ಗುರುವಾರ , ಸೆಪ್ಟೆಂಬರ್ 23, 2021
28 °C

ಮಂಗಗಳ ಹತ್ಯೆ : ಡಿ.ಸಿ, ಎಸ್ಪಿ, ಡಿಎಫ್‌ಒ ಸ್ಥಳ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮಂಗಗಳನ್ನು ಹತ್ಯೆ ಮಾಡಿ ಚೀಲದಲ್ಲಿ ತಂದು ಬಿಸಾಡಿದ್ದ ಬೇಲೂರು ತಾಲ್ಲೂಕಿನ ಚೌಡನಹಳ್ಳಿ
ಗ್ರಾಮಕ್ಕೆ ಶನಿವಾರ ಜಿಲ್ಲಾಧಿಕಾರಿ ಆರ್.ಗಿರೀಶ್, ಪೋಲಿಸ್ ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸಗೌಡ , ಉಪ ಅರಣ್ಯ
ಸಂರಕ್ಷಣಾಧಿಕಾರಿ ಬಸವರಾಜ್ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.

ಚೌಡನಹಳ್ಳಿ ರಸ್ತೆ ಬದಿಯಲ್ಲಿ ಬುಧವಾರ ರಾತ್ರಿ ಬಿಸಾಡಿದ್ದ ಚೀಲದಲ್ಲಿ 38 ಮೃತಪಟ್ಟ ಮಂಗಗಳು, ಸಾವು–ಬದುಕಿನ ನಡುವೆ ಸೆಣಸುತ್ತಿದ್ದ 15 ಮಂಗಗಳು ಕಂಡು ಬಂದಿದ್ದವು. ಅಪರಿಚಿತ ವ್ಯಕ್ತಿಗಳು ಮತ್ತು ಮಂಗಗಳ ಹತ್ಯೆ ಮಾಡುವವರ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. 

ನಂತರ ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾಧಿಕಾರಿ ಆರ್. ಗಿರೀಶ್, ಮಂಗಗಳ ದೇಹವನ್ನು ಮರಣೋತ್ತರ
ಪರೀಕ್ಷೆ ನಡೆಸಲಾಗಿದೆ. ಅಂಗಾಂಗ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ
ಘಟನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಎಲ್ಲ ರೀತಿಯ ತನಿಖೆ ನಡೆಸುತ್ತಿದೆ. ತಪ್ಪಿತಸ್ಥರ ವಿರುದ್ಧ
ಕಾನುನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಮಂಗಗಳ ಮಾರಣಹೋಮದ ಬಗ್ಗೆ ಹೈಕೋರ್ಟ್‌ ಸ್ವಯಂ ಪ್ರೇರಿತ ಸಾರ್ವಜನಿಕ ಅರ್ಜಿ ದಾಖಲಿಸಿಕೊಂಡಿದೆ.
ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಪೊಲಿಸ್‌ ವರಿಷ್ಠಾಧಿಕಾರಿ, ಪ್ರಾಣಿ
ಕಲ್ಯಾಣ ಮಂಡಳಿಯನ್ನು ಪ್ರತಿವಾದಿಗಳಾಗಿಸಿದೆ. ಕೋರ್ಟ್‌ ಆದೇಶದಂತೆ ತನಿಖೆ ನಡೆಸಿ, ಆ.4 ರೊಳಗೆ
ವರದಿ ಸಲ್ಲಿಸಲಾಗುವುದು ಎಂದರು.

ಈ ಪ್ರಕರಣ ಕುರಿತಂತೆ ಯಾವುದೇ ರೀತಿಯ ಮಾಹಿತಿ ದೊರೆತಲ್ಲಿ ಜಿಲ್ಲಾಧಿಕಾರಿ ಕಚೇರಿ, ಪೊಲೀಸ್
ವರಿಷ್ಠಾಧಿಕಾರಿ ಹಾಗೂ ತಹಶೀಲ್ದಾರ್‌ ಅವರನ್ನು ನೇರವಾಗಿ ಭೇಟಿ ಮಾಡಿ ಅಥವಾ ದೂರವಾಣಿ ಕರೆ ಮೂಲಕ
ಮಾಹಿತಿ ನೀಡಬಹುದು. ಅಂತಹವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪೋಲಿಸ್ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ ಗೌಡ ಮಾತನಾಡಿ, ಮಂಗಗಳ ಹತ್ಯೆ ಬಗ್ಗೆ ಪೋಲಿಸ್, ಕಂದಾಯ
ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ತನಿಖೆ ನಡೆಸುತ್ತಿದ್ದು, ಜುಲೈ 28 ರ ರಾತ್ರಿ ಸುಮಾರು 9 ರಿಂದ 11
ಗಂಟೆಯ ಸಮಯದಲ್ಲಿ ಈ ಕೃತ್ಯ ನಡೆದಿದೆ. ಗ್ರಾಮಸ್ಥರ ಮಾಹಿತಿ ಪ್ರಕಾರ ಬೆಳೆ ಹಾನಿ ಮಾಡುತ್ತದೆ ಎಂಬ
ಕಾರಣಕ್ಕೆ ಮಂಗಗಳ ಸಾಮೂಹಿಕ ಹತ್ಯೆ ನಡೆಸಿರಬಹುದು ಎನ್ನಲಾಗುತ್ತಿದೆ. ಕಿರಿಕಿರಿ ಉಂಟು ಮಾಡುತ್ತಿರುವ
ಕಾರಣಕ್ಕೂ ಹತ್ಯೆ ಮಾಡಿರುವ ಸಾಧ್ಯತೆ ಇರಬಹುದು ಎಂದರು.

ಜಿಲ್ಲೆಯಲ್ಲಿ ಕಾಡಾನೆ ದಾಳಿಯ ಬಗ್ಗೆ ದೂರುಗಳು ಇವೆ. ಆದರೆ, ಮಂಗಗಳ ಹಾವಳಿ ಬಗ್ಗೆ ದೂರು ಬಂದಿರಲಿಲ್ಲ.
ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು
ವಿವರಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್ ಮಾತನಾಡಿ, ಸಹಾಯಕ ಅರಣ್ಯಾಧಿಕಾರಿ ನೇತೃತ್ವದಲ್ಲಿ ಜಂಟಿ
ತಂಡ ರಚಿಸಿದ್ದು, ಈಗಾಗಲೇ ತನಿಖೆ ಆರಂಭಗೊಂಡಿದೆ. ಎರಡು ದಿನದಲ್ಲಿ ಫಲಿತಾಂಶ ದೊರೆಯುವ
ನಿರೀಕ್ಷೆಯಲ್ಲಿದ್ದೇವೆ. ಜಿಲ್ಲೆಯಲ್ಲಿ ಈ ರೀತಿ ಅಮಾನವೀಯ ಕೃತ್ಯ ಮೊದಲ ಬಾರಿಗೆ ನಡೆದಿದೆ. ಸಕಲೇಶಪುರ, ಮೂಡಿಗೆರೆ, ಕಡೂರು ಭಾಗದಲ್ಲಿ ಮಂಗಗಳ ಹಾವಳಿ ಇದ್ದರೂ ದೂರು ಬಂದಿರಲಿಲ್ಲ. ಮಂಗಗಳ ಹಿಡಿಯುವವರಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಪ್ರತೀಕ್ ಬಾಯಲ್, ಡಿವೈಎಸ್ಪಿ ನಾಗೇಶ್, ತಹಶೀಲ್ದಾರ್ ಮೋಹನ್ ಹಾಗೂ ಅರಣ್ಯ,
ಪೊಲೀಸ್ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು