ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಕಲೇಶಪುರ | ಬಸ್‌ ಸಂಚಾರಕ್ಕೆ ಅಡ್ಡಿ: ಜನರ ಪರದಾಟ

10 ಗ್ರಾಮಗಳಿಗೆ ಸಂಪರ್ಕಿಸುವ ಅತ್ತಿಬೀಡು–ಕುಮಾರಹಳ್ಳಿ ರಸ್ತೆ ಗುಂಡಿಮಯ
Published : 28 ಆಗಸ್ಟ್ 2024, 5:17 IST
Last Updated : 28 ಆಗಸ್ಟ್ 2024, 5:17 IST
ಫಾಲೋ ಮಾಡಿ
Comments

ಸಕಲೇಶಪುರ: ತಾಲ್ಲೂಕಿನ ದೇವಾಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿಬೀಡು– ಕುಮಾರಹಳ್ಳಿ ಸೇರಿದಂತೆ ಸುಮಾರು 10 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಗುಂಡಿಬಿದ್ದು ಹಾಳಾಗಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಪಶ್ಚಿಮಘಟ್ಟದ ಅಂಚಿನಲ್ಲಿ ಇರುವ ನೀಕನಹಳ್ಳಿ, ಅತ್ತಿಬೀಡು, ಕುಮಾರಳ್ಳಿ, ಬಾಣಿಬೈಲು, ಬೆಟ್ಟಮಕ್ಕಿ, ನೆಲಗಳ್ಳಿ, ಹುತ್ತನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದ್ದು, 5 ಕಿ.ಮೀ.ನಲ್ಲಿ 3 ಕಿ.ಮೀ. ಮಂಡಿಯುದ್ದ ಗುಂಡಿಗಳು ಬಿದ್ದಿವೆ.‌

ಲಘು ವಾಹನಗಳಿರಲಿ ಭಾರಿ ವಾಹನಗಳ ಓಡಾಟ ಸಾಧ್ಯವಾಗದ ಮಟ್ಟಿಗೆ ರಸ್ತೆ ಹಾಳಾಗಿದೆ. ಈ ಗ್ರಾಮದಲ್ಲಿ ಹಿಡುವಳಿ ಜಮೀನುಗಳಲ್ಲಿ ಅಲ್ಲೊಂದು ಇಲ್ಲೊಂದು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಬಹುತೇಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳೇ ಹೆಚ್ಚು ವಾಸ ಮಾಡುತ್ತಿದ್ದು, ಈ ಗ್ರಾಮಗಳಿಂದ ಹೊರ ಊರುಗಳಿಗೆ ಯಾವುದೇ ಬಾಡಿಗೆ ವಾಹನಗಳ ವ್ಯವಸ್ಥೆ ಇಲ್ಲ.

ಶಾಲಾ– ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಅನುಕೂಲಕ್ಕಾಗಿ ತಾಲ್ಲೂಕು ಕೇಂದ್ರದಿಂದ ನಿತ್ಯ 3 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ. ರಸ್ತೆ ಸರಿಯಲ್ಲದ ಕಾರಣ ಬಸ್‌ಗಳು ವಾರದಲ್ಲಿ ಮೂರು ದಿನ ಮಾರ್ಗ ಮಧ್ಯ ಕೆಟ್ಟು ನಿಲ್ಲುತ್ತವೆ. ಇದರಿಂದ ಈ ಬಸ್‌ಗಳು ನಮ್ಮೂರಿಗೆ ಬರುತ್ತಿಲ್ಲ. ಇದರಿಂದ ಕಾಲು ನಡಿಗೆಯಲ್ಲಿಯೇ ಹೋಗಿ ಬರಬೇಕಾದ ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಡಾಂಬರ್ ಸಂಪೂರ್ಣ ಕಿತ್ತು ಹೋಗಿ ಅಸ್ಥಿಪಂಜರವಾಗಿದೆ. ಬ್ಲೇಡ್‌ ತುಂಡಾದರೆ, ಟಯರ್‌ ಹಾಳಾದರೆ ನಮ್ಮ ಸಂಬಳದಲ್ಲಿ ವಜಾ ಮಾಡುತ್ತಾರೆ. ನಮಗೆ ಬರೋ ಸಂಬಳವೆಲ್ಲ ಬಸ್‌ ರಿಪೇರಿಗೆ ಹೋದರೆ ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕು. ಮೊದಲು ನಿಮ್ಮೂರಿನ ರಸ್ತೆ ಸರಿ ಮಾಡಿಸಿ, ನಂತರ ಬಸ್‌ ನಿಮ್ಮೂರಿಗೆ ತರುತ್ತೇವೆ’ ಎಂದು ಚಾಲಕರು ಹೇಳುತ್ತಾರೆ.

‘ಮಾನವೀಯತೆಯಿಂದ ಹೇಗೋ ಬಸ್ ಬರುತ್ತಿದೆ. ಅವರು ಹೇಳುವುದು ಸತ್ಯ. ಕತ್ತಲಾದರೆ ನಾವೇ ಕಷ್ಟದಿಂದ ನಡೆದುಕೊಂಡು ಹೋಗಬೇಕು. ಅಷ್ಟರ ಮಟ್ಟಿಗೆ ರಸ್ತೆ ಹಾಳಾಗಿದೆ’ ಎಂದು ಎಚ್‌.ವೈ. ಪ್ರಕಾಶ್ ಹುತ್ತನಹಳ್ಳಿ ಹೇಳುತ್ತಾರೆ.

ಕಾಡು ಪ್ರಾಣಿಗಳ ಆತಂಕ

ಹೇಗಾದರೂ ಮಾಡಿ ಕಷ್ಟದಲ್ಲಿ ನಡೆದುಕೊಂಡು ಹೋಗಬಹುದು. ಆದರೆ ನಮ್ಮ ಗ್ರಾಮಗಳಲ್ಲಿ ಕಾಡಾನೆ, ಕಾಟಿ, ಹಂದಿ, ಚಿರತೆ ಮೊದಲಾದ ಕಾಡುಪ್ರಾಣಿಗಳ ಹಾವಳಿ ಇದೆ ಎಂದು ದೇವಾಲದಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಜ್ಯೋತಿ ನೇರಲಮಕ್ಕಿ ಹೇಳುತ್ತಾರೆ.

ಶಾಲೆ– ಕಾಲೇಜುಗಳಿಗೆ ಮಕ್ಕಳನ್ನು ಹೇಗೆ ಕಳಿಸುವುದು? ಬಸ್‌ನಲ್ಲಿ ಸುರಕ್ಷಿತವಾಗಿ ಹೋಗಿ ಬರುತ್ತಾರೆ. ರಸ್ತೆ ಸರಿಪಡಿಸಿ ಎಂದು ನಾಲ್ಕು ವರ್ಷಗಳಿಂದ ಹಿಂದಿನ ಶಾಸಕರು, ಹಾಲಿ ಶಾಸಕರಿಗೆ ಮನವಿ ಸಲ್ಲಿಸಿದರೂ ರಸ್ತೆ ದುರಸ್ತಿ ಮಾಡುತ್ತಿಲ್ಲ ಎನ್ನುತ್ತಾರೆ ಅವರು.

ಎತ್ತಿನಹೊಳೆ ಯೋಜನೆ ವಿಶೇಷ ಅನುದಾನದಲ್ಲಿ ಯಾವ್ಯಾವುದೋ ಊರಿಗೆಲ್ಲಾ ರಸ್ತೆ ಮಾಡಿದ್ದಾರೆ. ಈ ರಸ್ತೆಯನ್ನೂ ಅದೇ ಯೋಜನೆಯಿಂದ ದುರಸ್ತಿ ಮಾಡಲಿ.
ದಯಾನಂದ್, ಕುಮಾರಳ್ಳಿ ಗ್ರಾಮಸ್ಥ
ರಸ್ತೆ ವೀಕ್ಷಣೆ ಮಾಡಿದ್ದೇನೆ. ಲೋಕೋಪಯೋಗಿ ಇಲಾಖೆಯಿಂದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಅನುದಾನಕ್ಕೆ ಒತ್ತಡ ತರಲಾಗಿದೆ.
ಸಿಮೆಂಟ್ ಮಂಜು, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT