ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಕ್ಷುಕನ ಹತ್ಯೆ: ಮೂವರ ಬಂಧನ

ಚಿಕ್ಕಮಗಳೂರಿನಲ್ಲಿ ಹತ್ಯೆ, ಅರಕೆರೆ ಗ್ರಾಮದಲ್ಲಿ ಮೃತದೇಹ ಸುಟ್ಟು ಹಾಕಿದ ಪ್ರಕರಣ
Last Updated 13 ಅಕ್ಟೋಬರ್ 2020, 13:50 IST
ಅಕ್ಷರ ಗಾತ್ರ

ಹಾಸನ: ಚಿಕ್ಕಮಗಳೂರಿನಲ್ಲಿ ಭಿಕ್ಷುಕನ ‌ಹತ್ಯೆಗೈದು ಅರಸೀಕೆರೆ ತಾಲ್ಲೂಕಿನ ಅರಕೆರೆ ಗ್ರಾಮದ ಬಳಿ ಮೃತದೇಹ ಸುಟ್ಟು ಹಾಕಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬೇಲೂರು ಹಾಗೂ ಬಾಣಾವರ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ಲಕ್ಯ ಗ್ರಾಮದ ಶ್ರೀಕಾಂತ್‌ (26), ಚೇತನ್‌ (29), ಮೋಹನ್‌ನನ್ನು (29) ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಮಾರುತಿ ಎಸ್ಟೀಮ್‌ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ ಗೌಡ ಮಂಗಳವಾರ ತಿಳಿಸಿದರು.

ಜ.3 ರಂದು ಶ್ರೀಕಾಂತ್‌ ನ ಅಣ್ಣನ ಮಗನ ನಾಮಕರಣದ ಪಾರ್ಟಿ ಮುಗಿಸಿ ಮೂವರು ಸ್ನೇಹಿತರು, ಮದ್ಯದ ಅಮಲಿನಲ್ಲಿ ರಾತ್ರಿ ಮಾರುತಿ ಎಸ್ಟೀಮ್‌ ಕಾರಿನಲ್ಲಿ ಲಕ್ಯ ಬಸ್‌ ನಿಲ್ದಾಣದಲ್ಲಿ ಬಳಿ ಬಂದಿದ್ದಾರೆ. ಅಲ್ಲಿ ಮಲಗಿದ್ದ ಭಿಕ್ಷುಕನ ಜತೆ ಗಲಾಟೆ ಮಾಡಿದಾಗ ಆತ ಶ್ರೀಕಾಂತ್‌ ಕೈ ಕಚ್ಚಿ ಓಡಿದ್ದಾನೆ. ಬಳಿಕ ಈ ಮೂವರು ಆತನನ್ನು ಬೆನ್ನಟ್ಟಿ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಮೃತದೇಹವನ್ನು ಅರಸೀಕೆರೆ ತಾಲ್ಲೂಕಿನ ಬಾಣಾವರ ಜಾವಗಲ್‌ ಮುಖ್ಯ ರಸ್ತೆಯ ಅರಕೆರೆ ಗ್ರಾಮದ ಜಮೀನಿನ ಬಳಿ ಪೆಟ್ರೋಲ್‌ ಸುರಿದು ಸುಟ್ಟುಹಾಕಿದ್ದರು ಎಂದು ಎಸ್‌ಪಿ ವಿವರಿಸಿದರು.

ವಿವೇಕ್‌ ಎಂಬುವರು ತಮ್ಮ ಜಮೀನಿಗೆ ಹೋಗುವ ಮೇಳೆ ಮೃತದೇಹ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ದೂರು ನೀಡಿದರು. ಪೊಲೀಸ್‌ ಬಾತ್ಮಿದಾರರು, ಸಾರ್ವಜನಿಕರು ನೀಡಿದ ಸುಳಿವು ಹಾಗೂ ಗಾಳಿ ಸುದ್ದಿ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಯಿತು. ಮೃತ ಭಿಕ್ಷುಕನ ವಿವರ ಗೊತ್ತಾಗಿಲ್ಲ ಎಂದು ಹೇಳಿದರು. ಆರೋಪಿ ಪತ್ತೆಗೆ ಶ್ರಮಿಸಿದ ಅರಸೀಕೆರೆ ಉಪವಿಭಾಗ ಡಿವೈಎಸ್‌ಪಿ ಎಲ್‌.ನಾಗೇಶ್‌, ಬೇಲೂರು ಸಿಪಿಐಸಿದ್ಧರಾಮೇಶ್ವರ್‌, ಪಿಎಸ್‌ಐ ಅಜಯ ಕುಮಾರ್‌, ಸಿಬ್ಬಂದಿಗಳಾದ ಜಮ್ರುದ್‌ ಖಾನ್‌, ಶಶಿಕುಮಾರ್‌,
ರವೀಶ್‌, ಪುನಿತ್‌, ರಘು, ಚಾಲಕ ಸೋಮಶೇಖರ್‌ ಮತ್ತು ಎಸ್‌ಪಿ ಕಚೇರಿಯ ಪೀರ್‌ ಖಾನ್‌ ಅವರಿಗೆ ಎಸ್ಪಿ ಪ್ರಶಂಸ ಪತ್ರ ನೀಡಿದರು.

ಗೋಷ್ಠಿಯಲ್ಲಿ ಹೆಚ್ಚುವರಿ ಪೊಲಿಸ್‌ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ ಇದ್ದರು.

ಕ್ಷುಲ್ಲಕ ಕಾರಣಕ್ಕೆ ಹತ್ಯೆ; ಚಾಲಕ ಬಂಧನ
ಗೊರೂರು ಪೊಲೀಸ್‌ ಠಾಣೆ ವ್ಯಾಪ್ತಿಯ ದೊಡ್ಡಬಾಗನಹಳ್ಳಿ ಕ್ರಾಸ್‌ ಬಳಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ ಮಾಡಿದ್ದ ಕೊಡಗು ಜಿಲ್ಲೆಯ ಶನಿವಾರಸಂತೆ ಹೋಬಳಿಯ ಅರೆಹೊಸೂರು ಗ್ರಾಮದ ನಿವಾಸಿ, ಚಾಲಕ ಎಚ್‌.ಜಿ. ಮೋಹನ (28) ನನ್ನು ಹಾಸನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಜವೇನಹಳ್ಳಿ ಕೊಪ್ಪಲು ಗ್ರಾಮದ ಸ್ವಾಮೀಗೌಡ ಅವರ ಮಗ ದಿನೇಶ್‌ ನ ಮೇಲೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಹಾಸನ ಎಪಿಎಂಸಿಯಲ್ಲಿ ಕೂಲಿ ಮತ್ತು ಚಾಲಕ ವೃತ್ತಿ ಮಾಡುತ್ತಿರುವ ಮೋಹನ್ ತನ್ನ ಕೆಲಸ ಮುಗಿಸಿ, ಸೆ.2 ರ ರಾತ್ರಿ 10 ಗಂಟೆ ಸಮಯದಲ್ಲಿ ಆಟೊದಿಂದ ಬಂದಿಳಿದು ತನ್ನ ಮನೆಗೆ ಹೋಗುತ್ತಿದ್ದ ದಿನೇಶ್‌ ಜತೆ ಜಗಳವಾಡಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆರೋಪಿಯನ್ನು ಮಂಗಳವಾರ ಬೆಳಿಗ್ಗೆ ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿಯ ಬಸ್‌ ನಿಲ್ದಾಣದ ಬಳಿ ಬಂಧಿಸಲಾಗಿದೆ ಎಂದು ಎಸ್ಪಿ ಶ್ರೀನಿವಾಸ್‌ ಗೌಡ ತಿಳಿಸಿದರು.

ಹಾಸನ ಗ್ರಾಮಾಂತರ ವೃತ್ತದ ಸಿಪಿಐ ಪಿ.ಸುರೇಶ್‌, ಗೊರೂರು ಪೊಲೀಸ್‌ ಠಾಣೆಯ ಪಿಎಸ್‌ಐ ಬಿ.ಸಿ. ಜಗದೀಶ್‌, ಸಿಬ್ಬಂದಿಗಳಾದ ರವಿಕುಮಾರ್‌, ಸುಬ್ರಹ್ಮಣ್ಯ, ಅರುಣಕುಮಾರ, ಅನಿಲ್‌ ಕುಮಾರ್ ಶ್ರಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT