ಶನಿವಾರ, ಆಗಸ್ಟ್ 13, 2022
27 °C
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಸಚಿವ

ಚನ್ನರಾಯಪಟ್ಟಣ: ಬಡವರಿಗೆ, ರೈತರಿಗೆ ಅಧಿಕಾರಿಗಳು ಸ್ಪಂದಿಸಿ; ಕೆ.ಗೋಪಾಲಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನರಾಯಪಟ್ಟಣ: ಬಡವರು, ರೈತರಿಗೆ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ತಾಲ್ಲೂಕಿನಲ್ಲಿ ₹ 21.48 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿರುವ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಅವರು ಮಾತನಾಡಿದರು.

ಮುಂಬರುವ ದಿನಗಳಲ್ಲಿ ತಾಲ್ಲೂಕು ಕಚೇರಿಗೆ ಖುದ್ದು ಭೇಟಿ ನೀಡಿ ಜನರ ಅಹವಾಲು ಆಲಿಸಿ ಬಗೆಹರಿಸಲಾಗುವುದು ಎಂದರು. ಕೊಬ್ಬರಿಗೆ ರಾಜ್ಯ ಸರ್ಕಾರ ಒಂದು ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಿದೆ. ಮಳೆಯಿಂದಾಗಿ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ತಾಲ್ಲೂಕಿನಲ್ಲಿ ಮಳೆಗೆ ಆಗಿರುವ ಹಾನಿಗೆ ಪರಿಹಾರ ನೀಡಲಾಗುವುದು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು.

ಸೆ.20ರೊಳಗೆ ನೀರಾವರಿ ಸಚಿವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಎತ್ತಿನಹೊಳೆ ಸೇರಿ ವಿವಿಧ ನೀರಾವರಿ ಯೋಜನೆ ಪರಿಶೀಲಿಸಲಿದ್ದಾರೆ. ಏತ ನೀರಾವರಿ ಯೋಜನೆಗೆ ಭೂಸ್ವಾಧೀಣ ಮಾಡಿಕೊಳ್ಳಲಾಗಿದ್ದು, ರೈತರಿಗೆ ಪರಿಹಾರ ನೀಡುವ ಬಗ್ಗೆ ಸಚಿವರ ಜೊತೆ ಚರ್ಚಿಸಲಾಗುವುದು ಎಂದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, 14 ತಿಂಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ 350- 400 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಏತ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ಭೂಸ್ವಾಧೀನದ ಪರಿಹಾರದ ಹಣವನ್ನು ಹೆಚ್ಚು ಮಾಡಬೇಕು. ತಾಲ್ಲೂಕಿನಲ್ಲಿ ಬೆಳೆ ಸಮೀಕ್ಷೆಯ ಸಾಧನೆ ಉತ್ತಮವಾಗಿದೆ ಎಂದರು.

ಕಲ್ಕೆರೆ ಮತ್ತು ಎಂ.ಶಿವರ ಗ್ರಾಮದಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಬೇಕು. ಹೇಮಾವತಿ ನದಿಯಿಂದ ತಾಲ್ಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ₹ 380 ಕೋಟಿ ವೆಚ್ಚದ ಯೋಜನೆಗೆ ಸರ್ಕಾರದಿಂದ ಒಪ್ಪಿಗೆ ಕೊಡಿಸಬೇಕು. ನರೇಗಾದಲ್ಲಿ ಹೆಚ್ಚು ಕೆಲಸ ಮಾಡಲಾಗಿದ್ದು, ಅಂತರ್ಜಲ ವೃದ್ಧಿಯಾಗಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಹೇಮಾವತಿ ಸಕ್ಕರೆ ಕಾರ್ಖಾನೆಯಲ್ಲಿ ನಿಗದಿತ ಸಮಯಕ್ಕೆ ಕಬ್ಬು ಅರೆಯುವಿಕೆ ಆರಂಭಿಸಿ ಬೆಳೆಗಾರರ ಹಿತ ಕಾಪಾಡಬೇಕು. ನೀರಾವರಿ ಯೋಜನೆಗೆ ರೈತರಿಂದ ಸ್ವಾಧೀನ ಮಾಡಿಕೊಂಡಿರುವ ಭೂಮಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎಚ್.ಎಸ್.ಶ್ಯಾಮಲಾ, ಉಪಾಧ್ಯಕ್ಷ ಕೆ.ಬಿ.ರಾಮಕೃಷ್ಣೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ರತ್ನಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎನ್.ಪುಟ್ಟಸ್ವಾಮಿಗೌಡ, ಶ್ವೇತಾ, ಮಮತಾ, ಸಿ.ಮಂಜೇಗೌಡ, ದೇವಮ್ಮ, ಉಪವಿಭಾಗಾಧಿಕಾರಿ ನವೀನ್ ಭಟ್, ಜಿ.ಪಂ.ಸಿಇಒ ಬಿ.ಎ.ಪರಮೇಶ್, ತಹಶೀಲ್ದಾರ್ ಜೆ.ಬಿ.ಮಾರುತಿ, ಡಿವೈಎಸ್‌ಪಿ ಬಿ.ಬಿ.ಲಕ್ಷೇಗೌಡ, ತಾ.ಪಂ. ಇಒ ಎಚ್.ಎಸ್. ಚಂದ್ರಶೇಖರ್ ಇದ್ದರು.

ಅಧಿಕಾರಿಗಳಿಗೆ ಎಚ್ಚರಿಕೆ: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಖುದ್ದಾಗಿ ನೀಡಬೇಕು ಎಂದು ಎಂ.ಎ.ಗೋಪಾಲಸ್ವಾಮಿ ಹೇಳಿದರು.

‘ಆಹ್ವಾನ ಪತ್ರಿಕೆಯನ್ನು ನನ್ನ ಮನೆಯ ಬಾಗಿಲಿಗೆ ಹಾಕಿರುವುದು ಸರಿಯಲ್ಲ. ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸುವಾಗ ಅಧಿಕಾರಿಗಳು ಖುದ್ದು ಭೇಟಿಯಾದರೆ ಕಾರ್ಯಕ್ರಮದ ಕುರಿತು ಚರ್ಚಿಸಬಹುದು. ಅಧಿಕಾರಿಗಳು ಅಸಡ್ಡೆಯಿಂದ ನಡೆದುಕೊಳ್ಳಬಾರದು’ ಎಂದು ಎಚ್ಚರಿಕೆ ನೀಡಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಸಮಾರಂಭದ ಬಗ್ಗೆ 10 ದಿನದ ಹಿಂದೆಯೇ ಎಂ.ಎ.ಗೋಪಾಲಸ್ವಾಮಿ ಅವರಿಗೆ ತಿಳಿಸಿದ್ದೆ. ಆದರೆ, ಅಧಿಕಾರಿಗಳು ಖುದ್ದಾಗಿ ಆಹ್ವಾನ ಪತ್ರಿಕೆ ತಲುಪಿಸಬೇಕು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು