ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐನ ಕಿರೀಸಾವೆ ಶಾಖೆ ಹಿರೀಸಾವೆ ಶಾಖೆಯಲ್ಲಿ ವಿಲೀನ: ಜನರಿಗೆ ಸಂಕಷ್ಟ

Published 5 ಜನವರಿ 2024, 6:56 IST
Last Updated 5 ಜನವರಿ 2024, 6:56 IST
ಅಕ್ಷರ ಗಾತ್ರ

ಹಿರೀಸಾವೆ: ಹೋಬಳಿ ಕಿರೀಸಾವೆ ಗಡಿ ಭಾಗದಲ್ಲಿ ಏಳೂವರೆ ವರ್ಷದ ಹಿಂದೆ ಆರಂಭವಾಗಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯನ್ನು ಇದೀಗ ಹಿರೀಸಾವೆ ಶಾಖೆಯಲ್ಲಿ ವಿಲೀನ ಮಾಡಲಾಗುತ್ತಿದ್ದು, ಬ್ಯಾಂಕ್ ವ್ಯವಹಾರಕ್ಕೆ ತೊಂದರೆಯಾಗಲಿದೆ ಎಂದು ಸುತ್ತಲಿನ ಗ್ರಾಮಗಳ ಜನರು ಹೇಳುತ್ತಿದ್ದಾರೆ.

ಹಾಸನ ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಯ ಗಡಿ ಗ್ರಾಮಗಳ ಜನರಿಗೆ ಬ್ಯಾಂಕ್ ವ್ಯವಹಾರ ಮಾಡಲು ಸುಲಭವಾಗಲಿ ಎಂದು ಹಿರೀಸಾವೆ ಹೋಬಳಿ ಕೇಂದ್ರದಿಂದ 5 ಕಿ.ಮೀ ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ಈ ಶಾಖೆಯನ್ನು ಆರಂಭಿಸಲಾಗಿತ್ತು.

2016ರಲ್ಲಿ ಆರಂಭವಾದ ಶಾಖೆಯಲ್ಲಿ ಕಿರೀಸಾವೆ, ದಾಸಿನಕೆರೆ, ಬ್ಯಾಡರಹಳ್ಳಿ, ಕಲ್ಲಹಳ್ಳಿ, ಬಾಳಗಂಚಿ, ಗೌಡರಹಳ್ಳಿ, ಅಂತನಹಳ್ಳಿ, ತಿಮ್ಮಲಾಪುರ, ಹೊನ್ನದೇವಿಹಳ್ಳಿ ಸೇರಿದಂತೆ ಇತರೆ ಗ್ರಾಮಗಳ ಜನರು ಉಳಿತಾಯ ಖಾತೆ, ಹಾಲು ಉತ್ಪಾದಕರ ಸಹಕಾರ ಸಂಘಗಳು, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಸೇರಿದಂತೆ ಸುಮಾರು ಮೂರು ಸಾವಿರ ವಿವಿಧ ಖಾತೆಗಳನ್ನು ತೆರೆದು ವ್ಯವಹಾರ ಮಾಡುತ್ತಿದ್ದಾರೆ.

ಈ ಭಾಗದ ಜನರಿಗೆ ಸರ್ಕಾರದ ಬಹುತೇಕ ಯೋಜನೆಗಳ ಅನುದಾನ ಮತ್ತು ಅಂಗವಿಕಲ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಹಲವು ವೇತನಗಳನ್ನು ಸರ್ಕಾರವು ಈ ಶಾಖೆಯಲ್ಲಿರುವ ಖಾತೆಗಳಿಗೆ ಹಾಕುತ್ತಿದೆ. ಸುಮಾರು ₹ 8.76 ಕೋಟಿ ವ್ಯವಹಾರ ಮಾಡಿರುವ ಈ ಶಾಖೆಯನ್ನು ವಿಲೀನ ಮಾಡಲಾಗುತ್ತಿದ್ದು, ಇಲ್ಲಿನ ಗ್ರಾಹಕರು ಹಿರೀಸಾವೆ ಶಾಖೆಯಲ್ಲಿ ವ್ಯವಹರಿಸುವಂತೆ ಎಸ್‌ಬಿಐ ಶಾಖೆಯ ಎದುರು ನೋಟಿಸ್ ಹಾಕಿದೆ.

ಈ ಶಾಖೆಯಲ್ಲಿ ಕೆಲಸ ಮಾಡುವ ನೌಕರರಿಗೆ ಸಂಬಳ ನೀಡುವಷ್ಟು ಆದಾಯವು ಬರುತ್ತಿಲ್ಲ. ಜನರು ಹೆಚ್ಚು ವ್ಯವಹಾರ ಮಾಡುತ್ತಿಲ್ಲ. ಖಾತೆಗಳನ್ನು ಹೆಚ್ಚು ತೆರೆಯುತ್ತಿಲ್ಲ. ನಷ್ಟದಲ್ಲಿ ಇರುವುದರಿಂದ ಶಾಖೆಯನ್ನು ವಿಲೀನ ಮಾಡಲಾಗುತ್ತಿದೆ ಎಂದು ಎಸ್‌ಬಿಐನ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಬಾಳಗಂಚಿ ಗ್ರಾಮ ಪಂಚಾಯಿತಿ ಸೇರಿದಂತೆ ಹತ್ತಾರು ಹಳ್ಳಿಯ ಜನರು, ಸರ್ಕಾರದ ಎಲ್ಲ ಯೋಜನೆಗಳ ಹಣ ಮತ್ತು ವಿವಿಧ ವೇತನಗಳನ್ನು ಪಡೆಯಲು 10 ಕಿ.ಮೀ. ದೂರದ ಹಿರೀಸಾವೆ ಬ್ಯಾಂಕ್ ಹೋಗಬೇಕಾಗುತ್ತದೆ. ಇದರಿಂದ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೇದಮೂರ್ತಿ.

ಕಿರೀಸಾವೆ ಗಡಿಯಲ್ಲಿ ಇರುವ ಭಾರತೀಯ ಸ್ಟೇಟ್ ಬ್ಯಾಂಕ್ ಮುಚ್ಚದಂತೆ ಹಿರಿಯ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೇವೆ.
ಲಿಂಗರಾಜು ಗುತ್ತಿಗೆದಾರ ಕಿರೀಸಾವೆ
ಆದಾಯ ಇಲ್ಲದ ಕಾರಣ ಕಿರೀಸಾವೆ ಶಾಖೆಯನ್ನು ಹಿರೀಸಾವೆ ಶಾಖೆಯೊಂದಿಗೆ ವಿಲೀನ ಮಾಡುತ್ತಿದ್ದೇವೆ ಈ ಬಗ್ಗೆ ಲೀಡ್ ಬ್ಯಾಂಕ್‌ನಿಂದ ಅನುಮತಿ ಪಡೆಯಲಾಗಿದೆ.
ಆರ್. ಅನುರಾಧಾ ಎಜಿಎಂ ಎಸ್‌ಬಿಐ ಹಾಸನ
ಹತ್ತಾರು ಹಳ್ಳಿಗಳ ಜನರು ಈ ಶಾಖೆಯನ್ನು ನಂಬಿ ವ್ಯವಹಾರ ಮಾಡುತ್ತಿದ್ದಾರೆ. ಆದಾಯ ಬರುತ್ತಿಲ್ಲ ಎಂಬ ಕಾರಣ ವಿಲೀನ ಮಾಡುವುದು ಸರಿಯಲ್ಲ.
ದೇವರಾಜು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಿರೀಸಾವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT