:51 IST
ಅಕ್ಷರ ಗಾತ್ರ

ಹಾಸನ: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಕಾನೂನು ಪ್ರಕಾರ ನಿಗದಿ ಮಾಡದಿದ್ದರೆ ಜಿಲ್ಲಾ ಚುನಾಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಎಚ್.ಡಿ.ರೇವಣ್ಣ ಎಚ್ಚರಿಸಿದರು.

ಕೆಲ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡು ತಾಸು ಮೀಸಲಾತಿ ನಿಗದಿ ಕುರಿತು ಗೌಪ್ಯ ಸಭೆ ನಡೆಸಿರುವ ಬಗ್ಗೆ ಮಾಹಿತಿ ದೊರೆತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಒಂದೇ ಸ್ಥಾನ ಗೆದ್ದಿರುವ ಪಂಚಾಯಿತಿಗಳಲ್ಲಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಬಿಜೆಪಿ ಮುಖಂಡರು ಆಮಿಷವೊಡ್ಡುತ್ತಿದ್ದಾರೆ. ರಾಜ್ಯ ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಾಗಿದೆ. ಆಯೋಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ
ಹೇಳಿದರು.

ಬಿಜೆಪಿ ಮುಖಂಡರು ಗ್ರಾಮ ಪಂಚಾಯಿತಿ ಸದಸ್ಯರಿಗೆ ಆಮಿಷವೊಡ್ಡಿರುವ ಆಡಿಯೊ ಇದೆ. ಅದನ್ನು ಸೂಕ್ತ ಸಂದರ್ಭದಲ್ಲಿ ಕೋರ್ಟ್‌ ಗಮನಕ್ಕೆ ತರಲಾಗುವುದು.ನಿಯಮದ ಪ್ರಕಾರ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಮೀಸಲಾತಿ ಪ್ರಕಟಿಸಬೇಕು. ಆದರೆ ರಾಜ್ಯ ಸರ್ಕಾರ ಪಕ್ಷದ ಕಾರ್ಯಕರ್ತರಿಗೆ ಅನುಕೂಲ ಮಾಡಿಕೊಡು ಉದ್ದೇಶದಿಂದ ಫಲಿತಾಂಶದ ಬಳಿಕ ಪ್ರಕಟಿಸುತ್ತಿದೆ. ರಾಜಕೀಯ ಒತ್ತಡಕ್ಕೆ ಮಣಿಯದೆ ಕಾನೂನು ಪ್ರಕಾರ ಮೀಸಲಾತಿ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಹಾಸನ ನಗರಸಭೆಯಲ್ಲಿ ಜೆಡಿಎಸ್‌ಗೆ ಅಧಿಕಾರ ಸಿಗಬಾರದೆಂಬ ಕಾರಣಕ್ಕೆ ಅಧ್ಯಕ್ಷ ಸ್ಥಾನವನ್ನು ಎಸ್‌ಟಿ ವರ್ಗಕ್ಕೆ ಮೀಸಲಿರಿಸಲಾಯಿತು. ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡುವುದಾದರೆ ಚುನಾವಣೆ ಏಕೆ ನಡೆಸಬೇಕು ಎಂದು ಪ್ರಶ್ನಿಸಿದರು.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಚುನಾವಣೆಗೆ ಆರು ತಿಂಗಳು ಮುಂಚೆಯೇ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಈ ಸಂಬಂಧ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು. ಕ್ರಮ ಕೈಗೊಳ್ಳದಿದ್ದರೆ ಕೋರ್ಟ್ ಮೊರೆ ಹೋಗಲಾಗುವುದು ಎಂದರು.

ಬ್ಯಾಂಕ್‌ಗಳು ಸಾಲ ಮಂಜೂರು ಮಾಡಲು ಫಲಾನುಭವಿಗಳನ್ನು ಅಲೆಸು‌ತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದು ಯಾವುದು ಗಮನಕ್ಕೆ ಬಂದಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳು ಬಡವರಿಗೆ ತಲುಪುತ್ತಿಲ್ಲ. ಹಾಗಾಗಿ ಕಾವೇರಿ ಗ್ರಾಮೀಣ ಬ್ಯಾಂಕ್‌ ಮತ್ತು ಕಾರ್ಪೋರೇಷನ್‌ ಬ್ಯಾಂಕ್‌ಗಳು ಏಕೆ ಇರಬೇಕು? ಸಾಲಕ್ಕಿಂತ ಬಡ್ಡಿಯೇ ಹೆಚ್ಚು ವಸೂಲು ಮಾಡುತ್ತಿವೆ. ಮೊದಲು ಪಡುವಲಹಿಪ್ಪೆಯಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್‌ ಮುಚ್ಚಿಸುತ್ತೇನೆ. ಕೂಡಲೇ ರಾಷ್ಟ್ರೀಕೃತ ಬ್ಯಾಂಕ್‌ಗಳು ಶಾಸಕರು, ಸಂಸದರ ಸಭೆ ಕರೆಯಬೇಕು
ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT