ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾವಗಲ್: 5 ಹೆಕ್ಟೇರ್‌ಗೆ ಕುಸಿದ ಸೂರ್ಯಕಾಂತಿ ಕೃಷಿ

ಪ್ರಕೃತಿ ವಿಕೋಪ, ಹಕ್ಕಿಗಳ ಉಪಟಳದಿಂದ ಬೆಳೆ ಬಿತ್ತನೆಗೆ ರೈತರ ಹಿಂದೇಟು
ದೀಪಕ್‌ ಶೆಟ್ಟಿ
Published 3 ಆಗಸ್ಟ್ 2024, 8:23 IST
Last Updated 3 ಆಗಸ್ಟ್ 2024, 8:23 IST
ಅಕ್ಷರ ಗಾತ್ರ

ಜಾವಗಲ್: ಗ್ರಾಮದಲ್ಲಿ ವರ್ಷದಿಂದ ವರ್ಷಕ್ಕೆ ರೈತರು ವಾಣಿಜ್ಯ ಬೆಳೆಗಳಾದ ಶುಂಠಿ ಹಾಗೂ ದಾಳಿಂಬೆ ಬೆಳೆಯ ವ್ಯಾಪ್ತಿ ಹೆಚ್ಚಿಸುತ್ತಿದ್ದು, ಹೋಬಳಿಯಲ್ಲಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಪಾರಂಪರಿಕವಾಗಿ ಬೆಳೆಯಲಾಗುತ್ತಿದ್ದ ಸೂರ್ಯಕಾಂತಿ ಬೆಳೆಯ ಕೃಷಿಯು ಕ್ಷೀಣಿಸುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸೂರ್ಯಕಾಂತಿ ಬೆಳೆ ಹೋಬಳಿಯಿಂದಲೇ  ಕಣ್ಮರೆಯಾಗಲಿದೆ ಎಂಬುದು ರೈತರ ಆತಂಕವಾಗಿದೆ.

 ಹೋಬಳಿಯಲ್ಲಿ ಎರಡು ವರ್ಷಗಳಿಂದ ಸೂರ್ಯಕಾಂತಿ ಬಿತ್ತನೆ ಮಾಡುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. 2022ರಲ್ಲಿ 550 ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು 5 ಟನ್‌ ಸೂರ್ಯಕಾಂತಿ ಬಿತ್ತನೆ ಮಾಡಲಾಗಿತ್ತು. 2023ನೇ ಸಾಲಿನಲ್ಲಿ ಈ ಪ್ರಮಾಣ ಕಡಿಮೆಯಾಗಿದ್ದು, ಕೇವಲ 70 ಹೆಕ್ಟೇರ್ ಪ್ರದೇಶದಲ್ಲಿ 234 ಕೆ.ಜಿ.ಸೂರ್ಯಕಾಂತಿ ಬೀಜ ಬಿತ್ತನೆ ಮಾಡಲಾಗಿತ್ತು. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ನಿರಂತರ ಮಳೆ ಹಾಗೂ ಪಕ್ಷಿಗಳ ಕಾಟದಿಂದ  ನಷ್ಟ ಅನುಭವಿಸುವಂತಾಗಿತ್ತು ಎಂದು ರೈತರು ಹೇಳಿದರು.

ಸತತ ಎರಡು ವರ್ಷ ಸೂರ್ಯಕಾಂತಿ  ಬಿತ್ತನೆ ಮಾಡಿ, ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗದೆ ನಷ್ಟ ಅನುಭವಿಸಿದ ರೈತರು, ಈ ವರ್ಷ ಆಸಕ್ತಿ ತೋರಿಲ್ಲ. ಈ ಬಾರಿ ರಾಗಿ, ಮುಸುಕಿನ ಜೋಳ, ಅಲಸಂದೆ  ಹಾಗೂ ಹತ್ತಿ ಬೆಳೆಯ ಮೊರೆ ಹೋಗಿದ್ದಾರೆ.

‘ಈ ವರ್ಷ ಜಾವಗಲ್ ಹೋಬಳಿಯ ರೈತ ಸಂಪರ್ಕ ಕೇಂದ್ರದ ಮೂಲಕ ಕೇವಲ 30 ಕೆ.ಜಿ. ಸೂರ್ಯಕಾಂತಿ ಬಿತ್ತನೆ ಬೀಜ ವಿತರಿಸಲಾಗಿದ್ದು, ಅಂದಾಜು 5 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ  ಬಿತ್ತನೆಯಾಗಿದೆ’ ಎಂದು ರೈತಸಂಪರ್ಕ ಕೇಂದ್ರದ ಅಧಿಕಾರಿ ಸುಬ್ರಹ್ಮಣ್ಯ ತಿಳಿಸಿದರು.

ಬಿತ್ತನೆ ಹಾಗೂ ಕಾಳು ಕಟ್ಟುವ ಸಮಯದಲ್ಲಿ ನಿರಂತರವಾಗಿ ಸುರಿವ ಮಳೆ, ಪಕ್ಷಿಗಳ ಕಾಟ ಹಾಗೂ ಕೃಷಿ ಜಮೀನಿಗೆ ಹೆಚ್ಚಿಗೆ ಕೀಟನಾಶಕಗಳನ್ನು ಬಳಸುತ್ತಿರುವ ಪರಿಣಾಮ ಜೇನುನೊಣಗಳ ಸಂಖ್ಯೆ ಕುಸಿದು ಪರಾಗ ಸ್ಪರ್ಶಕ್ಕೆ ತೊಡಕುಂಟಾಗಿ  ಸೂರ್ಯಕಾಂತಿ ಇಳುವರಿ ತೀವ್ರ ಕುಸಿತ ಕಂಡಿದೆ. ಹೀಗಾಗಿ, ಸೂರ್ಯಕಾಂತಿ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಕೃಷಿಕರು ನೀಡುವ ಮಾಹಿತಿ.

 ಕೊಳವೆ ಬಾವಿಗಳ ಮೂಲಕ ನೀರಾವರಿ ವ್ಯವಸ್ಥೆಯನ್ನು ಹೊಂದಿರುವ ರೈತರು ವಾಣಿಜ್ಯ ಬೆಳೆಗಳಾದ ಶುಂಠಿ, ಹತ್ತಿ, ದಾಳಿಂಬೆ, ಬಾಳೆ ಮುಂತಾದ ಹೆಚ್ಚಿನ ಆದಾಯ ತಂದುಕೊಡುವ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ.

ಕೊಳವೆಬಾವಿಯನ್ನು ಹೊಂದಿರುವ ಕೆಲ ರೈತರು ತಮ್ಮ ಜಮೀನುಗಳನ್ನು ಒಂದು ವರ್ಷಕ್ಕೆ ಪ್ರತಿ ಎಕರೆಗೆ ₹50 ಸಾವಿರದಿಂದ ₹70 ಸಾವಿರದವರೆಗೆ ಶುಂಠಿ ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ನೀಡುತ್ತಿದ್ದು, ಈ ಮೂಲಕ ಕೃಷಿಯಿಂದ ಉಂಟಾಗುತ್ತಿದ್ದ ನಷ್ಟವನ್ನು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ.

ಮುಸುಕಿನ ಜೋಳ, ಶುಂಠಿ, ರಾಗಿ ಬಿತ್ತನೆಗೆ ರೈತರ ಆಸಕ್ತಿ ಈ ವರ್ಷ 30 ಕೆ.ಜಿ. ಸೂರ್ಯಕಾಂತಿ ಬಿತ್ತನೆ ಬೀಜ ವಿತರಣೆ ಕಡಿಮೆ ಆಗುತ್ತಿರುವ ಇಳುವರಿ: ನಷ್ಟದಿಂದ ಬೇಸತ್ತ ರೈತರು
2 ವರ್ಷಗಳಿಂದ ಸೂರ್ಯಕಾಂತಿ ಬೆಳೆಯಿಂದ ನಷ್ಟ ಉಂಟಾಗುತ್ತಿದ್ದು ಈ ಬಾರಿ ಅದರ ಬದಲಿಗೆ ಮುಸುಕಿನ ಜೋಳ ರಾಗಿ ಬಿತ್ತನೆ ಮಾಡುತ್ತಿದ್ದೇನೆ.
ಸೊಮಣ್ಣ ಗ್ರಾಮದ ರೈತ
ಹೋಬಳಿಯ ರೈತ ಸಂಪರ್ಕ ಕೇಂದ್ರದ ಮೂಲಕ 45 ಟನ್‌ ರಾಗಿ ಬೀಜ ವಿತರಿಸಲಾಗಿದೆ. ರಾಗಿ ಬಿತ್ತನೆ ಆಸಕ್ತಿ ತೋರುತ್ತಿದ್ದು ಸೂರ್ಯಕಾಂತಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ.
ಡಿ.ಜೆ. ಸುಬ್ರಹ್ಮಣ್ಯ ಜಾವಗಲ್ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT