ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ, ವೃತ್ತಿ ಧರ್ಮ ಪ್ರತ್ಯೇಕ

ಸಮ್ಮೇಳನಾಧ್ಯಕ್ಷ ಷ.ಶೆಟ್ಟರ್‌ ಅಭಿಮತ
Last Updated 26 ಜೂನ್ 2018, 16:51 IST
ಅಕ್ಷರ ಗಾತ್ರ

ಚಾವುಂಡರಾಯ ಮಂಟಪ (ಶ್ರವಣಬೆಳಗೊಳ): ‘ಜೈನಧರ್ಮವನ್ನು ವಾಸ್ತವಿಕ, ತಾತ್ವಿಕ ಮತ್ತು ಐತಿಹಾಸಿಕ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು’ ಎಂದು ಸಮ್ಮೇಳನಾಧ್ಯಕ್ಷ, ಸಂಶೋಧಕ ಷ.ಶೆಟ್ಟರ್ ಹೇಳಿದರು.ಹಳಗನ್ನಡ ಸಮ್ಮೇಳನದ ಮೂರನೇ ದಿನ

‘11ನೇ ಶತಮಾನದ ಸಾಹಿತ್ಯ: ಹಿಂಸೆ ಅಹಿಂಸೆಗಳ ನಿರ್ವಹಣೆ’ ಕುರಿತ ವಿಚಾರ ಗೋಷ್ಠಿಯಲ್ಲಿ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿದ ಅವರು, ‘ಐತಿಹಾಸಿಕ ನೆಲೆಯಲ್ಲಿ ನೋಡುವುದಾದರೆ ವೃತ್ತಿ ಧರ್ಮ ಮುಖ್ಯವಾಗುತ್ತದೆ. ಯಾರೇ ವೃತ್ತಿ ಧರ್ಮದಲ್ಲಿ ಸೋತರೆ ಅವರ ವ್ಯಕ್ತಿತ್ವಕ್ಕೆ ಅರ್ಥ ಇರುವುದಿಲ್ಲ. ಚಾವುಂಡರಾಯ ಅಹಿಂಸಾ ಧರ್ಮ ಪಾಲಿಸುತ್ತಾನೆ. ಆತನನ್ನು ದಂಡನಾಯಕನ ದೃಷ್ಟಿಯಲ್ಲಿ ನೋಡಿದರೆ ಹಿಂಸೆ ಪಾಲಿಸುವುದು ಅನಿವಾರ್ಯ. ಧರ್ಮ, ವೃತ್ತಿ ಧರ್ಮ ಪ್ರತ್ಯೇಕ. ಎರಡು ಹಿಂಸೆ, ಅಹಿಂಸೆ ಹಂಚಿಕೊಂಡಿದೆ. ಆದರೆ ಇದು ಸ್ಥಿರವಾಗಿರುವುದಿಲ್ಲ’ ಎಂದು ಹೇಳಿದರು.

ಇದಕ್ಕೂ ಮುನ್ನ ‘ಜನ್ನ’ ಕುರಿತು ಮಾತನಾಡಿದ ಸಾಹಿತಿ ಶಿವರಾಮಶೆಟ್ಟಿ, ‘ಯಶೋಧರ ಚರಿತೆ ಮತಾಂತರಗೊಳ್ಳುತ್ತಿರುವ ಕಥನವಾಗಿದ್ದು, ಅದರಲ್ಲಿ ಬಹುರೂಪಿ ಜೀವನ ಆಚರಣೆ ಇದೆ. ನಾವು ಸೇವಿಸುವ ಆಹಾರ ದೇವರ ಆಹಾರವಾಗಿರುತ್ತದೆ. ಆದ್ದರಿಂದ ದೇವರಿಗೆ ಪ್ರಿಯವಾದ ಆಹಾರ ಸೇವಿಸಬೇಕು. ಯಶೋಧರ ಚರಿತೆಯನ್ನು ಕೇವಲ ಓದದೆ, ಕೇಳುವ ಹಾಗೂ ಹೇಳುವ ಸಾಮರ್ಥ್ಯ ಬಳಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಧಾರ್ಮಿಕ ಸನ್ನಿವೇಶದಲ್ಲಿ ‘ಅಸ್ಮಿತೆ’, ‘ಅಸ್ತಿತ್ವ’ ಕಳೆದುಕೊಳ್ಳುತ್ತಿದ್ದೇವೆ. ಆದ್ದರಿಂದ ಪರಂಪರೆಯನ್ನು ಪುನರ್‌ ಮನನ ಮಾಡಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

‘ನಾಗಚಂದ್ರ’ ಕುರಿತು ಮಾತನಾಡಿದ ಪ್ರೀತಿ ಶುಭಚಂದ್ರ, ‘ಅಹಿಂಸೆ, ಹಿಂಸೆಗಳ ಕುರಿತು ನಾಗಚಂದ್ರ ಸರಿಯಾಗಿ ಬರೆದಿದ್ದಾನೆ. ತಪ್ಪಸಿನ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಮತ್ತೊಬ್ಬರನ್ನು ಹಿಂಸೆಗೆ ದೂಡುವುದು ದುಃಖಕ್ಕೆ ಕಾರಣ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಕಂಠ ಕೂಡಿಗೆ, ‘ಜೈನ ಧರ್ಮದಲ್ಲಿ ಹಿಂಸೆ ಪ್ರತಿಪಾದನೆ ಮಾಡಲಾಗುತ್ತಿದೆ. ಆದರೆ ಇದನ್ನು ಕೆಲವರು ಒಪ್ಪುವುದಿಲ್ಲ. ಗದಾಯುದ್ಧ ಓದುವವರಿಗೆ ಶ್ವಾಸಕೋಶ ಗಟ್ಟಿ ಇರಬೇಕು. ಗೌತಮ ಬುದ್ಧ ಅಹಿಂಸೆ ಬಗ್ಗೆ ಮಾತನಾಡುತ್ತಾನೆ. ಆದರೆ ಆತ, ಮನೆ, ಹೆಂಡತಿ ಮತ್ತು ಮಕ್ಕಳು ತೊರೆದು ಹೋದಾಗ ಕುಟುಂಬದವರಿಗೆ ಜೀವನ ನಡೆಸಲು ಕಷ್ಟವಾಯಿತು. ಇದು ಹಿಂಸೆ ಅಲ್ಲವೇ’ ಎಂದು ಪ್ರಶ್ನಿಸಿದರು.

‘ಪ್ರಾಣಿಗಳನ್ನು ಕೊಂದು ತಿನ್ನವುದು ಪಾಪ. ಜೈನಧರ್ಮದಲ್ಲಿ ಜೇನುತುಪ್ಪ, ಕಂದಮೂಲ ಪದಾರ್ಥಗಳಿಗೆ ನಿಷೇಧ ಇದೆ. ಹಿಂಸೆ ಅನಿವಾರ್ಯ, ಆದರೆ ಕಡಿಮೆ ಪ್ರಮಾಣದಲ್ಲಿ ಮಾಡುವಂತೆ ಜೈನಧರ್ಮ ಹೇಳಿದೆ. ರನ್ನನ ಗದಾಯುದ್ಧ, ಯಶೋಧರ ಚರಿತೆ, ಪಂಪ ರಾಮಾಯಣದಲ್ಲಿ ಹಿಂಸೆ ವಿಜೃಂಭಿಸುವ ಅವಶ್ಯಕತೆ ಇರಲಿಲ್ಲ. ಜೈನಕಾವ್ಯದಲ್ಲಿ ಹಿಂಸೆಯ ಪರಕಾಷ್ಠೆ ತೋರಿಸಿ ಓದುಗರನ್ನು ಅಹಿಂಸೆ ಮತ್ತು ತ್ಯಾಗದ ಕಡೆಗೆ ಕರೆದೊಯ್ಯುತ್ತದೆ’ ಎಂದು ನುಡಿದರು.

‘ಕನ್ನಡ ಶಾಸ್ತ್ರ ಕೃತಿಗಳು: ಮರು ಓದು’ ಕುರಿತ ಗೋಷ್ಠಿಯಲ್ಲಿ ‘ಚಾವುಂಡರಾಯನ ಲೋಕೋಪಕಾರ’ ಕುರಿತು ವಿಷಯ ಮಂಡಿಸಿದ ಎಸ್‌.ಪಿ.ಪದ್ಮಪ್ರಸಾದ್‌, ‘ಚಾವುಂಡರಾಯ ಎಂದರೆ ಗೊಮ್ಮಟ ಮೂರ್ತಿ ಕೆತ್ತಿಸಿದ ವ್ಯಕ್ತಿ ಅಲ್ಲ. ಈತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಎರಡನೇ ಚಾವುಂಡರಾಯನಾಗಿದ್ದು, ಸುಮಾರು 947 ರಿಂದ 1025ರ ಅವಧಿಯಲ್ಲಿ ಇದ್ದ. ಚಾವುಂಡರಾಯ ಗೊಮ್ಮಟೇಶ್ವರ ಮೂರ್ತಿ ನಿರ್ಮಿಸುವ ಹೊತ್ತಿಗೆ ಎರಡನೇ ಚಾವುಂಡರಾಯನಿಗೆ 34 ವರ್ಷವಾಗಿತ್ತು. ‘ಲೋಕೋಪಕಾರ’ ರಚಿಸಿದ್ದು ಎರಡನೇ ಚಾವುಂಡರಾಯ. ಇದನ್ನು ‘ಗೃಹ ವೈದ್ಯ ಕೈಪಿಡಿ’ ಎಂದು ಕರೆಯಲಾಗುತ್ತದೆ’ ಎಂದು ವಿವರಿಸಿದರು.

ನಾಗವರ್ಮನ ಛಂದೋಂಬುಧಿ ಕುರಿತು ಜಿನದತ್ತ ಹಡಗಲಿ, ರಟ್ಟಕವಿಯ ರಟ್ಟಮತ ಬಗ್ಗೆ ಮಾಧವ ಪೆರಾಜೆ ವಿಚಾರ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT