ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹8.80 ಲಕ್ಷ ವರ್ಗಾಯಿಸಿಕೊಂಡು ಆನ್‌ಲೈನ್‌ ವಂಚನೆ

Published 7 ಜೂನ್ 2024, 14:28 IST
Last Updated 7 ಜೂನ್ 2024, 14:28 IST
ಅಕ್ಷರ ಗಾತ್ರ

ಹಾಸನ: ಟಾಸ್ಕ್‌ಗಳನ್ನು ಪೂರೈಸುವ ಮೂಲಕ ಹೆಚ್ಚಿನ ಹಣ ನೀಡುವುದಾಗಿ ಹೇಳಿ ಆನ್‌ಲೈನ್‌ ಮೂಲಕ ₹8.80 ಲಕ್ಷ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಕುರಿತು ನಗರದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಪ್ರವೀಣ್‌ ಎಂಬುವವರ ಫೇಸ್‌ಬುಕ್‌ನಲ್ಲಿ ಲಿಂಕ್‌ ಬಂದಿದ್ದು, ಅದನ್ನು ಒತ್ತಿದಾಗ ವಾಟ್ಸ್‌ಆ್ಯಪ್‌ ತೆರೆದುಕೊಂಡಿದೆ. ಅಲ್ಲಿಂದ ಟೆಲಿಗ್ರಾಂ ಆ್ಯಪ್‌ ತೆರೆದುಕೊಂಡಿದ್ದು, ಅದರಲ್ಲಿ ನೀಡಿದ್ದ ಟಾಸ್ಕ್‌ಗಳಿಗೆ  ಪ್ರವೀಣ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಕಿದ ಹಣಕ್ಕೆ ಹೆಚ್ಚಿನ ಹಣ ಹಾಕುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿಗಳು ಪ್ರವೀಣ್‌ ಅವರ ಎರಡು ಬ್ಯಾಂಕ್‌ ಖಾತೆಗಳಿಂದ ಒಟ್ಟು ₹8.80 ಲಕ್ಷ ವರ್ಗಾಯಿಸಿಕೊಂಡಿದ್ದಾರೆ. ಆದರೆ, ಹೆಚ್ಚಿನ ಹಣ ನೀಡದೇ ಮೋಸ ಮಾಡಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

₹1.49 ಲಕ್ಷ ಮೌಲ್ಯದ ಮದ್ಯ ಕಳವು

ಹಾಸನ: ಹಿರೀಸಾವೆ ಪೊಲೀಸ್‌ ಠಾಣೆ ವ್ಯಾಪ್ತಿಯ ಮದ್ಯದ ಅಂಗಡಿಗೆ ಕನ್ನ ಹಾಕಿರುವ ಕಳ್ಳರು ₹1.41 ಲಕ್ಷ ಮೌಲ್ಯದ ಮದ್ಯ ಕಳವು ಮಾಡಿದ್ದಾರೆ.

ಚನ್ನರಾಯಪಟ್ಟಣದ ಎನ್.ಚಂದ್ರಶೇಖರ್ ಅವರು ಹಿರಿಸಾವೆ ಠಾಣೆ ವ್ಯಾಪ್ತಿಯ ಎಂಎಸ್‌ಐಎಲ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಜೂನ್‌ 3ರಂದು ರಾತ್ರಿ ಬಾಗಿಲು ಹಾಕಿಕೊಂಡು ಹೋಗಿದ್ದರು. ಜಿಲ್ಲಾಧಿಕಾರಿ ಆದೇಶದಂತೆ ಜೂನ್‌ 4 ರಂದು ಮಳಿಗೆ ಬಂದ್‌ ಮಾಡಲಾಗಿತ್ತು. ಜೂನ್‌ 5 ರಂದು ಬಾಗಿಲನ್ನು ತೆರೆಯಲು ನೋಡಿದಾಗ, ಮಳಿಗೆಯ ಶೆಟರ್‌ ಮುರಿದು, ಸಿಸಿಟಿವಿ ಕ್ಯಾಮೆರಾ ಹಾಗೂ ಡಿವಿಆರ್ ನಾಶಪಡಿಸಲಾಗಿತ್ತು. ಮಳಿಗೆಯಲ್ಲಿ ದಾಸ್ತಾನು ಮಾಡಿಟ್ಟಿದ್ದ ಮದ್ಯವನ್ನು ಕಳವು ಮಾಡಲಾಗಿದೆ. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ಕಳವು

ಹಾಸನ: ನಗರದ ಚನ್ನಪಟ್ಟಣ ಬಡಾವಣೆಯಲ್ಲಿ ಹೆಂಚು ತೆಗೆದು ಮನೆಯೊಳಗೆ ನುಗ್ಗಿರುವ ಕಳ್ಳರು, ಚಿನ್ನಾಭರಣ ಹಾಗೂ ಹಿತ್ತಾಳೆ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ.

ಶ್ವೇತಾ ಎಂಬುವವರ ಅತ್ತೆ ಕಾವೇರಮ್ಮ ಅವರು ದೇವಾಂಗ ಬೀದಿಯಲ್ಲಿರುವ ಹಳೆಯ ಮನೆಯಲ್ಲಿ ವಾಸವಿದ್ದರು. 2 ವರ್ಷಗಳ ಹಿಂದೆ ಅವರು ಮೃತಪಟ್ಟಿದ್ದರಿಂದ, ಮನೆಯಲ್ಲಿದ್ದ ಅತ್ತೆ ಚಿನ್ನ ಮತ್ತು ಬೆಳ್ಳಿಯ ವಡವೆಗಳು ಹಾಗೂ ಹಿತ್ತಾಳೆಯ ಪಾತ್ರೆಗಳು ಹಾಗೂ ಮನೆಯನ್ನು ಆಗಾಗ ಸ್ವಚ್ಛ ಮಾಡಿಕೊಂಡು ಬೀಗ ಹಾಕಿಕೊಂಡು ಬರುತ್ತಿದ್ದರು. ಜೂನ್‌ 5 ರಂದು ರಾತ್ರಿಯ ಹೆಂಚುಗಳನ್ನು ತೆಗೆದು ಮನೆಯ ಒಳಗೆ ಪ್ರವೇಶಿಸಿರುವ ಕಳ್ಳರು, ಬೀರುವಿನಲ್ಲಿ ಇಟ್ಟಿದ್ದ ₹1.08 ಲಕ್ಷ ಮೌಲ್ಯದ ಚಿನ್ನಾಭರಣ, ₹ 30 ಸಾವಿರ ಮೌಲ್ಯದ ಬೆಳ್ಳಿಯ ಆಭರಣ ಹಾಗೂ ₹5 ಸಾವಿರ ಮೌಲ್ಯದ ಹಿತ್ತಾಳೆಯ ಪಾತ್ರೆ ಸೇರಿದಂತೆ ₹1.41ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ.

ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT