ಶನಿವಾರ, ಮೇ 28, 2022
31 °C
ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ

ಜಮೀನಿಗೆ ಬಿದ್ದ ಮಣ್ಣು: ಬೆಳೆ ಹಾನಿ

ಜಾನೇಕೆರೆ ಆರ್‌. ಪರಮೇಶ್‌ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಚತುಷ್ಪಥ ಕಾಮಗಾರಿಯಿಂದಾಗಿ ತಾಲ್ಲೂಕಿನ ದೋಣಿಗಾಲ್‌ ಗ್ರಾಮದಲ್ಲಿ ಅಪಾರ ಮೌಲ್ಯದ ಕಾಫಿ, ಅಡಿಕೆ, ಕಾಳುಮೆಣಸು, ಬಾಳೆ ಹಾಗೂ ಭತ್ತದ ಬೆಳೆ ಹಾನಿಯಾಗಿದೆ.

‌ದೋಣಿಗಾಲ್‌ನ ಮಂಜರಾಬಾದ್‌ ಕೋಟೆ ಮುಂಭಾಗ ಯಾವುದೇ ರೀತಿ ತಡೆಗೋಡೆಗಳನ್ನು ನಿರ್ಮಾಣ ಮಾಡದೆ, ಸಾವಿರಾರು ಲೋಡ್‌ಗಳಷ್ಟು ಮಣ್ಣು ತಂದು ತಗ್ಗು ಪ್ರದೇಶಕ್ಕೆ ಹಾಕಲಾಗಿದೆ. ಮಳೆ ನೀರಿನೊಂದಿಗೆ ನೂರಾರು ಲೋಡ್‌ನಷ್ಟು ಮಣ್ಣು ಕೊಚ್ಚಿ ಜಮೀನುಗಳಿಗೆ ಹೋಗಿದೆ.

ಗ್ರಾಮದ ಸರ್ವೆ ನಂಬರ್ 44/1, 2, 3, 4ರಲ್ಲಿ, ಕಿರಣ್‌ ಚಂದನ್‌, ಡಿ.ಸಿ.ಚಂದನ್‌, ರಾಣಿಮಲ್ಲೇಶ್‌, ಪ್ರಿಯಾ ವೀರು, ಸುಲೋಚನಾ‍ ಪ್ರಕಾಶ್‌, ಮುತ್ತಮ್ಮ, ಧನಂಜಯ, ವೀರಭದ್ರ, ವೆಂಕಟೇಶ್, ಡಿ.ವಿ. ವಿರೂಪಾಕ್ಷ, ಸೌರಾಗ್‌ ಅವರಿಗೆ ಸೇರಿದ ಅಡಿಕೆ, ಕಾಫಿ, ಬಾಳೆ, ಭತ್ತದ ಬೆಳೆಗೆ ಹಾನಿಯಾಗಿದೆ. 30 ಎಕರೆಗೂ ಹೆಚ್ಚು ಪ್ರದೇಶದ ಭತ್ತದ ಗದ್ದೆಯ ಮೇಲೆ ಸುಮಾರು 3 ರಿಂದ 4 ಅಡಿ ಮಣ್ಣು ಮುಚ್ಚಿಕೊಂಡಿದೆ. ನಾಟಿ ಮಾಡಲು ಸಿದ್ಧಪಡಿಸಿದ್ದ ಸಸಿ ಮಡಿಗಳೆಲ್ಲವೂ ಮುಚ್ಚಿಹೋಗಿವೆ.

ತೆಗೆದ ಬಾವಿಗಳಿಗೂ ಮಣ್ಣು ನುಗ್ಗಿದೆ ಎಂದು ರೈತ ಡಿ.ಸಿ.ಚಂದನ್‌ ಶನಿವಾರ ಹೇಳಿದರು.

‘100 ಅಡಿಗೂ ಹೆಚ್ಚು ಎತ್ತರಕ್ಕೆ ಮಣ್ಣು ತಂದು ಸುರಿದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುತ್ತಿಗೆದಾರರು, ಯಾವುದೇ ರೀತಿಯ ತಡೆಗೋಡೆ ನಿರ್ಮಾಣ ಮಾಡಿಲ್ಲ. ಮರಳಿನ ಮೂಟೆಗಳನ್ನೂ ಹಾಕದೆ ಬೇಕಾಬಿಟ್ಟಿಯಾಗಿ ಮಣ್ಣು ಸುರಿದಿರುವ ಪರಿಣಾಮ ಪುನಃ ಸರಿಪಡಿಸಲು ಸಾಧ್ಯವಾಗದ ಮಟ್ಟಿಗೆ ಕೃಷಿಭೂಮಿ ಹಾಗೂ ಬೆಳೆ ಹಾನಿಯಾಗಿದೆ’ ಎಂದು ಆರೋಪಿಸಿದರು.

‌‘ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಲವು ಬಾರಿ ದೂರವಾಣಿ ಮೂಲಕ ಹಾಗೂ ಖುದ್ದು ಭೇಟಿ ನೀಡಿ ದೂರು ನೀಡಿದರೂ ಯಾವುದೇ ಉಪಯೋಗ ಆಗಿಲ್ಲ’ ಎಂದು ಅಳಲು ತೋಡಿಕೊಂಡರು.

‘ದೋಣಿಗಾಲ್‌ನಲ್ಲಿ ಗುತ್ತಿಗೆದಾರರು ಅವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಣೆ ಮಾಡಿರುವುದರಿಂದ ರೈತರ ಕಾಫಿ ಹಾಗೂ ಭತ್ತದ ಗದ್ದೆಗೆ ಮಣ್ಣು ನುಗ್ಗಿ ಹಾನಿಯಾಗಿರುವುದಾಗಿ ರೈತರು ಲಿಖಿತ ದೂರು ನೀಡಿದ್ದು, ಈ ಸಂಬಂಧ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ’ ಎಂದು ಇಲಾಖೆ ಎಂಜಿನಿಯರ್‌ ‘ಪ್ರಜಾವಾಣಿ’ ಗೆ ಹೇಳಿದರು.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಭಾರಿ ಬೇಜವಾಬ್ದಾರಿಯಿಂದ ಚತುಷ್ಪಥ ಕಾಮಗಾರಿ ಮಾಡುತ್ತಿದ್ದಾರೆ. ಇವರ ನಿರ್ಲಕ್ಷ್ಯದಿಂದ ನಿತ್ಯ ಸಾವಿರಾರು ಪ್ರಯಾಣಿಕರು, ರೈತರು ಸಮಸ್ಯೆ ಎದುರಿಸಬೇಕಾಗಿದೆ. ಈ ಸಂಬಂಧ ಈಗಾಗಲೇ ಇಲಾಖೆಯ ಯೋಜನಾ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ’ ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.