ಬಾಣಾವರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ಪಟ್ಟಣದ ಕನಕ ವೃತ್ತದ ಬಳಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಬಗರ್ ಹುಕುಂ ಸಮಿತಿ ಸದಸ್ಯ ಬಿ.ಎಂ. ಜಯಣ್ಣ ಮಾತನಾಡಿ, ಸಿದ್ದರಾಮಯ್ಯ ನವರು ನಾಡಿನ ಜನಪ್ರಿಯ ಮುಖ್ಯಮಂತ್ರಿಯಾಗಿದ್ದು ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿದ್ದಾರೆ. ಯಾವುದೇ ಕಪ್ಪು ಚುಕ್ಕಿ, ಕಳಂಕ ಇಲ್ಲದ ಅವರು ನೇರ ರಾಜಕಾರಣ ಮಾಡುವುದನ್ನು ಸಹಿಸದೆ ಕೆಲವರು ಅವರ ಮೇಲೆ ಪಿತೂರಿ ನಡೆಸುತ್ತಿರುವುದು ಬೇಸರದ ಸಂಗಂತಿ. ಎಲ್ಲ ಜನಾಂಗದ ಪ್ರೀತಿ ವಿಶ್ವಾಸ ಗಳಿಸಿರುವ ಸಿದ್ದರಾಮಯ್ಯನವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದ ಅಸಾಂವಿಧಾನಿಕ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ರವಿಶಂಕರ್ ಮಾತನಾಡಿ, ಸಿದ್ದರಾಮಯ್ಯನವರ ತೇಜೋವಧೆ ಮಾಡುವ ಉದ್ದೇಶದಿಂದಲೆ ಈ ರೀತಿ ಮಾಡಲಾಗುತ್ತಿದೆ. ನಾಡಿನ ಜನರು ಸಿದ್ದರಾಮಯ್ಯನವರ ಪರವಾಗಿದ್ದು, ಸತ್ಯಕ್ಕೆ ಜಯವಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ಆರ್.ಶ್ರೀಧರ್, ಜಿ.ಕೆ.ಸತೀಶ್, ಕರವೇ ಲಕ್ಷ್ಮೀಶ್, ಸಂಗೊಳ್ಳಿ ರಾಯಣ್ಣ ಸಂಘದ ಅಧ್ಯಕ್ಷ ಭಾಸ್ಕರ್, ಪ್ರಕಾಶ್, ಆಸೀಫ್, ಇಬ್ರಾನ್, ಆರೀಫ್ ಜಾನ್, ಬೀರಪ್ಪ ಇದ್ದರು.