ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆನ್‌ಡ್ರೈವ್‌ ಪ್ರಕರಣ | ಸಿಡಿ ಶಿವಣ್ಣ ಹಿಡಿತದಲ್ಲಿ ಎಸ್‌ಐಟಿ: ಆರೋಪ

Published 23 ಮೇ 2024, 13:50 IST
Last Updated 23 ಮೇ 2024, 13:50 IST
ಅಕ್ಷರ ಗಾತ್ರ

ಹಾಸನ: ಎಸ್ಐಟಿ ತನಿಖಾ ತಂಡ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹಿಡಿತದಲ್ಲಿದ್ದು, ಪೆನ್ ಡ್ರೈವ್ ಅಶ್ಲೀಲ ವಿಡಿಯೋ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಸಿಡಿ ಶಿವಣ್ಣ ಅವರ ಕೈ ಕೆಳಗೆ ಈ ಸಂಸ್ಥೆ ಬರುವುದರಿಂದ ನ್ಯಾಯ ಸಿಗಲ್ಲ ತನಿಖೆ ಸರಿಯಾಗಿ ಆಗಲ್ಲ ಎಂದು ದೂರಿದರು.

‘ಮುಖ್ಯಮಂತ್ರಿಗಳು ಎಲ್ಲೋ ಒಂದು ಕಡೆ ಅಡಿಯಾಳಾಗಿ ಡಿ.ಕೆ. ಶಿವಕುಮಾರ್ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬ ಅನುಮಾನವಿದೆ. ಗೃಹ ಸಚಿವರೂ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದು ದೂರಿದರು.

‘ಪೆನ್‌ಡ್ರೈವ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಕಾರ್ತಿಕ್‌ನನ್ನು ತಮ್ಮ ಬಳಿಯೇ ಇಟ್ಟುಕೊಂಡು ಹುನ್ನಾರ ನಡೆಸುತ್ತಿದ್ದಾರೆ ಎಂಬ ಅನುಮಾನ ಇದೆ. ಮೊಬೈಲ್‌ನಿಂದ ವಿಡಿಯೋ, ಫೋಟೋ ಕದ್ದಿರುವ ಕಾರ್ತಿಕ್‌ನನ್ನು ಇದುವರೆಗೂ ಬಂಧಿಸಿಲ್ಲ. ಇದರಿಂದ ಎಸ್‌ಐಟಿ ಮೇಲೆ‌ ನಮಗೆ ಅನುಮಾನ ಮೂಡುತ್ತಿದೆ’ ಎಂದರು.

‘ಪೊಲೀಸ್‌ಗೆ ಸಿಗದ ವೀರಪ್ಪನ್, ನಕ್ಕೀರನ್ ಪತ್ರಿಕೆಯ ಪತ್ರಕರ್ತರೊಬ್ಬರಿಗೆ ಮಾತ್ರ ಸಿಗುತ್ತಿದ್ದರು. ಅದೇ ರೀತಿ ಕಾರ್ತಿಕ್ ಒಂದು ಮಾಧ್ಯಮಕ್ಕೆ ಮಾತ್ರ ಸಿಗುತ್ತಾರೆ. ಎಸ್‌ಐಟಿಗೆ ಮಾತ್ರ ಸಿಗಲ್ಲ. ದೇವರಾಜೇಗೌಡರು ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ ಮಾಡಿದರು. ಆಡಿಯೋಗಳನ್ನು ಬಿಡುಗಡೆ ಮಾಡಿದರು. ಈ ಕಾರಣಕ್ಕಾಗಿ ದೇವರಾಜೇಗೌಡರ ಧ್ವನಿಯನ್ನು ಅಡಗಿಸಲು ಇಲ್ಲಸಲ್ಲದ ಪ್ರಕರಣ ಹಾಕಿಸಿ ಜೈಲಿಗೆ ಕಳುಹಿಸಿದ್ದಾರೆ’ ಎಂದು ಆರೋಪಿಸಿದರು.

‘ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಕೇಳಿ ಬಂದಿದ್ದು ಕೂಡಲೇ ಅವರ ರಾಜೀನಾಮೆ ಪಡೆಯಬೇಕು. ಅವರ ಮೇಲೆಯೂ ಎಸ್‌ಐಟಿ ತನಿಖೆ ನಡೆಸಲಿ’ ಎಂದು ಆಗ್ರಹಿಸಿದರು.

‘ಎಚ್.ಡಿ.ರೇವಣ್ಣ ಅವರಿಗೆ ಎರಡು ಪ್ರಕರಣಗಳಲ್ಲಿ ಜಾಮೀನು ಸಿಕ್ಕಿರುವುದು ನಮಗೆ, ಪಕ್ಷದ ಕಾರ್ಯಕರ್ತರಿಗೆ ಸಮಾಧಾನ ತಂದಿದೆ. ಆದರೆ ಈ ಪ್ರಕರಣಗಳಿಂದ ರೇವಣ್ಣ ಅವರು ಕ್ಲೀನ್ ಚಿಟ್ ಪಡೆದ ನಂತರ ನಮಗೆ ಖುಷಿ ಆಗುತ್ತದೆ’ ಎಂದರು.

‘ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ರೇವಣ್ಣ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು, ದೇವರ ದಯೆಯಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

‘ಪೆನ್‌ಡ್ರೈವ್‌ ಪ್ರಕರಣ ರಾಜ್ಯದಾದ್ಯಂತ ಸುದ್ದಿಯಾದರೂ ಮಹಿಳಾ ಆಯೋಗ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಲಿಲ್ಲ. ಕೂಡಲೇ ಈ ಸಂಬಂಧ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಪೆನ್‌ಡ್ರೈವ್‌ ವಿತರಕರು, ನಿರ್ಮಾಪಕರು ಯಾರು ಎಂದು ಕಂಡುಹಿಡಿದು ಸಂತ್ರಸ್ತೆಯರಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್ ಮುಖಂಡ ಜಯರಾಂ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಳ್ಳಿ ನಾಗರಾಜ್, ಕ್ರಾಂತಿ ಪ್ರಸಾದ್ ತ್ಯಾಗಿ, ರಘು ಹೊಂಗೆರೆ ಇದ್ದರು‌‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT