ಪಾರ್ಶ್ವವಾಯು: ಹೆಚ್ಚಿದ ಸಾವಿನ ಸಂಖ್ಯೆ

7
ರಾಜಗೆರೆ ಪರಿಶಿಷ್ಟ ಕಾಲೊನಿಯಲ್ಲಿ ಹಲವರಿಗೆ ಪಾರ್ಶ್ವವಾಯು ರೋಗ

ಪಾರ್ಶ್ವವಾಯು: ಹೆಚ್ಚಿದ ಸಾವಿನ ಸಂಖ್ಯೆ

Published:
Updated:
Deccan Herald

ಹಳೇಬೀಡು: ಸಮೀಪದ ರಾಜಗೆರೆ ಗ್ರಾಮದ ಪರಿಶಿಷ್ಟ ಜನಾಂಗದ ಕಾಲೊನಿಯಲ್ಲಿ ಪಾರ್ಶ್ವವಾಯು ಕಾಯಿಲೆಯಿಂದ ಒಂದು ವರ್ಷದಲ್ಲಿ 6 ಮಂದಿ ಮೃತಪಟ್ಟಿದ್ದು, ನಾಲ್ವರು ನರಳುತ್ತಿದ್ದಾರೆ.

ಸಣ್ಣಪ್ರಮಾಣದಲ್ಲಿ ಪಾರ್ಶ್ವವಾಯು ಕಾಣಿಸಿಕೊಂಡ 11 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆದರೂ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ಏರಿಕೆಯಾಗುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಗ್ರಾಮದಲ್ಲಿ ಸುಮಾರು 800 ಜನಸಂಖ್ಯೆ ಇದೆ. 50ಕ್ಕೂ ಹೆಚ್ಚುಮಂದಿ ಕೈಕಾಲು, ಕೀಲು ನೋವಿನಿಂದ ನರಳುತ್ತಿದ್ದಾರೆ. ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ನೀರಿನಲ್ಲಿ ಫ್ಲೋರೈಡ್‌ ಅಂಶ ಅಧಿಕವಾಗಿದೆ. ಚರಂಡಿಗಳಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಇದು ಸಹ ಗ್ರಾಮದಲ್ಲಿ ರೋಗ ಹರಡಲು ಕಾರಣವಾಗಿರಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ.

ಕಾಯಿಲೆ ಪೀಡಿತರು ಹಾಸನ, ಚಿಕ್ಕಮಗಳೂರು ಸೇರಿದಂತೆ ಇತರೆಡೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ಮಂದಿ ನಾಟಿ ವೈದ್ಯ ಪದ್ಧತಿ ಮೊರೆ ಹೋಗಿದ್ದಾರೆ. ಹೀಗಾಗಿ ಅಡಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಪಾರ್ಶ್ವವಾಯು ಕಾಯಿಲೆಗೆ ತುತ್ತಾದವರು ಚಿಕಿತ್ಸೆ ಪಡೆದಿಲ್ಲ. ತಿಂಗಳಿಗೆ ಒಬ್ಬರಿಗಾದರೂ ಪಾರ್ಶ್ವವಾಯು ತಗುಲುತ್ತಿದೆ. ಈ ಕುರಿತು ಆರೋಗ್ಯ ಇಲಾಖೆ ಗಮನ ಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

‘ಗ್ರಾಮವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದೇವೆ. ಬೇರೆಡೆ ಕೂಲಿ ಕೆಲಸ ಮಾಡಿ ಬದುಕಬೇಕಿದೆ’ ಎಂದು ಮುಖಂಡ ದೇವರಾಜು ಹೇಳುತ್ತಾರೆ.

‘ಸ್ಟ್ರೋಕ್‌ ಅಂಟು ರೋಗವಲ್ಲ. ರಕ್ತದ ಒತ್ತಡದಿಂದ ನರಳುತ್ತಿರುವವರು ಸಕಾಲಕ್ಕೆ ಮಾತ್ರೆ ತೆಗೆದುಕೊಳ್ಳದಿದ್ದರೆ ಸ್ಟ್ರೋಕ್‌ ತಗುಲುವ ಸಾಧ್ಯತೆ ಇರುತ್ತದೆ. ಆಹಾರದಿಂದ ಈ ಕಾಯಿಲೆ ಬರುವುದಿಲ್ಲ. ರಾಜಗೆರೆ ಗ್ರಾಮದಲ್ಲಿ ಹೆಚ್ಚು ಮಂದಿಗೆ ರೋಗ ತಗುಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅಡಗೂರು ವೈದ್ಯಾಧಿಕಾರಿ ಡಾ.ಗಗನ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !