ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಯಗಚಿ ನದಿಯಲ್ಲಿ ನೀರಿನ ಪ್ರಮಾಣ ಕುಸಿತ

Published 2 ಜುಲೈ 2023, 5:04 IST
Last Updated 2 ಜುಲೈ 2023, 5:04 IST
ಅಕ್ಷರ ಗಾತ್ರ

ಎಂ.ಪಿ. ಹರೀಶ್

ಆಲೂರು: ದಿನದಿಂದ ದಿನಕ್ಕೆ ಮಳೆ ಪ್ರಮಾಣ ಕಡಿಮೆ ಆಗುತ್ತಿರುವುದರಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಆತಂಕ ಸೃಷ್ಟಿಸಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಗೊಳಪಡುವ ಪ್ರದೇಶದಲ್ಲಿ ಸುಮಾರು 7ಸಾವಿರ ಜನಸಂಖ್ಯೆ ಇದೆ. ಪ್ರಮುಖವಾಗಿ ಯಗಚಿ ನದಿಯಿಂದ ಕುಡಿಯಲು ನೀರನ್ನು ಪಂಪ್ ಮಾಡಿಕೊಂಡು, ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಏಳು ವಾರ್ಡ್‌ಗಳಿಗೆ ವಿತರಣೆ ಮಾಡಲಾಗುತ್ತದೆ. ಉಳಿದ ನಾಲ್ಕು ವಾರ್ಡ್‌ಗಳಿಗೆ ಕೊಳವೆಬಾವಿಯಿಂದ ನೇರವಾಗಿ ಸರಬರಾಜು ಮಾಡಲಾಗುತ್ತದೆ.

ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳ ವೇಳೆಗೆ ಸಾಕಷ್ಟು ಮಳೆಯಾಗಿ, ಕೆರೆ ಕಟ್ಟೆಗಳು ಭರ್ತಿಯಾಗುತ್ತಿದ್ದವು. ನದಿಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಈ ವರ್ಷ ಮಳೆಯಾಗದೇ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಕೊಳವೆಬಾವಿಗಳಲ್ಲಿ ಸಾಕಷ್ಟು ನೀರು ಸಿಗುತ್ತಿಲ್ಲ.

ಯಗಚಿ ನದಿಯಲ್ಲಿ ನೀರು ಹರಿಯುವ ಪ್ರಮಾಣ ಕಡಿಮೆ ಆಗಿರುವುದರಿಂದ ನದಿ ಪಾತ್ರದೊಳಗೆ ನೀರನ್ನು ಅಡ್ಡಗಟ್ಟಲು ಬದು (ಬಂಡ್) ನಿರ್ಮಾಣ ಮಾಡಿ ನೀರು ಸಂಗ್ರಹಿಸಲಾಗುತ್ತಿದ್ದು, ಅದನ್ನು ಪಂಪ್ ಮಾಡಿಕೊಂಡು ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 18 ಕೊಳವೆಬಾವಿಗಳಿವೆ. ಅವುಗಳ ಪೈಕಿ 10 ಕೊಳವೆಬಾವಿಗಳು ನೀರಿಲ್ಲದೇ ಅಥವಾ ಕೆಟ್ಟು ನಿಂತಿವೆ. 8 ಬಾವಿಗಳಿಂದ ನೀರು ದೊರಕುತ್ತಿದೆ. ಆದರೂ ಮೊದಲಿನಂತೆ ಸಾಕಷ್ಟು ನೀರು ದೊರಕುತ್ತಿಲ್ಲ ಎನ್ನಲಾಗಿದೆ.

ಮುಂದಿನ 8-10 ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ನೀರು ಸಂಗ್ರಹವಾಗದಿದ್ದರೆ, ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಎದುರಾಗಲಿದೆ. ಸಮೀಪದ ಯಾವುದೇ ಕೆರೆಗಳಲ್ಲಿ ನೀರಿಲ್ಲದಿರುವುದರಿಂದ ಭವಿಷ್ಯದಲ್ಲಿ ಮನೆ ಬಳಕೆಗೆ ನೀರಿನ ಅಭಾವ ಹೆಚ್ಚಾಗುತ್ತದೆ ಎಂದು ಅಧಿಕಾರಿಗಳು
ಹೇಳುತ್ತಿದ್ದಾರೆ

ವಾಟೆಹೊಳೆ ಜಲಾಶಯದಲ್ಲಿ ಕುಡಿಯಲು ನೀರು ಕೊಡುವಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಿದೆ. ಆದರೆ ಅಣೆಕಟ್ಟೆಯಿಂದ 10 ಕಿ. ಮೀ. ದೂರದಲ್ಲಿ ನೀರೆತ್ತುವ ಪಂಪ್ ಇದೆ. ನೀರು ಹರಿಯುವುದನ್ನು ಗಮನಿಸಿದ ಅಕ್ಕಪಕ್ಕದ ರೈತರು, ಇದೇ ನೀರನ್ನು ಬಳಸಿಕೊಳ್ಳುವುದರಿಂದ ಪಂಪ್‌ ಇರುವ ಸ್ಥಳಕ್ಕೆ ನೀರು ಹರಿಯುವುದು ಅಸಾಧ್ಯವಾಗುತ್ತದೆ.

ಪಟ್ಟಣ ಪಂಚಾಯಿತಿ ವತಿಯಿಂದ ಪ್ರತಿಯೊಂದು ಮನೆಗಳಿಗೂ ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಬಹುತೇಕ ಬಳಕೆದಾರರು ಪೈಪ್‌ಗೆ ನಲ್ಲಿ ಅಳವಡಿಸದಿರುವುದರಿಂದ ನೀರು ಹರಿದು ಪೋಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಆಡಳಿತ ವ್ಯವಸ್ಥೆ ಮುಂದಾಗಬೇಕು. ಬಳಕೆದಾರರು ಕನಿಷ್ಠ ತಮ್ಮ ಮನೆ ಮುಂದೆ ನೀರಿನ ಪೈಪ್‌ಗೆ ನಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎನ್ನುವ ಒತ್ತಾಯ ಪ್ರಜ್ಞಾವಂತ
ನಾಗರಿಕರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT