ಹಾಸನ: ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕಾಂತರಾಜು ಆಯೋಗದ ವರದಿ ಮತ್ತು ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಬಿಎಸ್ಪಿ ಜಿಲ್ಲಾ ಘಟಕದವರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಿಎಸ್ಪಿ ರಾಜ್ಯ ಘಟಕದ ಉಪಾಧ್ಯಕ್ಷ ಗಂಗಾಧರ್ ಬಹುಜನ್ ಮಾತನಾಡಿ, ‘ಹಿಂದುಳಿದ ವರ್ಗದವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತು ಅಧ್ಯಯನ ಮತ್ತು ಜಾತಿವಾರು ಜನಗಣತಿ ನಡೆಸಲು ನೇಮಿಸಿದ ಕಾಂತರಾಜು ಆಯೋಗ 2015ರಲ್ಲಿ ತನ್ನ ವರದಿ ಸಿದ್ಧಗೊಳಿಸಿದೆ. ಈ ವರದಿ ಸೋರಿಕೆಯಾದಾಗ, ಪರಿಶಿಷ್ಟ ಜಾತಿ, ಪಂಗಡದ ಜನಸಂಖ್ಯೆ 1.50 ಕೋಟಿ, ಮುಸ್ಲಿಮರು 75 ಲಕ್ಷ, ಲಿಂಗಾಯತರು 60 ಲಕ್ಷ ಮತ್ತು ಒಕ್ಕಲಿಗರು 50 ಲಕ್ಷ ಇರುವುದಾಗಿ ತಿಳಿಯಿತು. ನಂತರ ಸಿದ್ದರಾಮಯ್ಯ ಸರ್ಕಾರದ ಅವಧಿ ಮುಗಿದು ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಆದರೆ ಯಾವುದೇ ಸರ್ಕಾರಗಳು ಕಾಂತರಾಜು ಆಯೋಗದ ವರದಿ ಜಾರಿಗೆ ಮುಂದಾಗಲಿಲ್ಲ’ ಎಂದು ದೂರಿದರು.
‘ಕಾಂತರಾಜು ಆಯೋಗದ ಅವಧಿ ಮುಗಿದ ಮೇಲೆ ಜಯಪ್ರಕಾಶ್ ಹೆಗ್ಡೆ ಆಧ್ಯಕ್ಷರಾಗಿದ್ದು, ಈಗಿನ ಸರ್ಕಾರ 2023ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂತರಾಜು ಮತ್ತು ಸದಾಶಿವ ಆಯೋಗದ ವರದಿ ಜಾರಿ ಮಾಡುವ ಆಶ್ವಾಸನೆ ನೀಡಿ, ಅಧಿಕಾರ ಹಿಡಿದರೂ ಇನ್ನೂ ಜಾರಿ ಮಾಡಿಲ್ಲ ಏಕೆ’ ಎಂದು ಪ್ರಶ್ನಿಸಿದರು.
‘ಈ ನಡುವೆ ಕೆಲ ಮೇಲ್ಜಾತಿಯ ಸ್ವಾಮೀಜಿಗಳು ಮತ್ತು ರಾಜಕಾರಣಿಗಳು ಈ ವರದಿಯನ್ನು ಜಾರಿ ಮಾಡದಿರುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಹಿಂದುಳಿದ ಜಾತಿಗಳಿಗೆ ವಂಚನೆಯಾಗುತ್ತಿದೆ. ಇನ್ನಾದರೂ ರಾಜ್ಯ ಸರ್ಕಾರ ವರದಿ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ, ಕೆಲ ಜಾತಿಗಳಿಗೆ ಶಿಕ್ಷಣ, ಸರ್ಕಾರಿ ಸೇವೆ ಮತ್ತು ರಾಜಕೀಯ ಮತ್ತಿತರ ರಂಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಇಲ್ಲದಾಗಿದೆ. ಇದಕ್ಕಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವಮ್ಮ, ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಅಕ್ಕಿ, ಸಂಯೋಜಕ ಮಲ್ಲಯ್ಯ, ಲಕ್ಷ್ಮಣ್ ಕೀರ್ತಿ, ಉಪಾಧ್ಯಕ್ಷ ಲೋಹಿತ್ ಕಡೆಗರ್ಜಿ, ಕಿರಣ್ ಕುಮಾರ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಸೋಮಶೇಖರ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.