ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂಗಡ್ಡೆಗೆ ಅಂಗಮಾರಿ: ಇಳುವರಿ ಕುಂಠಿತ

ಅರಕಲಗೂಡು ತಾಲ್ಲೂಕಿನಲ್ಲಿ ಉತ್ತಮ ಮಳೆ: ಭತ್ತ ನಾಟಿ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡ ರೈತರು
Last Updated 19 ಆಗಸ್ಟ್ 2021, 1:06 IST
ಅಕ್ಷರ ಗಾತ್ರ

ಅರಕಲಗೂಡು: ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮುಂಗಾರು ಕೃಷಿ ಚಟುವಟಿಕೆ ಬಿರುಸಿನಿಂದ ಸಾಗಿದೆ.

ಈಗಾಗಲೇ ಶೇಕಡಾ 70 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಅರೆ ಮಲೆನಾಡು ಪ್ರದೇಶದಲ್ಲಿ ಭತ್ತ, ರಾಗಿ, ತಂಬಾಕು, ಮುಸುಕಿನ ಜೋಳ, ಆಲೂಗಡ್ಡೆ, ಶುಂಠಿ, ತೆಂಗು, ಅಡಿಕೆ, ಬಾಳೆ, ಕಾಫಿ, ಏಲಕ್ಕಿ, ಮೆಣಸು ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ವಾಣಿಜ್ಯ ಬೆಳೆಗಳು, ದ್ವಿದಳ ಧಾನ್ಯಗಳು ಗುರಿ ಮೀರಿ ಬಿತ್ತನೆಯಾಗಿದ್ದರೆ, ಭತ್ತದ ನಾಟಿ ಕಾರ್ಯಕ್ಕೆ ಸಿದ್ಧತೆ ನಡೆದಿದೆ.

ಹೇಮಾವತಿ ಬಲದಂಡೆ, ಬಲ ಮೇಲ್ದಂಡೆ ನಾಲೆ ಹಾಗೂ ನಾಲಾ ವ್ಯಾಪ್ತಿಯ ಏತ ನೀರಾವರಿ ಯೋಜನೆಗಳ ಮೂಲಕ ನೀರು ಹರಿಸುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಜಲಾನಯನ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯಕ್ಕೆ ಭರದ ಸಿದ್ದತೆ ನಡೆದಿದೆ.

ನಾಟಿ ಭತ್ತ ರಾಜಮುಡಿ ತಳಿಯನ್ನು ಈ ಹಿಂದೆ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಹೆಚ್ಚಿನ ಸಮಯ ಹಾಗೂ ವೆಚ್ಚದ ಕಾರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಇಳುವರಿ ನೀಡುವ ಹಾಗೂ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವ ಸುಧಾರಿತ ತಳಿಗಳತ್ತ ರೈತರು ಆಕರ್ಷತರಾಗುತ್ತಿದ್ದಾರೆ. ಹಾಗಾಗಿ ರಾಜ ಮುಡಿ ಬೆಳೆಯುವ ಪ್ರದೇಶ ಗಣನೀಯವಾಗಿ ಕಡಿಮೆಯಾಗಿದೆ.

ರಾಮನಾಥಪುರ, ಕೊಣನೂರು ಜಲಾನಯನ ಪ್ರದೇಶದ ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಜಮುಡಿ ಬೆಳೆಯಲಾಗುತ್ತಿದೆ. ಪ್ರಮುಖ ವಾಣಿಜ್ಯ ಬೆಳೆ ಮುಸುಕಿನ ಜೋಳ 14,700 ಹೆಕ್ಟೇರ್ (ಗುರಿ 13 ಸಾವಿರ ಹೆಕ್ಟೇರ್), ತಂಬಾಕು 7,100 ಹೆಕ್ಟೇರ್ (ಗುರಿ 3,320 ಹೆಕ್ಟೇರ್), ದ್ವಿದಳ ಧಾನ್ಯಗಳು 1,710 ಹೆಕ್ಟೇರ್ (ಗುರಿ 1130 ಹೆಕ್ಟೇರ್) ನಲ್ಲಿ ಬಿತ್ತನೆಯಾಗಿದೆ.

ಆ. 15 ರವರೆಗೆ ವಾಡಿಕೆ ಮಳೆ 527 ಮಿ. ಮೀ. ಪೈಕಿ 571 ಮೀ.ಮೀ ಮಳೆಯಾಗಿದೆ. ಕಸಬಾ, ದೊಡ್ಡಮಗ್ಗೆ, ಮಲ್ಲಿಪಟ್ಟಣ ಹೋಬಳಿಗಳಲ್ಲಿ ಅಲ್ಪ ಪ್ರಮಾಣದ ಮಳೆ ಕಡಿಮೆ ಆಗಿದೆ. ಕೊಣನೂರು, ರಾಮನಾಥಪುರ ಹೋಬಳಿಗಳಲ್ಲಿ ವಾಡಿಕೆ ಗಿಂತಲೂ ಹೆಚ್ಚಿನ ಮಳೆಯಾಗಿದೆ.

ಆಲೂಗಡ್ಡೆ 1,800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ನಿರಂತರ ಮಳೆಗೆ ತೇವಾಂಶ ಹೆಚ್ಚಿ ಆಲೂಗಡ್ಡೆ ಬೆಳೆ ಇಳುವರಿ ಮೇಲೆ ಹೊಡೆತ ಬಿದ್ದಿದೆ.

ಹಲವು ಕಡೆ ಅಂಗಮಾರಿ ರೋಗ ತಗುಲಿದೆ. ಜುಲೈನಲ್ಲಿ ಶುರುವಾದ ಮುಂಗಾರು ಆರಂಭದಲ್ಲಿ ಹದ ಮಳೆಗೆ ಸಿಲುಕಿ ಬೆಳೆ ಹುಲುಸಾಗಿ ಬೆಳೆದು ನಳನಳಿಸುತ್ತಿತ್ತು. ಬಳಿಕ ಮಳೆ ಅಬ್ಬರದಿಂದಾಗಿ ಬೆಳೆ ಜಮೀನಿನ ತೆಗ್ಗಿನಲ್ಲಿ ನೀರು ನಿಂತು ಕೊಳೆಯಲಾರಂಭಿಸಿ, ಇಳುವರಿ ಕುಂಠಿತಗೊಂಡಿದೆ.

‘ಆಲೂಗಡ್ಡೆ ಕಟಾವಿನ ಹಂತಕ್ಕೆ ಬರುವ ವೇಳೆಯಲ್ಲಿ ಅಂಗಮಾರಿ ರೋಗ ಬಾಧಿಸುತ್ತಿದೆ. ಗೆಡ್ಡೆ ಕಟ್ಟಿರುವ ಕಾರಣ ಹೆಚ್ಚಿನ ಹಾನಿ ಇಲ್ಲ. ಇಳುವರಿಯ ಮೇಲೆ ಸ್ವಲ್ಪ ಪರಿಣಾಮ ಬೀರಬಹುದು’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರಾಜೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT