ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ರಕ್ಷಣೆಗೆ ಟ್ಯಾಂಕರ್ ನೀರ ಮೊರೆ

ಬಿರು ಬೇಸಿಗೆ :ಟ್ಯಾಂಕರ್ ನೀರಿನ ಮೂಲಕ ಬೆಳೆ ಉಳಿಸಿಕೊಳ್ಳುವ ಸಾಹಸಕ್ಕೆ ಮುಂದಾದ ರೈತರು
ದೀಪಕ್ ಶೆಟ್ಟಿ
Published 28 ಏಪ್ರಿಲ್ 2024, 5:46 IST
Last Updated 28 ಏಪ್ರಿಲ್ 2024, 5:46 IST
ಅಕ್ಷರ ಗಾತ್ರ

ಜಾವಗಲ್: ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ಸುರಿದ ಮಳೆಯನ್ನು ನಂಬಿ ಗ್ರಾಮದ ಹಲವಾರು ರೈತರು ತಮ್ಮ ಜಮೀನಿನ ಮಣ್ಣುನ್ನು  ಹದ ಮಾಡಿಕೊಳ್ಳುವುದರ ಜೊತೆಗೆ ಹತ್ತಿ, ಜೋಳ, ಮೊದಲಾದ ಬಿತ್ತನೆ ಬೀಜಗಳನ್ನು ಬಿತ್ತನೆ ಮಾಡಿ ಮುಗಿಸಿದ್ದಾರೆ.


ಆದರೆ ಬಿತ್ತನೆ ಮಾಡಿದ ಬೀಜ ಮೊಳಕೆ ಬರುವ ಸಮಯಕ್ಕೆ ಸರಿಯಾಗಿ ಮಳೆ ಕೈಕೊಟ್ಟಿರುವ ಪರಿಣಾಮ, ಮಳೆಗೆ ಬಿತ್ತಿದ ಬೆಳೆ ಮೊಳಕೆ ಹೊಡೆಯುವ ಹಂತದಲ್ಲಿಯೇ ಒಣಗಲು ಆರಂಭಿಸಿದ್ದು, ಅವುಗಳನ್ನು ಉಳಿಸಿಕೊಳ್ಳಲು ಗ್ರಾಮದ ಹಲವಾರು ರೈತರು ಜನರೇಟರ್ ಹಾಗೂ ಟ್ಯಾಂಕರ್ ನೀರಿನ ಮೊರೆ ಹೋಗಿ ಬೆಳೆ ಉಳಿಸಿಕೊಳ್ಳುವ ಸಾಹಸಕ್ಕೆ ಮುಂದಾಗಿದ್ದಾರೆ.

ಗ್ರಾಮದ ಮಂಜುನಾಥ್ ಎಂಬ ರೈತ ಕಳೆದ ವಾರ ಗ್ರಾಮದಲ್ಲಿ ಸುರಿದ ಮಳೆಯನ್ನು ನಂಬಿ ತನ್ನ ಒಂದು ಎಕರೆ ಮಳೆಯಾಶ್ರಿತ ಜಮೀನಿನಲ್ಲಿ ಹತ್ತಿ ಬೀಜವನ್ನು ಬಿತ್ತನೆ ಮಾಡಿ  ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದರು, ಆದರೆ ಬಿತ್ತನೆ ಸಮಯದಲ್ಲಿ ಬಂದ ಮಳೆ ಹತ್ತಿ ಬೀಜಗಳು ಮೊಳಕೆ ಒಡೆದ ನಂತರ ಬಾರದಿರುವ ಪರಿಣಾಮ ಬೆಳೆ ಒಣಗುವ ಹಂತವನ್ನು ತಲುಪಿದ್ದು ಬೆಳೆಯನ್ನು ಉಳಿಸಿಕೊಳ್ಳುವ ಸಲುವಾಗಿ ವಾರದಲ್ಲಿ ಎರಡು ಬಾರಿ ಟ್ಯಾಂಕರ್ ನೀರನ್ನು ಹತ್ತಿ ಬೆಳೆಗೆ ನೀಡುವ ಮೂಲಕ ತಮ್ಮ ಬೆಳೆಯನ್ನು ಉಳಿಸಿಕೊಳ್ಳಲು ಅರಸಹಸ ಪಡುತ್ತಿದ್ದಾರೆ.

ಈ ಬಗ್ಗೆ ಮಾತನಾಡುವ ಮಂಜುನಾಥ್ ಈಗಾಗಲೇ ಸಾಲ ಮಾಡಿ ಬೆಳೆ ಬೆಳೆದಿದ್ದೇನೆ, ಹತ್ತಿ ಬೆಳೆ ಕೈ ಹಿಡಿಯಬಹುದು ಎಂಬ ನಿರೀಕ್ಷೆ ಇತ್ತು, ಆದರೆ ಅದು ಸಹ ಹುಸಿಯಾಗುತ್ತಿದೆ. ಬೆಳೆ ಉಳಿಸಿಕೊಂಡರೆ ಏನೋ ಒಂದು ಅನುಕೂಲವಾಗಬಹುದೆಂಬ ಕಾರಣಕ್ಕೆ ಟ್ಯಾಂಕರ್ ಸಹಾಯದಿಂದ ನೀರು ಬಿಡಲು ಆರಂಭಿಸಿದ್ದೇನೆ.


ಇಲ್ಲಿಗಾಗಲೇ ಹತ್ತಿ ಬಿತ್ತನೆಗೆ 15,000 ಖರ್ಚಾಗಿದ್ದು ಈಗ ಪ್ರತಿ ಟ್ಯಾಂಕರ್ ನೀರಿಗೆ 600 ರೂಪಾಯಿಗಳಂತೆ ಪಾವತಿಸಿ ಬೆಳೆಗೆ ನೀರನ್ನು ಒದಗಿಸುತ್ತಿದ್ದೇನೆ, ಒಂದು ಎಕರೆ ಪ್ರದೇಶಕ್ಕೆ ಮೂರರಿಂದ ನಾಲ್ಕು ಟ್ಯಾಂಕರ್ ನೀರಿನ ಅವಶ್ಯಕತೆ ಇದ್ದು ಒಂದು ಬಾರಿ ಟ್ಯಾಂಕರ್ ಮೂಲಕ ಬೆಳಗೆ ನೀರು ಒದಗಿಸಲು 2 ಸಾವಿರ ರೂಪಾಯಿಗಳ ವೆಚ್ಚ ತಗುಲುತ್ತಿದೆ ಎಂದು ಅಳಲು ತೋಡಿಕೊಂಡರು.
ಇದು ಮಳೆಯಾಶ್ರಿತ ಜಮೀನನ್ನು ಹೊಂದಿರುವ ರೈತರ ಪರಿಸ್ಥಿತಿಯಾದರೆ.

ಇನ್ನು ಕೊಳವೆ ಬಾವಿಗಳನ್ನು ಹೊಂದಿರುವ ಜೊತೆಗೆ ಅಡಿಕೆ ಹಾಗೂ ಶುಂಠಿಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವ ರೈತರ ಪರಿಸ್ಥಿತಿಯಂತೂ ಹೇಳುತ್ತೀರದಂತಾಗಿದೆ.


ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಅಡಿಕೆ ಹಾಗೂ ಶುಂಠಿ ಬೆಳವಣಿಗೆ ನೀರಿನ ಬೇಡಿಕೆ ಹೆಚ್ಚಾಗಿದ್ದು, ಬೆಳೆಗಳಿಗೆ ಅನುಗುಣವಾಗಿ ಅಗತ್ಯವಿರುವ ನೀರನ್ನು ಒದಗಿಸಲು ಸಾಧ್ಯವಾಗದೇ ರೈತರು ಪರಿತಪಿಸುವಂತಾಗಿದೆ.


ಕಳೆದ ಬಾರಿ ಶುಂಠಿ ಬೆಳೆಗೆ ಉತ್ತಮ ಲಾಭ ದೊರೆತ ಪರಿಣಾಮ ಈ ವರ್ಷ ಜಾವಗಲ್ ಹೋಬಳಿಯ ಬಹುತೇಕ ರೈತರು ಹೆಚ್ಚಾಗಿ ಶುಂಠಿ ಬೆಳೆಯನ್ನು ಬೆಳೆಯುತ್ತ ಆಸಕ್ತಿ ತೋರಿದ್ದು ಇದರಿಂದ ಹೋಬಳಿಯಾದ್ಯಂತ ಅತ್ಯಧಿಕ ಪ್ರಮಾಣದಲ್ಲಿ ಶುಂಠಿ ಬಿತ್ತನೆ ಕಾರ್ಯವನ್ನು ರೈತರು ಮಾಡಿ ಮುಗಿಸಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.


ಆದರೆ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುವುದರ ಜೊತೆಗೆ ಮಳೆಯ ಕೊರತೆ ಉಂಟಾಗಿರುವುದರಿಂದ ಅನೇಕ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿ ರೈತರು ಟ್ಯಾಂಕರ್ ಗಳ ಮೊರೆ ಹೋಗುತ್ತಿದ್ದಾರೆ, ಮತ್ತೆ ಕೆಲವು ಕೊಳವೆ ಬಾವಿಗಳಲ್ಲಿ ನೀರಿದ್ದರೂ ಕೂಡ  ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ಪರಿವರ್ತಕಗಳ ಸಮಸ್ಯೆಯಿಂದ ರೈತರು ಜನರೇಟರ್ ಗಳತ್ತ ಮುಖ ಮಾಡಿದ್ದಾರೆ.

ವಿದ್ಯುತ್ ಪರಿವರ್ತಗಳು ಸಮಸ್ಯೆಯಿಂದ ರೈತರು ದಿನವೊಂದಕ್ಕೆ ಜನರೇಟರ್ ಗೆ ಮೂರರಿಂದ ನಾಲ್ಕು ಸಾವಿರ ಬಾಡಿಗೆ ನೀಡಿ  ತಾವು ಬೆಳೆದಿರುವ ಶುಂಠಿ ಹಾಗೂ ಅಡಿಕೆ ಬೆಳೆಗಳಿಗೆ ನೀರನ್ನು ಬಿಡುವ ದೃಶ್ಯಗಳು ಗ್ರಾಮದಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುತ್ತವೆ.


 ಶುಂಠಿ ನಾಟಿ ಮಾಡಿ ಎರಡುವರೆ ತಿಂಗಳುಗಳ ಕಳೆಯುತ್ತಾ ಬಂದರು ಮಳೆಯ ಅಭಾವದಿಂದ ಶುಂಠಿ ಗಿಡಗಳು ನೆಲದಿಂದ ಮೇಲೆ ಹೇಳುತ್ತಲೇ ಇಲ್ಲ ಪರಿಸ್ಥಿತಿ ಹೀಗೆ ಮುಂದುವರಿದರೆ ಈ ಬಾರಿ ಶುಂಠಿಯ ಇಳುವರಿ ಕುಂಠಿತಗೊಳ್ಳುವ ಪರಿಸ್ಥಿತಿ ಎದುರಾಗಬಹುದು.

ಪ್ರದೀಪ್,ರೈತ ,ಜಾವಗಲ್

 ವಿದ್ಯುತ್ ಪರಿವರ್ತಗಳು ಪದೇಪದೇ ಸುಟ್ಟು ಹೋಗುತ್ತಿದ್ದು ಇದರಿಂದ ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸಲು ಸಾಧ್ಯವಾಗದೇ ಜನರೇಟರ್ ಹಾಗೂ ಆರ್ಮಿಚರ್ ಗಳನ್ನು ಬಾಡಿಗೆಗೆ ಪಡೆದು ಬೆಳೆಗೆ ನೀರು ಒದಗಿಸುವ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಅರುಣ್,ರೈತ, ಜಾವಗಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT