ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ರಸ್ತೆಗಳು ಜಲಾವೃತ, ಮಾರುಕಟ್ಟೆಗೆ ನೀರು

ಹಾಸನದಲ್ಲಿ ವರುಣನ ಆರ್ಭಟಕ್ಕೆ ತತ್ತರಿಸಿದ ಜನರು
Last Updated 21 ಅಕ್ಟೋಬರ್ 2020, 15:24 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಬುಧವಾರ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಹಾಸನ ನಗರ, ಸುತ್ತಮುತ್ತಲ ಪ್ರದೇಶ, ಸಕಲೇಶಪುರ, ಆಲೂರು, ಬೇಲೂರು, ಚನ್ನರಾಯಪಟ್ಟಣ, ಹಿರೀಸಾವೆ, ಶ್ರವಣಬೆಳಗೊಳ ಹೋಬಳಿಯಲ್ಲಿ ಭಾರಿ ಮಳೆಯಾಗಿದೆ.

ಬೆಳಿಗ್ಗೆ ಮೋಡ ಕವಿದ ವಾತಾವರಣ ಇತ್ತು. ನಗರದಲ್ಲಿ ಮಧ್ಯಾಹ್ನ 3.15ಕ್ಕೆ ಆರಂಭವಾದ ಮಳೆ ಸಂಜೆ 5.30ರ ವರೆಗೂ ರಭಸವಾಗಿ ಸುರಿಯಿತು. ಸ್ವಲ್ಪ ಹೊತ್ತು ಬಿಡುವು ನೀಡಿದ ಬಳಿಕ ರಾತ್ರಿ ಏಳು ಗಂಟೆಗೆ ಆರಂಭಗೊಂಡ ಜಿಟಿಜಿಟಿ ಮಳೆ ತಡರಾತ್ರಿವರೆಗೂ ಸುರಿದಿದೆ. ಜೋರು ಮಳೆಗೆ ಚರಂಡಿ ತುಂಬಿ ರಸ್ತೆ ಮೇಲೆ ನೀರು ಹರಿಯಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು.

ಹಲವು ಬಡಾವಣೆಗಳು, ರಸ್ತೆಗಳು ಜಲಾವೃತಗೊಂಡು ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ತೊಂದರೆ ಆಯಿತು. ಬಿ.ಎಂ.ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯಿತು. ಚರಂಡಿಗಳು ಉಕ್ಕಿ ಹರಿದವು. ಹಗಲಿನಲ್ಲಿಯೂ ವಾಹನಗಳು ಹೆಡ್‌ ಲೈಟ್‌ ಹಾಕಿಕೊಂಡು ಚಲಿಸಿದವು.

ದ್ವಿಚಕ್ರ ವಾಹನ ಸವಾರರು, ಸಾರ್ವಜನಿಕರು ಕಟ್ಟಡ, ಮಳಿಗೆಗಳಲ್ಲಿ ಆಶ್ರಯ ಪಡೆದರು. ತಳ್ಳುವ ಗಾಡಿ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು, ಫಾಸ್ಟ್‌ ಫುಡ್‌ ಗಾಡಿ ವ್ಯಾಪಾರಿಗಳು ಮಳೆಯಲ್ಲಿಯೇ ತೊಯ್ದರು. ಸಂಜೆ
ವ್ಯಾಪಾರ ಇಲ್ಲದೆ ನಷ್ಟ ಅನುಭವಿಸಬೇಕಾಯಿತು. ನಗರದ ಕಟ್ಟಿನ ಕೆರೆ ಮಾರುಕಟ್ಟಿಗೆ ನೀರು ನುಗ್ಗಿ ವ್ಯಾಪಾರ ವಹಿವಾಟಿಗೆ ತೊಂದರೆ ಉಂಟಾಯಿತು.

ಹಿರೀಸಾವೆ ಹೋಬಳಿ ಸುತ್ತಮುತ್ತ ಮಂಗಳವಾರ ರಾತ್ರಿ ಜಡಿ ಮಳೆಯಾಗಿದೆ. ಶ್ರವಣಬೆಳಗೊಳದಲ್ಲಿ ಮಂಗಳವಾರ ರಾತ್ರಿ ಮತ್ತುಬುಧವಾರ ಮಳೆಯಾದರೆ, ಹಳೇಬೀಡು ಸುತ್ತಮುತ್ತಲ ಪ್ರದೇಶಗಳಲ್ಲಿ ಅರ್ಧ ತಾಸು ಹಾಗೂ ಚನ್ನರಾಯಪಟ್ಟಣದಲ್ಲಿ‌ ಸಂಜೆ‌ ಜಿಟಿಜಿಟಿ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT