ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ದೇಗುಲದಲ್ಲಿ ಪ್ರತಿ ಸೋಮವಾರ ರೋಹಿಣಿ ಸಿಂಧೂರಿ ಹೆಸರಲ್ಲಿ ಪೂಜೆ! ಏಕೆ ಗೊತ್ತೇ?

ಶಿವಲಿಂಗದ ಹಿಂಭಾಗದಲ್ಲಿ ರೋಹಿಣಿ ವೃಕ್ಷ ನೆಟ್ಟು ಪೋಷಣೆ
Last Updated 29 ನವೆಂಬರ್ 2019, 5:14 IST
ಅಕ್ಷರ ಗಾತ್ರ

ಹಾಸನ: ನಗರದಲ್ಲಿ ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ದೇಗುಲವನ್ನು ಅಭಿವೃದ್ಧಿಪಡಿಸಿ ಹೊಸ ರೂಪ ನೀಡಿದ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ ನಡೆಯುತ್ತಿದೆ.

ನಗರದ ಹೃದಯ ಭಾಗದ ದೊಡ್ಡಬಸದಿ ರಸ್ತೆಯಲ್ಲಿನ ವಿರೂಪಾಕ್ಷೇಶ್ವರ ದೇವಾಲಯ ಕ್ರಿ.ಶ. 913ರಲ್ಲಿ ನಿರ್ಮಾಣಗೊಂಡಿದೆ. ಆದರೆ, ದೇಗುಲ ಅಭಿವೃದ್ಧಿ ಕಾಣದೆ ಅಳಿವಿನಂಚಿಗೆ ಸಾಗಿತ್ತು. ಶಿಥಿಲವಾಗಿದ್ದ ದೇಗುಲವನ್ನು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಅಭಿವೃದ್ಧಿ ಪಡಿಸಿದ್ದರು. ಈ ಕಾರಣಕ್ಕೆ ದೇವಾಲಯದಲ್ಲಿ ಪ್ರತಿ ಸೋಮವಾರ ಅವರ ಹೆಸರಿನಲ್ಲಿ ಕೃತಜ್ಞತಾಪೂರ್ವಕ ಅಭಿಷೇಕ ನಡೆಸಲಾಗುತ್ತಿದೆ. ಅಲ್ಲದೇ ಶಿವಲಿಂಗದ ಹಿಂಭಾಗದಲ್ಲಿ ಅವರ ಜ್ಞಾಪಕಾರ್ಥ ರೋಹಿಣಿ ಸಿಂಧೂರಿ ವೃಕ್ಷ ನೆಟ್ಟು ಪೋಷಿಸಲಾಗುತ್ತಿದೆ.

ವಿರೂಪಾಕ್ಷ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರೂ ಅಭಿವೃದ್ಧಿ ಬಗ್ಗೆ ಅಧಿಕಾರಿಗಳಾಗಲೀ ಮತ್ತು ಜನಪ್ರತಿನಿಧಿಗಳಾಗಲೀ ತಲೆ ಕೆಡಿಸಿಕೊಂಡಿರಲಿಲ್ಲ. ದೇಗುಲದ ಪ್ರಧಾನ ಅರ್ಚಕರ ಮನವಿಗೆ ಸ್ಪಂದಿಸಿದ ಸಿಂಧೂರಿ, ₹ 30 ಲಕ್ಷ ಅನುದಾನ ನೀಡಿ, ದೇಗುಲಕ್ಕೆ ಶೆಡ್, ವಿದ್ಯುತ್ ವ್ಯವಸ್ಥೆ ಜೊತೆಗೆ ಇತರ ಮೂಲಸೌಕರ್ಯ ಕಲ್ಪಿಸಿಕೊಟ್ಟಿದ್ದರು.

ವಿರೂಪಾಕ್ಷೇಶ್ವರ ದೇವಾಲಯಕ್ಕೆ ಬಹಳ ಹಿಂದೆ ಭಕ್ತರು, ಪೂರ್ವ ಭಾಗದಲ್ಲಿ ಪ್ರವೇಶಿಸಿ ದಕ್ಷಿಣ ಭಾಗದಲ್ಲಿ ಹೊರ ಬರುತ್ತಿದ್ದರು. ಪ್ರತಿವರ್ಷ ಶಿವರಾತ್ರಿ ಮಾರನೇ ದಿನ ಸೂರ್ಯನ ಕಿರಣ ನೇರವಾಗಿ ಶಿವಲಿಂಗ ಸ್ಪರ್ಶಿಸುತ್ತಿದ್ದವು. ಆದರೆ, ಕೆಲವರು ದೇಗುಲದ ಪೂರ್ವಭಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿ ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಬೀಳದಂತೆ ಮಾಡಿದ್ದಾರೆ.‌ ‌ಇದನ್ನು ತೆರವಿಗೆ ರೋಹಿಣಿ ಶ್ರಮವಹಿಸಿದ್ದರು. ಅಷ್ಟರೊಳಗೆ ಅವರು ಜಿಲ್ಲೆಯಿಂದ ವರ್ಗಾವಣೆಯಾದರು.

ಈ ದೇವಾಲಯ ಪ್ರಾಂಗಣದಲ್ಲಿ ಐದು ದೇವರುಗಳಿವೆ. ಆದಿತ್ಯ, ಅಂಬಿಕಾ, ವಿಷ್ಣು, ಗಣನಾಥ ಹಾಗೂ ಮಹೇಶ್ವರ (ವಿರೂಪಾಕ್ಷೇಶ್ವರ) ದೇವರ ವಿಗ್ರಹಗಳನ್ನು ಕೆತ್ತಲಾಗಿದೆ. 6 ಆಧಾರಸ್ತಂಭ ಹಾಗೂ 20 ಉಪಸ್ತಂಭಗಳಿವೆ.

ಬೇಲೂರಿನ ಚನ್ನಕೇಶವ ದೇವಾಲಯದ 46 ಶಿಲಾಬಾಲಕಿಯರ ಪೈಕಿ, ಲೀಲಾ ಶಿಕಾರಿಣಿ ಹಾಗೂ ಮೃದಂಗ ಶಿಲಾ ಬಾಲಕಿಯರನ್ನು ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಇಡಲಾಗಿದೆ. ಸಣ್ಣಪುಟ್ಟ ದೋಷ ಹೊಂದಿರುವ ಕಲಾಕೃತಿಗಳನ್ನು ರಾಜರು ತಂದಿಟ್ಟಿದ್ದಾರೆ ಎಂಬುದು ಇತಿಹಾಸಕಾರರು ಹೇಳಿಕೆ. ಮತ್ತೆ ಕೆಲವರು ಆಕ್ರಮಣಕಾರರಿಂದ ರಕ್ಷಿಸಲು ವಿಗ್ರಹಗಳನ್ನು ಇಲ್ಲಿಗೆ ತರಲಾಗಿದೆ ಎಂದು ಎನ್ನುತ್ತಾರೆ.

‘ರೋಹಿಣಿ ಅವರು ದೇಗುಲದ ಅಭಿವೃದ್ಧಿಗೆ ಮಾಡಿದ ಉಪಕಾರ ಮರೆಯುವುದಿಲ್ಲ. ಅದಕ್ಕಾಗಿ ಪ್ರತಿ ಸೋಮವಾರ ಅವರು ಹಾಗೂ ಕುಟುಂಬದ ಹೆಸರಿನಲ್ಲಿ ಅರ್ಚನೆ ಮತ್ತು ರುದ್ರಾಭಿಷೇಕ ಮಾಡಲಾಗುತ್ತದೆ. ದೇಗುಲದ ಆಸ್ತಿ ಒತ್ತುವರಿಯಾಗಿದ್ದನ್ನು ರೋಹಿಣಿ ಸಿಂಧೂರಿ ತೆರವು ಮಾಡಿಸಲು ಪ್ರಯತ್ನಿಸಿದ್ದರು. ಅವರ ವರ್ಗಾವಣೆ ನಂತರ ಒತ್ತುವರಿ ತೆರವಿಗೆ ಯಾರೊಬ್ಬರೂ ಮುತುವರ್ಜಿ ವಹಿಸಿಲ್ಲ’ ಎಂದು ದೇವಾಲಯ ಅರ್ಚಕ ಎಚ್.ಎನ್. ನಾಗಭೂಷಣ್ ಅವರು ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT