ಸೋಮವಾರ, ನವೆಂಬರ್ 30, 2020
27 °C
ಶಿಕ್ಷಣ ಸಲಹೆಗಾರರಾಗಿ ಅನುಭವ ಇಲ್ಲದವರ ನೇಮಕ: ರೇವಣ್ಣ ಆರೋಪ

ಶಾಲಾ, ಕಾಲೇಜಿಗೆ ಮೂಲಸೌಲಭ್ಯ ಕಲ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಶಿಕ್ಷಣ ಕ್ಷೇತ್ರದ ಅನುಭವ ಇಲ್ಲದ ಪ್ರೊ. ಎಂ.ಆರ್‌.ದೊರೆಸ್ವಾಮಿ ಅವರನ್ನು ರಾಜ್ಯ ಸರ್ಕಾರ ಶಿಕ್ಷಣ ಸಲಹೆಗಾರರನ್ನಾಗಿ
ನೇಮಕ ಮಾಡಿರುವುದರಿಂದಲೇ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ ಎಂದು ಶಾಸಕ ಎಚ್.ಡಿ.ರೇವಣ್ಣ
ಆರೋಪಿಸಿದರು.

ಬಡವರ ಕಷ್ಟ ಗೊತ್ತಿಲ್ಲದ ದೊರೆಸ್ವಾಮಿ ಅವರು ತಮ್ಮ ಎಂಜಿನಿಯರ್‌ ಕಾಲೇಜಿನ ಒಂದು ಸೀಟಿಗೆ ₹60 ಲಕ್ಷ
ತೆಗೆದುಕೊಳ್ಳುತ್ತಾರೆ. ಹಾಗಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅವರೇ ₹60 ಕೋಟಿ ನೀಡಲಿ. ಬಡವರ ಹೆಸರಿನಲ್ಲಿ ಲೂಟಿ
ಮಾಡುವವರು ಶಿಕ್ಷಣ ಸಲಹೆಗಾರರಾಗಿದ್ದಾರೆ. ಇಂತಹವರನ್ನು ನೇಮಿಸಿಕೊಂಡರೆ ಮುಂದೆ ಎಲ್ಲಾ ಸರ್ಕಾರಿ ಶಾಲೆ,
ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ನ.17ರಿಂದ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ. ಆದರೆ, ಹಲವು ಕಾಲೇಜುಗಳಲ್ಲಿ ಉಪನ್ಯಾಸಕರು, ಪ್ರಯೋಗಾಲಯ,
ಕೊಠಡಿಗಳು, ಗ್ರಂಥಾಲಯ, ಶೌಚಾಲಯ ಕೊರತೆ ಕಾಡುತ್ತಿದೆ. ರಾಜ್ಯದಲ್ಲಿ ಶಾಲಾ, ಕಾಲೇಜು ಆರಂಭಿಸುವ ಮೊದಲು ಮೂಲ
ಸೌಕರ್ಯ ಹಾಗೂ ಬೋಧಕ ವರ್ಗದವರನ್ನು ನೇಮಿಸಬೇಕು. ಸಮಸ್ಯೆ ನಡುವೆ ಕಾಲೇಜು ಪ್ರಾರಂಭಿಸಿದರೆ ವಿದ್ಯಾರ್ಥಿಗಳಿಗೆ
ತೊಂದರೆಯಾಗಲಿದೆ. ಸರ್ಕಾರ ಏನಾದರೂ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿಡಿತಕ್ಕೆ ಸಿಕ್ಕಿದಿಯಾ ಎಂದು ಪ್ರಶ್ನಿಸಿದರು.

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೂಕ್ತ ಸೌಲಭ್ಯ ಇಲ್ಲದೆ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲಾಗದೆ
ವಂಚಿತರಾಗಿದ್ದಾರೆ. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿಡಿತದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ
ಎಂದು ಕಿಡಿಕಾರಿದರು.

ಶಿಕ್ಷಣ ಸಲಹೆಗಾರರು ಸರಿಯಾದ ಮಾರ್ಗದರ್ಶನ ನೀಡುತ್ತಿಲ್ಲ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನೆರವಾಗಲಿದ್ದು, ಬಡ
ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಶೀಘ್ರ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಸೂಕ್ತ ಕ್ರಮ ಕೈಗೊಂಡು ಕಾಲೇಜುಗಳಿಗೆ ಮೂಲ
ಸೌಕರ್ಯ ಒದಗಿಸಲು ಮುಂದಾಗಬೇಕು. ರಾಜ್ಯದ ಬಹುತೇಕ ಕಾಲೆಜಿನಲ್ಲಿ ಉಪನ್ಯಾಸಕರ ಕೊರತೆ ಇದೆ. ಎಚ್.ಡಿ.
ಕುಮಾರಸ್ವಾಮಿ ಸಿ.ಎಂ ಆಗಿದ್ದ ಅವಧಿಯಲ್ಲಿ ಉಪನ್ಯಾಸಕರ ನೇಮಕ ಹಾಗೂ ಕಾಯಂ ಮಾಡಿದ್ದು ಬಿಟ್ಟರೆ ನಂತರ ಯಾವುದೇ
ನೇಮಕಾತಿ ನಡೆದಿಲ್ಲ ಎಂದು ದೂರಿದರು.

ಸರ್ಕಾರಕ್ಕೆ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಆಗದಿದ್ದರೆ ಇರುವ ಕಾಲೇಜುಗಳನ್ನು ಮುಚ್ಚಲಿ ಅಥವಾ
ಕೈಗಾರಿಕೋದ್ಯಮಿಗಳಿಗೆ ಶಾಲಾ, ಕಾಲೇಜು ದತ್ತು ಪಡೆಯಲು ಮನವಿ ಮಾಡಬೇಕು. ರಾಜ್ಯ ಸರ್ಕಾರ ಗ್ರಾಮೀಣ ಭಾಗಗಳಲ್ಲಿ
ಕಾಲೇಜುಗಳನ್ನು ಮುಚ್ಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಕಡ್ಡಾಯವಾಗಿ ಮಾಸ್ಕ್ ನೀಡಬೇಕು. ಆರೋಗ್ಯ ದೃಷ್ಟಿಯಿಂದ ಹದಿನೈದು
ದಿನಕ್ಕೆ ಸ್ಯಾನಿಟೈಸರ್ ಬಾಟಲ್‌ ನೀಡಬೇಕು.

ಒಂದರಿಂದ ಒಂಭತ್ತನೆ ತರಗತಿ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ತರಗತಿ ನಡೆಸಿ ಪಾಸ್ ಮಾಡಲಿ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.