ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನಂತಕುಮಾರ್ ಹೆಗಡೆ ಮನುಷ್ಯನೇ ಅಲ್ಲ: ಸಚಿವ ಕೆ.ಎನ್.ರಾಜಣ್ಣ

ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಶೀಘ್ರ: ಸಚಿವ ರಾಜಣ್ಣ
Published 25 ಫೆಬ್ರುವರಿ 2024, 13:47 IST
Last Updated 25 ಫೆಬ್ರುವರಿ 2024, 13:47 IST
ಅಕ್ಷರ ಗಾತ್ರ

ಹಾಸನ: ‘ನಾವು ಸಂವಿಧಾನ ಬದಲಿಸುತ್ತೇವೆ, ಜನ ಅದಕ್ಕೆ ನಮಗೆ ವೋಟು ಹಾಕಿರೋದು ಎಂದು ಹೇಳಿಕೆ ನೀಡಿದ್ದ ಸಂಸದ ಅನಂತಕುಮಾರ್ ಹೆಗಡೆ ಮನುಷ್ಯನೇ ಅಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಟೀಕಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತಕುಮಾರ್ ಹೆಗಡೆ ಏಕವಚನ ಬಳಕೆ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಒಬ್ಬ ಸಚಿವರಾಗಿದ್ದವರು, ಅವರ ತಲೆಯಲ್ಲಿ ಏನಾದರೂ ಬುದ್ಧಿ ಇದೆಯೇ? ಅವರು ಮನುಷ್ಯನೇ ಅಲ್ಲ’ ಎಂದರು.

ಅಭ್ಯರ್ಥಿಗಳ ಪಟ್ಟಿ ಶೀಘ್ರ ಬಿಡುಗಡೆ:

ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಶೀಘ್ರ ಬಿಡುಗಡೆ ಆಗಲಿದೆ ಎಂದು ತಿಳಿಸಿದರು.

ರಣದೀಪ್‌ಸಿಂಗ್‌ ಸುರ್ಜೇವಾಲ ಅವರ ಮಗನ ಮದುವೆ ಇತ್ತು. ಹೀಗಾಗಿ ಅವರು ಭಾನುವಾರ ಬೆಂಗಳೂರಿಗೆ ಬರಲಿದ್ದಾರೆ. ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ತಯಾರಿ ನಡೆಸುವ ಕುರಿತು ಎಲ್ಲ ಶಾಸಕರಿಗೂ ಅಲರ್ಟ್ ಮಾಡಬೇಕಿದೆ. ಎಲ್ಲರೂ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಸಭೆ ಚುನಾವಣೆಯ ನಂತರ ಲೋಕಸಭೆ ಚುನಾವಣೆಯ ಸಂಬಂಧ ಚರ್ಚೆ ನಡೆಯಲಿದೆ ಎಂದು ರಾಜಣ್ಣ ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧೆ ಮಾಡಬೇಕು ಎಂದು ಅವರ ಮನಸ್ಸಿನಲ್ಲಿ ಬಂದರೆ ಇಡೀ ದೇಶದಲ್ಲಿ ಯಾವ ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಅವರೇ ಬಿ ಫಾರಂ ಕೊಡುವುದು. ಸ್ಪರ್ಧೆ ಮಾಡೋದು ಅವರಿಗೆ ಬಿಟ್ಟ ವಿಚಾರ. ಅವರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಿದರೆ ನಮಗೆ ಸ್ವಾಗತ ಇದೆ ಎಂದರು.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಡ್ಡ ಮತದಾನದ ಭಯ ಇಲ್ಲ. ಆಡಳಿತ ಪಕ್ಷದ ಶಾಸಕರಾರೂ ಅಡ್ಡ ಮತದಾನ ಮಾಡುವುದಿಲ್ಲ. ಪ್ರತಿಪಕ್ಷಗಳ ಶಾಸಕರಿಂದಲೇ ಅಡ್ಡ ಮತದಾನ ಆಗಲಿದೆ ಎಂದು ಹೇಳಿದರು.

ವೆಂಕಟಪ್ಪ ಆತ್ಮೀಯರು: ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಇತ್ತೀಚಿಗೆ ಅಧಿಕಾರ ವಹಿಸಿಕೊಂಡಿದ್ದ ರಾಜಾ ವೆಂಕಟಪ್ಪ ನಾಯಕ ಅವರ ನಿಧನ ವೈಯಕ್ತಿಕವಾಗಿ ಬಹಳ ನೋವುಂಟಾಗಿದೆ. ಅವರು ಬಹಳ ಸ್ನೇಹಜೀವಿಯಾಗಿದ್ದರು. ಅವರ ಅಗಲಿಕೆಯನ್ನು ದುಃಖ ಸಹಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಉಗ್ರಾಣ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿದ ಸಂದರ್ಭದಲ್ಲಿ ನಾನೇ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದೆ ಎಂದು ಸ್ಮರಿಸಿದರು.

ಮನು ಕುಟುಂಬಕ್ಕೆ ಬಾಕಿ ಪರಿಹಾರ

2022 ರಲ್ಲಿ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಮನು ಕುಟುಂಬಕ್ಕೆ ಬಾಕಿ ಇರುವ ಅರ್ಧ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎನ್. ರಾಜಣ್ಣ ಭರವಸೆ ನೀಡಿದರು. ಪರಿಹಾರ ಹೆಚ್ಚಳ ಮಾಡಿ ಆದೇಶ ಮಾಡಿದ ದಿನದಿಂದ ಮುಂದೆ ₹ 15 ಲಕ್ಷ ಪರಿಹಾರ ವಿತರಿಸಲಾಗುತ್ತದೆ. ತಾಂತ್ರಿಕವಾಗಿ ಮೃತ ಮನು ಅವರನ್ನು ಒಳಗೊಂಡಂತೆ ಎಂದು ಆದೇಶ ಮಾಡಬೇಕಿತ್ತು. ನನ್ನ ಗಮನಕ್ಕೂ ಬಂದಿದ್ದು ಸಂಬಂಧಪಟ್ಟ ಸಚಿವ ಜೊತೆ ಮಾತನಾಡಿದ್ದೇನೆ. ಇನ್ನೊಮ್ಮೆ ಮಾತನಾಡಿ ಅದನ್ನು ಸರಿಪಡಿಸೋಣ ಎಂದು ತಿಳಿಸಿದರು. ಕೇರಳದಲ್ಲಿ ಒಬ್ಬ ವ್ಯಕ್ತಿಯನ್ನು ಸಾಯಿಸಿದ ಮಕ್ನಾ ಆನೆ ಕರ್ನಾಟಕಕ್ಕೆ ವಾಪಸ್ ಆಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ನಿಮಗೆ ಫೋನ್ ಮಾಡಿ ಹೇಳಿತ್ತಾ? ಅದು ಸ್ಥಳಾಂತರ ಮಾಡಿದ ಆನೆ ಇಲ್ಲಿಗೆ ಬಂದಿದೆ ಎಂದರೆ ಮತ್ತೆ ಹಿಡಿದು ಸ್ಥಳಾಂತರ ಮಾಡಬೇಕಾ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT