ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣ | ಕೊಲೆ ಪ್ರಕರಣ: 9 ಮಂದಿಗೆ ಜೀವಾವಧಿ ಶಿಕ್ಷೆ

ಕಳೆದ ವರ್ಷ ಜುಲೈನಲ್ಲಿ ನಡೆದಿದ್ದ ಕೊಲೆ: ಇಬ್ಬರಿಗೆ ಎರಡೂವರೆ ವರ್ಷ ಜೈಲು
Published 8 ಮೇ 2024, 13:08 IST
Last Updated 8 ಮೇ 2024, 13:08 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ, ಉಳಿದ ಇಬ್ಬರಿಗೆ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಿ ಮಂಗಳವಾರ ಆದೇಶ ಹೊರಡಿಸಿದೆ. 11 ಅಪರಾಧಿಗಳ ಪೈಕಿ 9 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ನುಗ್ಗೇಹಳ್ಳಿ ಹೋಬಳಿ ಹೊನ್ನಮಾರನಹಳ್ಳಿಯ ಮಾಸ್ತಿಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣದ ಯಾಚೇನಹಳ್ಳಿಯ ಚೇತು, ಮಂಡ್ಯ ಜಿಲ್ಲೆ ಕೆರೆಗೋಡು ಹೋಬಳಿ ಬಿ. ಹೊಸೂರು ಗ್ರಾಮದ ಶಿವಕುಮಾರ, ಹೊಳೆನರಸೀಪುರ ತಾಲ್ಲೂಕು ಉಲಿವಾಲ ಕೊಪ್ಪಲು ಗ್ರಾಮದ ಚೇತು, ಹಾಸನ ತಾಲ್ಲೂಕು ಸಾಲಗಾಮೆ ಹೋಬಳಿ ಆಲದಹಳ್ಳಿಯ ರಾಕೇಶ, ಸಾಲಗಾಮೆ ಹೋಬಳಿ ಅಣಿಗನಹಳ್ಳಿಯ ಸುಮಂತ, ಹಾಸನ ನಗರದ ಎಚ್.ಆರ್. ರಾಹುಲ್, ಹಾಸನ ತಾಲ್ಲೂಕು ಮಂಚಿಗನಹಳ್ಳಿಯ ಹರೀಶ, ಸಾಲಗಾಮೆ ಹೋಬಳಿ ಮಲ್ಲೇನಹಳ್ಳಿಯ ಎಂ.ಎಸ್. ಭರತ್, ಚನ್ನರಾಯಪಟ್ಟಣದ ಕುವೆಂಪುನಗರದ ರಾಘವೇಂದ್ರ ಎಂಬುವವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಶ್ರೀರಂಗಪಟ್ಟಣ ತಾಲ್ಲೂಕು ಹೊಸ ಆನಂದೂರು ಗ್ರಾಮದ ಸಂದೇಶಗೌಡ, ಬೆಂಗಳೂರಿನ ಸದಕುಂಟೆ ಪಾಳ್ಯದ ಗೋಪಿ ಎಂಬುವವರಿಗೆ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಘಟನೆ ವಿವರ: ಕೊಲೆಯಾದ ಮಾಸ್ತಿಗೌಡ ತಮ್ಮ ಗ್ರಾಮದಲ್ಲಿ ಹೊಸದಾಗಿ ಮನೆ ನಿರ್ಮಿಸುತ್ತಿದ್ದು, 2023ರ ಜುಲೈ 4 ರಂದು ಸ್ನೇಹಿತರೊಂದಿಗೆ ಚನ್ನರಾಯಪಟ್ಟಣಕ್ಕೆ ಬಂದು, ಅಂಗಡಿಯಲ್ಲಿ ಗ್ರಾನೈಟ್ ಖರೀದಿಸುತ್ತಿದ್ದರು.

ಆ ಸಂದರ್ಭದಲ್ಲಿ ಅಪರಾಧಿಗಳಾದ ಶಿವಕುಮಾರ, ಉಲಿವಾಲ ಚೇತು, ರಾಕೇಶ್, ಸುಮಂತ ಸೇರಿ ಇತರರು ನಡುರಸ್ತೆಯಲ್ಲಿ ಮಾಸ್ತಿಗೌಡ ಅವರನ್ನು ಲಾಂಗ್ ಮತ್ತು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದರು. ಯಾಚೇನಹಳ್ಳಿಯ ಚೇತು ಎಂಬಾತನನ್ನು ಗೂಂಡಾ ಕಾಯ್ದೆಯಡಿ ಕಲಬುರ್ಗಿ ಜಿಲ್ಲೆಗೆ ಗಡಿಪಾರು ಮಾಡಲಾಗಿತ್ತು. ಚೇತು, ಜೈಲಿನಲ್ಲಿ ಇದ್ದುಕೊಂಡು ಮಾಸ್ತಿಗೌಡನ ಕೊಲೆಗೆ ಸಂಚು ರೂಪಿಸಿದ್ದ. ಈ ಕುರಿತು ತನಿಖೆ ನಡೆಸಿದ್ದ ಚನ್ನರಾಯಪಟ್ಟಣದ ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಎಂ. ವಸಂತ್, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ 4 ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ವಿ.ಎನ್. ಜಗದೀಶ್, 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. 11 ಅಪರಾಧಿಗಳಿಗೆ ತಲಾ ₹ 25 ಸಾವಿರದಂತೆ ಒಟ್ಟು ₹ 2.75 ಲಕ್ಷ ದಂಡ ವಿಧಿಸಲಾಗಿದ್ದು, ದಂಡದ ಹಣದಲ್ಲಿ ಮಾಸ್ತಿಗೌಡರ ಸೋದರಿಗೆ ₹ 1 ಲಕ್ಷ ಪರಿಹಾರ ನೀಡಬೇಕು. ಉಳಿದ ₹ 1.75 ಲಕ್ಷ ಸರ್ಕಾರಕ್ಕೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರದ ಪರವಾಗಿ ಅಭಿಯೋಜಕ ಶ್ರೀನಿವಾಸ್ ವಾದ ಮಂಡಿಸಿದ್ದರು. ಡಿವೈಎಸ್‍ಪಿ ರವಿಪ್ರಸಾದ್ ನ್ಯಾಯಾಲಯದ ವಿಚಾರಣೆಯ ಮೇಲ್ವಿಚಾರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT