ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಕಾಮಗಾರಿ ಚುರುಕುಗೊಳಿಸಲು ಸೂಚನೆ

Published 15 ಜುಲೈ 2023, 14:23 IST
Last Updated 15 ಜುಲೈ 2023, 14:23 IST
ಅಕ್ಷರ ಗಾತ್ರ

ಕೊಣನೂರು: ‘ನಾನು ಮಂತ್ರಿಯಾಗಿದ್ದಾಗ ಬಜೆಟ್‌ನಲ್ಲಿ ಒಪ್ಪಿಗೆ ಪಡೆದಿದ್ದ ಕಣಿಯಾರು ಮತ್ತು ಕೊಣನೂರು ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಕುರಿತು ಅಧಿಕಾರಿಗಳು ಮತ್ತು ನೀರಾವರಿ ಸಚಿವರೊಂದಿಗೆ ಮಾತನಾಡಿದ್ದೇನೆ’ ಎಂದು ಶಾಸಕ ಎ.ಮಂಜು ತಿಳಿಸಿದರು.

ಶನಿವಾರ ಕೊಡಗಿನ ಹಾರಂಗಿ ಅಣೆಕಟ್ಟೆಯ ವಸತಿ ಗೃಹದಲ್ಲಿ ಹಾರಂಗಿ ವಿಭಾಗದ ಅಧೀಕ್ಷಕ ಎಂಜಿನಿಯರ್ ಕೆ.ಕೆ.ರಘುಪತಿ ಸೇರಿದಂತೆ ಹಾರಂಗಿ ವಿಭಾಗದ ಅಧಿಕಾರಿಗಳ ಮತ್ತು ಗುತ್ತಿಗೆದಾರರೊಂದಿಗೆ ಅರಕಲಗೂಡು ತಾಲ್ಲೂಕಿನ ನೀರಾವರಿ ಯೋಜನೆಯ ಕಾಮಗಾರಿಗಳ ಕುರಿತಂತೆ ಸಭೆ ನಡೆಸಿದ ಅವರು, ಕಾಮಗಾರಿಗಳ ಪ್ರಗತಿಯ ಮಾಹಿತಿ ಪಡೆದರು.

₹ 106 ಕೋಟಿ ವೆಚ್ಚದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಯ ಕಾಮಗಾರಿಯು ನನೆಗುದಿಗೆ ಬಿದ್ದಿರುವುದಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಹರಿಹಾಯ್ದರು.

‘ಅರಕಲಗೂಡು ತಾಲ್ಲೂಕು ಮತ್ತು ಸೋಮವಾರಪೇಟೆ ತಾಲ್ಲೂಕಿನ 150 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಮಹತ್ವದ 2019 ರಲ್ಲಿ ಪ್ರಾರಂಭಿಸಲಾಗಿತ್ತು. ಯೋಜನೆಯ ಶೇ 65 ರಷ್ಟು ಕಾಮಗಾರಿಯ ಬಿಲ್‌ ಅನ್ನು ಗುತ್ತಿಗೆ ಪಡೆದಿರುವ ಯುನೈಟೆಡ್ ಗ್ಲೋಬಲ್ ಕಂಪನಿಗೆ ನೀಡಲಾಗಿದೆ. ಕಾಮಗಾರಿಯ ಗಡುವು ಮುಗಿದಿದ್ದರೂ ಶೇ 40 ರಷ್ಟು ಮಾತ್ರ ಕೆಲಸವಾಗಿಲ್ಲ’ ಎಂದು ಹೇಳಿದರು.

ಮಹತ್ವಾಕಾಂಕ್ಷೆಯ ಯೋಜನೆ ಕಾರ್ಯಗತಗೊಳಿಸಲು ಮಾಜಿ ಶಾಸಕರು ಆಸಕ್ತಿ ವಹಿಸದ ಕಾರಣ ಅಪೂರ್ಣಗೊಂಡಿದ್ದು ರೈತಾಪಿ ವರ್ಗದ ಜನರಿಗೆ ಅನ್ಯಾಯ ಮಾಡಲಾಗಿದೆ.
ಎ.ಮಂಜು, ಶಾಸಕ

ಯೋಜನೆಯಡಿ ನೀರು ತುಂಬಿಸಲು ಗುರುತಿಸಿರುವ ಕೆಲವು ಕೆರೆಗಳು ನೀರು ಸಂಗ್ರಹಣಾ ತೊಟ್ಟಿಗಿಂತ ಎತ್ತರದಲ್ಲಿದ್ದು, ಆ ಕೆರೆಗಳಿಗೆ ನೀರು ತುಂಬಿಸಲು ಎಚ್ಚರಿಕೆ ವಹಿಸಿ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.

ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಗೆ ಕರಾರಿನ ಪ್ರಕಾರ ಇದ್ದ 18 ತಿಂಗಳ ಗಡುವು ಮೀರಿದ್ದು, ಇದುವರೆಗೂ ನಿರೀಕ್ಷಿತ ಪ್ರಮಾಣದ ಕೆಲಸವಾಗಿಲ್ಲ. ಸೆಪ್ಟೆಂಬರ್ 6 ರ ಒಳಗೆ ಜಾಕ್ವೆಲ್ ಲಿಫ್ಟ್‌ನ ನಿರ್ಮಾಣ ಕಾಮಗಾರಿ ಮುಗಿಯಬೇಕು. ಅಧಿಕಾರಿಗಳು ಗಡುವಿನೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಯೋಜನೆಗೆ ಅಗತ್ಯವಿರುವ ಜಮೀನು ಸ್ವಾಧೀನಕ್ಕೆ ಪಡೆಯಲು ₹ 11 ಕೋಟಿ ಮೀಸಲಿದ್ದರೂ ಇದುವರೆಗೆ ಕೆಲ ರೈತರಿಗೆ ಪರಿಹಾರ ನೀಡಿ ಜಮೀನು ಸ್ವಾಧೀನಕ್ಕೆ ಪಡೆದುಕೊಳ್ಳುವ ಕೆಲಸವಾಗಿಲ್ಲ. ಈ ಕುರಿತಂತೆ ನೀರಾವರಿ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಜಮೀನನ್ನು ನೀಡಬೇಕಿರುವ ರೈತರ ಸಭೆಯಲ್ಲಿ ಮಲ್ಲಿಪಟ್ಟಣದಲ್ಲಿ ಕರೆದು, ಕ್ರಮ ಕೈಗೊಳ್ಳಲಾಗುವುದು. ಕಾಮಗಾರಿಗೆ ವಿಳಂಬವಾಗಂದಂತೆ ನೋಡಿಕೊಳ್ಳಲಾಗುವುದು ಎಂದರು.

2018 ರಲ್ಲಿ ಪ್ರಾರಂಭವಾದ ಹಾರಂಗಿ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿಯಡಿ ಹಾನಗಲ್ ಕೆರೆಯ ಸುತ್ತ ರಕ್ಷಣಾ ಗೋಡೆ ಮತ್ತು ಕೆಲವೆಡೆ ಅಡ್ಡ ಮೋರಿಗಳ ನಿರ್ಮಾಣ ಪೂರ್ಣವಾಗಿಲ್ಲ. ಇದರಿಂದ ನಾಲೆಯ ಮುಂದಿನ ಹಂತದ 31 ಸಾವಿರ ಎಕರೆ ಜಮೀನಿಗೆ ಸಮರ್ಪಕವಾಗಿ ನೀರೊದಗಿಸಲು ಕಷ್ಟವಾಗುತ್ತಿದೆ. 5 ವರ್ಷಗಳಾದರೂ ಕಾಮಗಾರಿ ಮುಗಿಸಿದ ಗುತ್ತಿಗೆದಾರನಿಗೆ ದಂಡ ಹಾಕಿ ಬೇಗನೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು.

ಕಾಮಗಾರಿ ಮುಗಿಸಲು ನಿರ್ಲಕ್ಷ್ಯ ವಹಿಸಿರುವ ಹಾರಂಗಿ ಉಪ ವಿಭಾಗದ ಕೊಣನೂರು ಎಂಜಿನಿಯರ್ ಜಯರಾಂ ಅವರಿಗೆ ನೋಟಿಸ್ ನೀಡುವಂತೆ ಅಧೀಕ್ಷಕ ಎಂಜಿನಿಯರ್ ಕೆ.ಕೆ. ರಘುಪತಿ ಅವರಿಗೆ ಸೂಚಿಸಿದರು.

ಹಾರಂಗಿ ಮಹಾ ಮಂಡಲದ ಅಧ್ಯಕ್ಷ ಎಸ್.ಸಿ. ಚೌಡೇಗೌಡ, ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಯರಾಮು, ಸಹಾಯಕ ಎಂಜಿನಿಯರ್ ವರಲಕ್ಷ್ಮಿ, ಹರಿಕೃಷ್ಣ, ಗೌತಮ್, ಯೋಜನಾಧಿಕಾರಿ ಪುಷ್ಪಲತಾ. ಯುನೈಟೆಡ್ ಗ್ಲೋಬಲ್ ಕಂಪನಿಯ ಅಧಿಕಾರಿಗಳು ಇದ್ದರು.

ಗುತ್ತಿಗೆದಾರರಿಗೆ ಏಕೆ ವಹಿಸಬೇಕಿತ್ತು?

ಹಾರಂಗಿ ಎಡದಂಡೆ ನವೀಕರಣ ಕಾಮಗಾರಿ ಪೂರ್ಣಗೊಳಿಸಲು ಕೆರೆಯಲ್ಲಿ ತುಂಬಿರುವ ನೀರು ಹೊರಹಾಕಿ ಗುತ್ತಿಗೆದಾರರಿಗೆ ಸಹಕರಿಸಲಾಗಿದೆ. ಆದರೂ ಕಾಮಗಾರಿ ಮುಗಿಸದೇ ಗುತ್ತಿಗೆದಾರ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಧೀಕ್ಷಕ ಎಂಜಿನಿಯರ್ ಕೆ.ಕೆ. ರಘುಪತಿ ಹೇಳಿದರು.

ಹೂಳು ತುಂಬಿಕೊಂಡು ನಾಲೆ ಹಾಳಾಗಿದೆ. ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಮುಗಿಸಲು ಮೀನಮೇಷ ಎಣಿಸಲಾಗುತ್ತಿದೆ. ಇಲಾಖೆ ವತಿಯಿಂದ ಕಾಮಗಾರಿ ನಡೆಸುವಂತಿದ್ದರೆ ನಮಗೆ ಲಾಭ ಉಳಿಯುತ್ತಿತ್ತು. ಗುತ್ತಿಗೆದಾರರಿಗೆ ಏಕೆ ವಹಿಸಬೇಕಿತ್ತು ಎಂದು ಕಂಪನಿ ಮೇಲ್ವಿಚಾಕ ಷಣ್ಮುಗಂ ಅವರನ್ನು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT