ಗುರುವಾರ , ಆಗಸ್ಟ್ 11, 2022
21 °C
ಕಿಸಾನ್‌ ಸಮ್ಮಾನ್‌ ಯೋಜನೆಗೆ ಎರಡು ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆ

3,871 ರೈತರಿಗೆ ಸಹಾಯಧನ ಸ್ಥಗಿತ

ಜೆ.ಎಸ್‌.ಮಹೇಶ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೃಷಿ ಚಟುವಟಿಕೆಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಸಹಾಯಧನ ಪಡೆಯಲು ಅರ್ಹತೆ ಇಲ್ಲದಿದ್ದರೂ ಅರ್ಜಿ ಸಲ್ಲಿಸಿದ್ದ ಜಿಲ್ಲೆಯ 3,871 ರೈತರನ್ನು ಯೋಜನೆಯಿಂದ ಅನರ್ಹಗೊಳಿಸಲಾಗಿದೆ.

ಜಿಲ್ಲೆಯ 2,70,023 ರೈತರು ಅರ್ಜಿ ಸಲ್ಲಿಸಿ, ಯೋಜನೆಗೆ ನೋಂದಣಿ ಮಾಡಿಕೊಂಡಿದ್ದರು. ವಾರ್ಷಿಕ ₹ 6 ಸಾವಿರಗಳನ್ನು ಮೂರು ಕಂತಗಳಲ್ಲಿ ರೈತರ ಖಾತೆಗೆ ನೇರ ಜಮೆ ಮಾಡಲಾಗುತ್ತಿತ್ತು. ಇದಕ್ಕಾಗಿ ಸರ್ಕಾರ ಕೆಲ ನಿಬಂಧನೆ ವಿಧಿಸಿತ್ತು. ಅರ್ಹತೆ ಇಲ್ಲದಿದ್ದರೂ ಸಾವಿರಾರು ರೈತರು ಅರ್ಜಿ ಸಲ್ಲಿಸಿದರು. ರಾಜ್ಯದ 85,206 ರೈತರನ್ನು ಯೋಜನೆಯಿಂದ ಅನರ್ಹಗೊಳಿಸಲಾಗಿದೆ.

ಅರ್ಜಿದಾರರ ದಾಖಲೆಗಳ ಪರಿಶೀಲಿಸಿರುವ ಕೇಂದ್ರ, ಅನರ್ಹ ರೈತರನ್ನು ಯೋಜನೆಯಿಂದ ಕೈ ಬಿಡಬೇಕು ಹಾಗೂ ಇಲ್ಲಿವರೆಗೆ ಸಹಾಯಧನ ಪಾವತಿಯಾಗಿದ್ದರೆ ಅದನ್ನು ವಾಪಸ್ ಪಡೆಯುವಂತೆ ಕೃಷಿ ಇಲಾಖೆಗೆ ಸೂಚಿಸಿದೆ. ಹಾಗಾಗಿ ಜಿಲ್ಲೆಯ 3,871 ರೈತರು ಅನರ್ಹಗೊಂಡಿದ್ದಾರೆ.

ಸಹಾಯಧನ ಪಡೆಯುವ ರೈತರು ಆದಾಯ ತೆರಿಗೆ ಪಾವತಿದಾರರಾಗಿರಬಾರದು. ₹ 10 ಸಾವಿರ ಮೇಲ್ಪಟ್ಟ ಪಿಂಚಣಿ ಪಡೆಯುತ್ತಿರಬಾರದು. ಈ ಷರತ್ತು ಪಾಲಿಸದೆ ರೈತರು ಅರ್ಜಿ ಸಲ್ಲಿಸಿ ಎರಡು ವರ್ಷದಿಂದ ಸೌಲಭ್ಯ ಪಡೆಯುತ್ತಿದ್ದಾರೆ. ಈಗ ಅವರೆಲ್ಲ ಹಣ ವಾಪಸ್ ಮಾಡಬೇಕಾಗಿದೆ. ನೋಟಿಸ್ ಕಳುಹಿಸಲು ಇಲಾಖೆ ನಿರ್ಧರಿಸಿದೆ.

ಷರತ್ತು ಮೀರಿ ನೋಂದಣಿ ಮಾಡಿಕೊಂಡಿದ್ದವರು ಹಣ ವಾಪಸ್ ಮಾಡಬೇಕು. ಇಲ್ಲವಾದರೆ ಕ್ರಮ ಜರುಗಿಸಬೇಕಾಗುತ್ತದೆ ಎಂಬ ಸರ್ಕಾರದ ಸೂಚನೆಗೆ ಹಲವು ಜಿಲ್ಲೆಗಳ ರೈತರು ಸಮಜಾಯಿಷಿ ನೀಡಿದ್ದಾರೆ. ಆದರೆ, ಜಿಲ್ಲೆಯ ರೈತರು ನೋಂದಣಿ ರದ್ದತಿಗೆ ಅರ್ಜಿ ಸಲ್ಲಿಸಿರಲಿಲ್ಲ.

‘ಸರ್ಕಾರದ ವಿಧಿಸಿರುವ ಷರತ್ತುಗಳ ಬಗ್ಗೆ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಲಿಲ್ಲ. ನಿಯಮದ ಪ್ರಕಾರವೇ ಅರ್ಜಿ ಸಲ್ಲಿಸಿದ್ದೇವೆ. ರೈತರ ಖಾತೆಗಳಿಗೆ ಹಣ ಸಂದಾಯವಾಗಿದೆ. ಈಗ ಹಣ ವಾಪಸ್‌ ಮಾಡಬೇಕೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇಲಾಖೆಯಿಂದ ಈವರೆಗೂ ನೋಟಿಸ್‌ ಬಂದಿಲ್ಲ. ರೈತ ನಾಯಕರ ಜತೆ ಚರ್ಚಿಸಲಾಗುವುದು’ ಎಂದು ರೈತರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.