ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2 ಗ್ರಾ.ಪಂ.ಗೆ ಒಂದು ಪಬ್ಲಿಕ್ ಶಾಲೆ: ಸಚಿವ ಮಧು ಬಂಗಾರಪ್ಪ

ರಾಜ್ಯದಲ್ಲಿ 600 ಶಾಲೆ ತೆರೆಯಲು ಚಿಂತನೆ
Published 28 ನವೆಂಬರ್ 2023, 14:08 IST
Last Updated 28 ನವೆಂಬರ್ 2023, 14:08 IST
ಅಕ್ಷರ ಗಾತ್ರ

ಹಾಸನ: ‘ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಪ್ರತಿ ಶಾಸಕರಿಗೆ 5 ರಿಂದ 6 ಶಾಲೆಯಂತೆ 600 ಶಾಲೆಗಳನ್ನು ತೆರೆಯುವ ಕುರಿತು ಚಿಂತಿಸಲಾಗಿದೆ. 6ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ 2 ಗ್ರಾಮ ಪಂಚಾಯಿತಿಗೆ ಒಂದರಂತೆ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯುವ ಕುರಿತು ಚಿಂತನೆ ಇದೆ’ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ 8,500 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದ್ದು, 3500 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಇದೇ ರೀತಿ ಹಂತ ಹಂತವಾಗಿ ಶಾಲೆಗಳ ಅಭಿವೃದ್ಧಿ ಮಾಡಲಾಗುವುದು. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಮಕ್ಕಳಿಗೆ ಸಂಗೀತ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯು ಮಾಡಲಾಗುವುದು’ ಎಂದು ತಿಳಿಸಿದರು.

‘ಈಗಾಗಲೇ ಸರ್ಕಾರದಿಂದ ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆ ಎರಡು ಮೊಟ್ಟೆ ವಿತರಿಸಲಾಗುತ್ತಿದ್ದು, ಹಾಲಿನ ಜೊತೆಗೆ ರಾಗಿ ಮಾಲ್ಟ್‌ ಸಹ ನೀಡುವ ಬಗ್ಗೆ ಚಿಂತನೆ ನಡೆದಿದೆ’ ಎಂದರು.

‘ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ದುರಸ್ತಿ ಮಾಡುವ ಬದಲು ಹೊಸದಾಗಿ ಕಟ್ಟುವ ಅಥವಾ ಬೇರೆ ರೀತಿಯಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿರುವುದಾಗಿ’ ಹೇಳಿದ ಅವರು, ‘ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಹಿಂದೆ ಬೀಳುವುದಿಲ್ಲ. ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರ ನೇಮಕಾತಿ ನಡೆಯುತ್ತಿದ್ದು, ಶಾಲೆಯ ವಾತಾವರಣ ಉತ್ತಮಗೊಳಿಸುವ ನಿಟ್ಟಿನಲ್ಲಿಯೂ ಇಲಾಖೆ ಕ್ರಮ ಕೈಗೊಳ್ಳುತ್ತಿದೆ’ ಎಂದರು.

‘ಜನರು ಬಯಸಿದಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸುವ ಕೆಲಸವನ್ನು ಮಾಡಿದೆ. ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದ್ದು, ಉತ್ತಮ ಕೆಲಸ ಮಾಡಲು ಕಾಲಾವಕಾಶ ನೀಡಬೇಕು’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

 ‘ಗ್ಯಾರಂಟಿ ಯೋಜನೆ ಜಾರಿ ಭರದಲ್ಲಿ ಶಿಕ್ಷಣ ಇಲಾಖೆಯನ್ನು ಕುಂಠಿತ ಮಾಡುವ ಯಾವುದೇ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಶಾಸಕ ಕೆ.ಎಂ. ಶಿವಲಿಂಗೇಗೌಡ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ, ವಕ್ತಾರ ದೇವರಾಜೇಗೌಡ, ಪಟೇಲ್‌ ಶಿವಪ್ಪ, ಬನವಾಸೆ ರಂಗಸ್ವಾಮಿ, ರಾಜ್ಯಸಭಾ ಮಾಜಿ ಸದಸ್ಯ ಎಚ್‌.ಕೆ. ಜವರೇಗೌಡ, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ತಾರಾಚಂದನ್‌, ಎಚ್‌.ಪಿ. ಮೋಹನ್‌ ಇದ್ದರು.

ಡಿ.ಕೆ. ಶಿವಕುಮಾರ್ ಅವರ ವಿರುದ್ಧದ ತನಿಖೆ ವಾಪಸ್ ಪಡೆಯುವ ಬಗ್ಗೆ ಎಲ್ಲ ಸಚಿವರು ತೀರ್ಮಾನ ಕೈಗೊಂಡಿದ್ದೇವೆ. ಬಸನಗೌಡ ಪಾಟೀಲ ಯತ್ನಾಳ್ ನ್ಯಾಯಾಲಯಕ್ಕೆ ಹೋಗಿರುವುದು ಅವರ ವೈಯಕ್ತಿಕ.  
-ಮಧು ಬಂಗಾರಪ್ಪ ಸಚಿವ

‘37 ಆದರೂ ಅಚ್ಚರಿ ಇಲ್ಲ’

‘ಬಿಜೆಪಿ ನಾಯಕರು ಕೇವಲ ಭಾವನಾತ್ಮಕವಾಗಿ ಜನರನ್ನು ಸೆಳೆದು ಚುನಾವಣೆ ಎದುರಿಸುತ್ತಾರೆ. ಜನರ ಕಷ್ಟಕ್ಕೆ ಪರಿಹಾರ ಹಾಗೂ ಸ್ಪಂದನೆ ಅವರಲ್ಲಿ ಇರುವುದಿಲ್ಲ. ಸದ್ಯಕ್ಕೆ 67 ಇರುವ ಬಿಜೆಪಿ ಶಾಸಕರ ಸಂಖ್ಯೆ ಮುಂದೆ 37 ಆದರೂ ಅಚ್ಚರಿ ಇಲ್ಲ’ ಎಂದು ಸಚಿವ ಮಧು ಬಂಗಾರಪ್ಪ ಟೀಕಿಸಿದರು. ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಉತ್ತಮ ಆಡಳಿತ ನೀಡುತ್ತಿದ್ದು ಶಕ್ತಿ ಯೋಜನೆಯಡಿ 100 ಕೋಟಿ ಮಹಿಳೆಯರು ಲಾಭ ಪಡೆದಿದ್ದಾರೆ. ಗೃಹಲಕ್ಷ್ಮಿ ಯೋಜನೆ ಅಡಿ ಕೇವಲ ಶೇ 5 ರಷ್ಟು ಮಂದಿಗೆ ಲಾಭ ದೊರೆತಿಲ್ಲ. ಈ ಬಗ್ಗೆ ಪ್ರಚಾರ ಮಾಡಿಯಾದರೂ ಬಿಜೆಪಿಯವರು ತಮ್ಮ ಮತಗಳ ಕೊರತೆ ನೀಗಿಸಿಕೊಳ್ಳಲಿ’ ಎಂದು ಹೇಳಿದರು. ಬಿಜೆಪಿ– ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದ ಅವರು ‘ಎಚ್.ಡಿ. ದೇವೇಗೌಡರು ಅವರದ್ದೇ ಆದ ತತ್ವ– ಸಿದ್ಧಾಂತ ಸ್ವಾಭಿಮಾನ ಹೊಂದಿದ್ದಾರೆ. ಈ ಹೊಂದಾಣಿಕೆ ಪ್ರಜಾಪ್ರಭುತ್ವಕ್ಕೆ ಉತ್ತಮ ಅಥವಾ ಕೆಡುಕು ಎಂಬುದರ ಬಗ್ಗೆ ಅವರೇ ಉತ್ತರ ಕೊಡಬೇಕು. ನಾನೂ ಜೆಡಿಎಸ್‌ನಲ್ಲಿ ಇದ್ದು ಬಂದವನು. ದೇವೇಗೌಡರ ತತ್ವ– ಆದರ್ಶದ ಬಗ್ಗೆ ನನಗೆ ತಿಳಿದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT