ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಸರು ಗದ್ದೆಯಾದ ಗ್ರಾಮೀಣ ರಸ್ತೆ: 3 ಊರಿನ ನೂರಾರು ಮಂದಿಗೆ ಸಿಗದ ಬಸ್‌ ಸೌಲಭ್ಯ

ಜಾನೇಕೆರೆ ಆರ್. ಪರಮೇಶ್
Published 25 ಜೂನ್ 2024, 6:53 IST
Last Updated 25 ಜೂನ್ 2024, 6:53 IST
ಅಕ್ಷರ ಗಾತ್ರ

ಸಕಲೇಶಪುರ: ಮೂರು ಊರು, ನೂರು ಮನೆ, ಐನೂರು ಮಂದಿ ಇದ್ದರೂ ಈ ಗ್ರಾಮಗಳ ಸಂಪರ್ಕಕ್ಕೆ ಒಂದು ಸರಿಯಾದ ರಸ್ತೆ ಇಲ್ಲ. ಇರುವ ಮಣ್ಣಿನ ರಸ್ತೆ ಕೆಸರು ಗದ್ದೆಯಾಗಿ ವಾಹನಗಳ ಸಂಚಾರ ವಿರಲಿ, ದನಕರುಗಳು ನಡೆದಾಡುವುದಕ್ಕೂ ಯೋಗ್ಯವಾಗಿಲ್ಲ.

ತಾಲ್ಲೂಕು ಕೇಂದ್ರದಿಂದ 19 ಕಿ.ಮೀ. ದೂರವಿರುವ ಕುರುಬತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಕಾಮನಹಳ್ಳಿ, ಬರಲುಕೆರೆ, ಹಾಗೂ ಹೊಂಬೆಟ್ಟ ಗ್ರಾಮಗಳ ಜನರು ಹಾಗೂ ಸಾರ್ವಜನಿಕರು ಈ ಗ್ರಾಮಗಳಿಂದ ಬಂದು ಹೋಗಲು ಡಾಂಬರ್ ರಸ್ತೆ ಇರಲಿ, ಜಲ್ಲಿ ರಸ್ತೆ ಸಹ ಇಲ್ಲ.

ಇರುವ ಕಿರಿದಾದ ಮಣ್ಣಿನ ರಸ್ತೆಯಲ್ಲಿ ಕೆಸರು ನೀರು ತುಂಬಿಕೊಂಡು ಭತ್ತದ ಸಸಿ ನಾಟಿ ಮಾಡುವ ಗದ್ದೆಯಾಗಿದೆ. ಈ ಮೂರು ಗ್ರಾಮಗಳಿಂದ ಸುಮಾರು 100ಕ್ಕೂ ಹೆಚ್ಚು ವಾಸದ ಮನೆಗಳಿವೆ. ಸರ್ಕಾರಿ ಶಾಲೆ, ದೇವಸ್ಥಾನ, ಕಾಫಿ, ಅಡಿಕೆ, ಏಲಕ್ಕಿ ತೋಟಗಳು, ಭತ್ತ ಬೆಳೆಯುವ ಗದ್ದೆಗಳಿಗೆ ಹೋಗಿ ಬರಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. 3 ಕಿ.ಮೀ. ಉದ್ದದ್ದ ಈ ರಸ್ತೆ ಒಂದೆಡೆ ಕಿಷ್ಕಿಂಧೆಯಾಗಿದ್ದು, ಮತ್ತೊಂದೆಡೆ ವಾಹನಗಳು ಓಡಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಗುಂಡಿ ತುಂಬಿದೆ. ಇದುವರೆಗೂ ಬಸ್‌ನ ಸಂಚಾರ ವ್ಯವಸ್ಥೆ ಇಲ್ಲ.

ನಮ್ಮ ಊರುಗಳಿಗೆ ರಸ್ತೆ ಸರಿ ಇಲ್ಲದೇ ಇರುವುದರಿಂದ ಇದುವರೆಗೂ ಬಸ್‌ ಸಂಚಾರವೇ ಇಲ್ಲ. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ನಿತ್ಯ 3 ಕಿ.ಮೀ. ನಡಹಳ್ಳಿಯವರೆಗೆ ನಡೆದುಕೊಂಡು ಹೋಗಿ ಬರಬೇಕಾಗಿದೆ. ಸಮಸ್ಯೆಗೆ ಯಾವ ಜನಪ್ರತಿನಿಧಿಯೂ ಸ್ಪಂದಿಸಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ಕೆ. ಹೂವಣ್ಣ ಹೇಳಿದರು.

ಗೊರೂರಿನಲ್ಲಿ ಹೇಮಾವತಿ ನದಿಗೆ ಅಣೆಕಟ್ಟು ನಿರ್ಮಾಣಕ್ಕೆ ನಮ್ಮ ಗ್ರಾಮ ನಿವಾಸಿಗಳ ನೂರಾರು ಎಕರೆ ಭೂಮಿ ಮುಳುಗಡೆ ಆಗಿದೆ. ಈ ಹೇಮಾವತಿ ಜಲಾಶಯ ಯೋಜನೆ ಅನುದಾನದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ದುರಂತ ಎಂದರೆ ಎಚ್ಆರ್‌ಪಿ ಯೋಜನೆಗೆ ಭೂಮಿ ಮುಳುಗಡೆ ಆಗದೇ ಇರುವ ದೂರದ ಊರುಗಳಿಗೆಲ್ಲ ಈ ಯೋಜನೆಯ ಅನುದಾನ ಬಳಕೆ ಮಾಡಿ ನಮಗೆ ಭಾರೀ ಅನ್ಯಾಯ ಮಾಡಿದ್ದಾರೆ ಎಂದು ಗ್ರಾಮಸ್ಥ ಎನ್‌.ಕೆ. ದೇವರಾಜ್‌ ಹೊಂಬೆಟ್ಟ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮೂರಿನ ರಸ್ತೆ ಡಾಂಬರೀಕರಣಗೊಳಿಸಿ ಅಭಿವೃದ್ಧಿ ಮಾಡಿ ಎಂದು ಹಿಂದಿನ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ, ಸ್ಪಂದಿಸಲಿಲ್ಲ. ಹಾಲಿ ಶಾಸಕ ಸಿಮೆಂಟ್ ಮಂಜು ಅವರಿಗೂ ಮನವಿ ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ ಎನ್ನುತ್ತಾರೆ. ಪ್ರತಿಭಟನೆ ಮಾರ್ಗ ಹಿಡಿಯಬೇಕಾಗುತ್ತದೆ ಎಂದು ಸಂತೋಷ್‌ ಬರ್ಲುಕೆರೆ, ಹೊಂಬೆಟ್ಟ ರಾಕೇಶ್‌, ಬಿ.ಎನ್‌. ಚಂದ್ರಶೇಖರ್ ಎಚ್ಚರಿಸಿದ್ದಾರೆ.

ಇನ್ನೂ ಮಳೆ ಶುರುವಾಗಿಲ್ಲ. ಆಗಲೇ ನಮ್ಮೂರಿನ ರಸ್ತೆ ಕೆಸರು ಗದ್ದೆಯಾಗಿದ್ದು ಕಾಲೇಜಿಗೆ ಹೋಗಲು ಕಷ್ಟವಾಗುತ್ತಿದೆ. ಮಳೆಗಾಲ ಪ್ರಾರಂಭವಾದರೆ ಹೇಗೆ ಎನ್ನುವುದು ಗೊತ್ತಾಗುತ್ತಿಲ್ಲ.
ದೀಪಕ್‌ ಬಿಬಿಎ ವಿದ್ಯಾರ್ಥಿ
ಸಂಪರ್ಕ ರಸ್ತೆ ಹಾಳಾಗಿರುವುದು ನನ್ನ ಗಮನಕ್ಕೆ ಬಂದಿದೆ. ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಆಗುತ್ತಿಲ್ಲ. ಹೇಗಾದರೂ ಮಾಡಿ ರಸ್ತೆ ಅಭಿವೃದ್ಧಿ ಮಾಡಲಾಗುವುದು.
ಸಿಮೆಂಟ್ ಮಂಜು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT