ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿ ಖರೀದಿ ನೊಂದಣಿ: ನೂಕು ನುಗ್ಗಲು, ಸರ್ವರ್ ಸಮಸ್ಯೆ

Published 4 ಮಾರ್ಚ್ 2024, 13:45 IST
Last Updated 4 ಮಾರ್ಚ್ 2024, 13:45 IST
ಅಕ್ಷರ ಗಾತ್ರ

ಜಾವಗಲ್: ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸೋಮವಾರ ಕೊಬ್ಬರಿ ಖರೀದಿ ನೊಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಖರೀದಿ ಕೇಂದ್ರದ ಬಳಿ ನೂಕು ನುಗ್ಗಲು ಉಂಟಾಯಿತು.

ಖರೀದಿ ಕೇಂದ್ರ ಆರಂಭವಾದ ಮೊದಲ ದಿನವೇ ಸರ್ವರ್ ಸಮಸ್ಯೆ ಉಂಟಾಗಿದ್ದು, ಇದರಿಂದಾಗಿ ರೈತರು ತಮ್ಮ ಹೆಸರನ್ನು ನೋಂದಾಯಿಸಲು ಸಾಧ್ಯವಾಗದೆ ತೊಂದರೆ ಅನುಭವಿಸಿದರು.

ದಿನವಿಡೀ ಕೇಂದ್ರದ ಎದುರು ಬಿಸಿಲಿಗೆ ಮೈಯೊಡ್ಡಿ ಸರತಿ ಸಾಲಿನಲ್ಲಿ ನಿಂತರೂ ಸರ್ವರ್ ಸಮಸ್ಯೆಯಿಂದ ನೋಂದಣಿ ಪ್ರಕ್ರಿಯೆಯು ಸರಾಗವಾಗಿ ನಡೆಯುತ್ತಿಲ್ಲ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಂದೆಡೆ ಖರೀದಿ ಕೇಂದ್ರದ ಎದುರು ರೈತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂಜಾನೆ 4 ಗಂಟೆಯಿಂದಲೇ ರೈತರು ಸರತಿ ಸಾಲಿನಲ್ಲಿ ನಿಂತು ತಮ್ಮ ಹೆಸರು ನೋಂದಾಯಿಸಲು ಕಾಯುತ್ತಿದ್ದ ದೃಶ್ಯವೂ ಕಂಡು ಬಂತು.

ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸಾಲುಗಳನ್ನು ಮಾಡಲಾಗಿದ್ದರೂ ಕಳೆದ ಬಾರಿ ಹೆಸರು ನೋಂದಾಯಿಸಲು ಸಾಧ್ಯವಾಗದ ರೈತರು ಈ ಬಾರಿಯೂ ಹೆಸರು ನೋಂದಾಯಿಸಲು ಸಾಧ್ಯವಾಗುವುದಿಲ್ಲ ಎಂಬ ಭಯದಿಂದ ಏಕಾಏಕಿ ಮಾರುಕಟ್ಟೆ ಆವರಣದ ಬಳಿ ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಈ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.

ಹಳೇಬೀಡು ಹಾಗೂ ಬೇಲೂರಿನಲ್ಲಿ ಕೊಬ್ಬರಿ ಖರೀದಿ ಕೇಂದ್ರಗಳನ್ನು ಆರಂಭಿಸದೆ ಇರುವ ಪರಿಣಾಮ, ಆ ಭಾಗದ ರೈತರು ಜಾವಗಲ್ ಗ್ರಾಮದ ಕೊಬ್ಬರಿ ಖರೀದಿ ಕೇಂದ್ರಕ್ಕೆ ಹೆಸರು ನೋಂದಾಯಿಸಲು ಆಗಮಿಸುತ್ತಿದ್ದು, ಇದರಿಂದ ಗ್ರಾಮದ ಕೊಬ್ಬರಿ ಖರೀದಿ ಕೇಂದ್ರದಲ್ಲಿ ರೈತರ ಸಂಖ್ಯೆ ಹೆಚ್ಚಾಗಿ ಸ್ಥಳೀಯ ರೈತರಿಗೆ ತೊಂದರೆ ಆಗುತ್ತಿದೆ ಎಂದು ಗ್ರಾಮದ ರೈತರು ಹೇಳಿದರು.

ಗ್ರಾಮದ ರೈತ ಚಂದ್ರೇಗೌಡ ಮಾತನಾಡಿ, ಕಳೆದ ಬಾರಿಯಂತೆ ಈ ಬಾರಿಯೂ ಖರೀದಿ ಕೇಂದ್ರದ ಬಳಿ ರೈತರು ಹೆಚ್ಚಾಗಿ ಸೇರುತ್ತಿರುವುದರಿಂದ ನೂಕುನಗ್ಗಲು ಉಂಟಾಗುತ್ತಿದೆ. ಖರೀದಿ ಕೇಂದ್ರದ ಅಧಿಕಾರಿಗಳು ಟೋಕನ್ ಪದ್ಧತಿ ಅನುಸರಿಸಿದರೆ ಅನುಕೂಲವಾಗುತ್ತದೆ, ಇದರಿಂದ ರೈತರು ಖರೀದಿ ಕೇಂದ್ರದ ಬಳಿ ಏಕಾಏಕಿ ಜಮಾಯಿಸುವುದು ಕಡಿಮೆಯಾಗಿ ಅವರ ಟೋಕನ್ ನಂಬರ್ ಬಂದಾಗ ನೋಂದಣಿ ಮಾಡಿಸಿಕೊಂಡು ಹೋಗುತ್ತಾರೆ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT