ಶನಿವಾರ, ಮಾರ್ಚ್ 6, 2021
28 °C
ಹುಡುಗಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದಿದ್ದ ಗಲಾಟೆ

ಹುಡುಗಿ ವಿಚಾರಕ್ಕೆ ಗಲಾಟೆ| ರೌಡಿಶೀಟರ್‌ ಹತ್ಯೆಗೈದ ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಡಿ.ಕಾಳೇನಹಳ್ಳಿಯ ರೌಡಿ ಶೀಟರ್‌ ಆನಂದ್‌ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಿ.ಕಾಳೇನಹಳ್ಳಿ ಗ್ರಾಮದ ಕೆ.ಎನ್‌ ಪುನೀತ್‌ (23), ಕೆ.ಎನ್‌. ಕಾರ್ತಿಕ್ (27), ಕೆ.ಎನ್‌. ವಿಜಯ್‌ (26) ಮತ್ತು ಚನ್ನರಾಯಪಟ್ಟಣ ರಾಮೇಶ್ವರ ಬಡಾವಣೆಯ ಗಗನ್ ಗೌಡ ಬಂಧಿತ ಆರೋಪಿಗಳು. ಆನಂದ್ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ. ಬಂಧಿತರು ರೌಡಿಶೀಟರ್ ಗಳಾಗಿದ್ದು, ಹಲವು ಪ್ರಕರಣಗಳು ದಾಖಲಾಗಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ ಗೌಡ ತಿಳಿಸಿದರು.

ಡಿ. ಕಾಳೇನಹಳ್ಳಿ ಪುನೀತ್ ಮತ್ತು ಮತ್ತೊಬ್ಬ ರೌಡಿಶೀಟರ್ ಜೋಗಿಪುರದ ಗಜನಿ ನಡುವೆ ಹುಡುಗಿ ವಿಚಾರಕ್ಕೆ ಗಲಾಟೆ ನಡೆದಿತ್ತು. ಗಜನಿ ಪರ ವಾಕಲತ್ತು ವಹಿಸಿದ್ದ ಆನಂದ್, ಪುನೀತ್ ಮನೆಗೆ ನುಗ್ಗಿ ಆತನ ತಂದೆ, ತಾಯಿಗೆ ಬೆದರಿಸಿ, ಮನೆ ಮುಂದೆ ಬಾಟಲ್‌ ಒಡೆದು, ನಿಮ್ಮ ಮಗನನ್ನು ಚಾಕುವಿನಿಂದ ಇರಿದು ಕೊಲೆ ಮಾಡುವುದಾಗಿ ಗಲಾಟೆ ಮಾಡಿ ಹೋಗಿದ್ದ. ಅಲ್ಲದೇ ಶನಿ ಮಹಾತ್ಮ ಕಥೆ ಓದಿಸುವ ವಿಚಾರದಲ್ಲೂ ಗಲಾಟೆ ನಡೆದಿತ್ತು ಎಂದು ವಿವರಿಸಿದರು.

ಆನಂದ್‍ನನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ತೊಂದರೆ ಆಗುವುದು ಖಚಿತ ಅಂದುಕೊಂಡು ಪುನೀತ್ ಹಾಗೂ ತಂಡ ಜ.18 ರ ರಾತ್ರಿ ರಾಜಿ ಸಂಧಾನಕ್ಕಾಗಿ ಆತನನ್ನು ಕರೆಸಿಕೊಂಡಿದ್ದಾರೆ. ಮೊದಲೇ ಕೊಲ್ಲುವ ಯೋಜನೆ ರೂಪಿಸಿದ್ದ ಪುನೀತ್ ಹಾಗೂ ತಂಡ ’ನಮ್ಮ ವಿರುದ್ಧವೇ ಜಗಳ ಮಾಡಿ ಎಚ್ಚರಿಕೆ ಕೊಡುತ್ತೀಯಾ’ ಎಂದು ನಿಂದಿಸಿ, ಆನಂದ್‍ನ ಕುತ್ತಿಗೆ ಮತ್ತು ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಆನಂದ್ ಸ್ಥಳದಲ್ಲೇ ಮೃತಪಟ್ಟ ಎಂದು ಮಾಹಿತಿ ನೀಡಿದರು.

ಎರಡು ತಂಡಗಳ ನಡುವೆ ಆಗಾಗ್ಗೆ ಸಣ್ಣಪುಟ್ಟ ಕಾರಣಕ್ಕೆ ಜಗಳ ನಡೆಯುತ್ತಿತ್ತು. ಇದು ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದರು.

ಆರೋಪಿ ಪತ್ತೆ ಕಾರ್ಯದಲ್ಲಿ ಚನ್ನರಾಯಪಟ್ಟಣ ಸಿಪಿಐ ಸುಬ್ರಹ್ಮಣ್ಯ, ಪಿಎಸ್‍ಐ ವಿನೋದ್ ರಾಜ್, ಸಿಬ್ಬಂದಿಗಳಾದ ಸುರೇಶ್‌, ಜವರೇಗೌಡ, ಸುರೇಶ, ರವೀಶ, ಮಹೇಶ, ಬೀರಲಿಂಗ, ನಾಗೇಂದ್ರ ಹಾಗೂ ತಾಂತ್ರಿಕ ಸಹಾಯಕರಾದ ಬಡಾವಣೆ ಠಾಣೆಯ ಪಿಎಸ್‌ಐ ಅಶ್ವಿನಿ ನಾಯಕ್‌, ಎಸ್ಪಿ ಕಚೇರಿಯ ಪೀರ್‌ ಖಾನ್‌ ಮತ್ತು ಜೀಪು ಚಾಲಕ ಪರಮೇಶ್‌ ಪಾಲ್ಗೊಂಡಿದ್ದರು.

ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ, ಡಿವೈಎಸ್ಪಿ ಲಕ್ಷ್ಮೇಗೌಡ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು