ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎನ್ಆರ್‌ಐ ಕೋಟಾ: ಆಕ್ಷೇಪ

Published 26 ಮೇ 2024, 14:05 IST
Last Updated 26 ಮೇ 2024, 14:05 IST
ಅಕ್ಷರ ಗಾತ್ರ

ಹಾಸನ: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ಅಳವಡಿಸಲು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ನಡೆಸಿರುವ ಚಿಂತನೆಯನ್ನು ಎಐಡಿಎಸ್ಒ ಜಿಲ್ಲಾ ಸಹ ಸಂಚಾಲಕಿ ಚೈತ್ರಾ ಖಂಡಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಆರ್ ಐ ಕೋಟಾಗೆ ಅನುಮತಿ ನೀಡುವಂತೆ ಎನ್‌ಎಂಸಿ ( ನ್ಯಾಷನಲ್ ಮೆಡಿಕಲ್ ಕಮಿಷನ್) ಗೆ ಕೋರಿದೆ. ಈ ನಡೆಯು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಖಾಸಗೀಕರಣದ ಮಹಾದ್ವಾರಗಳನ್ನು ತೆರೆಯುವುದರಿಂದ ಎಐಡಿಎಸ್ಒ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.

2018ರಲ್ಲಿ ಎನ್‌ಆರ್‌ಐ ಕೋಟಾದ ಪ್ರಸ್ತಾಪ ಬಂದಾಗ ಕರ್ನಾಟಕದ ವಿದ್ಯಾರ್ಥಿಗಳು ಯಶಸ್ವಿಯಾಗಿ ಅದನ್ನು ವಿರೋಧಿಸಿ ಹಿಮ್ಮೆಟ್ಟಿದ್ದರು. ಈಗಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕವು ವರ್ಷಕ್ಕೆ ₹80ಸಾವಿರದಷ್ಟಿದ್ದು, ಇದನ್ನೇ ಭರಿಸುವುದು ಬಡ ವಿದ್ಯಾರ್ಥಿಗಳು ಕಷ್ಟಕರವಾಗಿದೆ. ಹೀಗಿರುವಾಗ, ಎನ್‌ಆರ್‌ಐ ಕೋಟಾದ ಅಳವಡಿಕೆಯು ಇನ್ನಷ್ಟು ಶುಲ್ಕ ಹೆಚ್ಚಳಕ್ಕೆ ಹಸಿರು ನಿಶಾನೆ ನೀಡುತ್ತದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಅವಕಾಶಗಳನ್ನು ಕಿತ್ತುಕೊಳ್ಳುತ್ತದೆ ಎಂದು ಆಕ್ಷೇಪಿಸಿದ್ದಾರೆ.

ಸರ್ಕಾರಿ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ಅಳವಡಿಸುವುದು ಪ್ರಜಾತಾಂತ್ರಿಕ ಶಿಕ್ಷಣದ ಮೇಲಿನ ನೇರ ದಾಳಿಯಾಗಿದೆ. ಇದು ಕ್ಯಾಂಪಸ್‌ನಲ್ಲಿ ತಾರತಮ್ಯ ಉಂಟು ಮಾಡುತ್ತದೆ. ವೈದ್ಯಕೀಯ ಶಿಕ್ಷಣವು ಒಂದು ವೇಳೆ ಪ್ರಜಾತಾಂತ್ರಿಕ ಗುಣಲಕ್ಷಣವನ್ನು ಕಳೆದುಕೊಂಡರೆ, ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಸಮರ್ಥ ವೈದ್ಯರು ಸೃಷ್ಟಿಯಾಗದೇ, ಇಡೀ ದೇಶದ ವೈದ್ಯಕೀಯ ವ್ಯವಸ್ಥೆ ಬಾಧಿತವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಂಸ್ಥೆಯನ್ನು ನಡೆಸಲು ಹಣದ ಕೊರತೆ ಇದೆ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಈ ರೀತಿ ಶುಲ್ಕ ಹೆಚ್ಚಳಕ್ಕೆ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಇದರಿಂದ ಕರ್ನಾಟಕದ ಯಾವ ಬಡ ವಿದ್ಯಾರ್ಥಿಯೂ ವೈದ್ಯರಾಗಲು ಸಾಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT