ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ

ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರ ಭೇಟಿ: ಪೋಷಕರೊಂದಿಗೆ ಸಮಾಲೋಚನೆ
Published 20 ಫೆಬ್ರುವರಿ 2024, 6:32 IST
Last Updated 20 ಫೆಬ್ರುವರಿ 2024, 6:32 IST
ಅಕ್ಷರ ಗಾತ್ರ

ಹಳೇಬೀಡು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ, ಮಕ್ಕಳ ಅಧ್ಯಯನಕ್ಕೆ ಪೂರಕ ವಾತಾವರಣ ಕಲ್ಪಿಸಲು ಶಿಕ್ಷಕರು ಮುಂದಾಗಿದ್ದಾರೆ. ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಸೂಚನೆ ಮೇರೆಗೆ ಹಳೇಬೀಡು ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು ಕಾರ್ಯ ಪ್ರವೃತ್ತರಾಗಿದ್ದಾರೆ.

ಬಿಇಒ ನಾರಾಯಣ್ ಸಹ ಕೆಲವು ಮನೆಗಳಿಗೆ ಭೇಟಿ ನೀಡಿ, ಮಕ್ಕಳ ಅಧ್ಯಯನಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಶಿಕ್ಷಕರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮನೆಗೆ ಮೊದಲ ಹಂತದ ಭೇಟಿ ನೀಡಿ, ಮಕ್ಕಳ ಕಲಿಕೆಗೆ ಮಹತ್ವ ಕೊಡಲು ಪೋಷಕರಿಗೆ ಸೂಚಿಸಿದ್ದಾರೆ. ಎರಡನೇ ಹಂತದಲ್ಲಿ ಸಾಧಾರಣ ವಿದ್ಯಾರ್ಥಿಗಳ ಮನೆಗೆ ಭೇಟಿ ಕೊಡಲಾಗಿದೆ. ಮೂರನೇ ಹಂತದಲ್ಲಿ ಓದಿನಲ್ಲಿ ಮುಂದಿರುವ ಮಕ್ಕಳ ಮನೆ ಭೇಟಿ ನೀಡಲಾಗಿದೆ. ಮೂರು ಹಂತದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಮನೆಗಳಲ್ಲಿ ಸಮಾಲೋಚನೆ ನಡೆಸಲಾಗಿದೆ.

ಮಕ್ಕಳು ಓದುವ ಸಮಯದಲ್ಲಿ ಪೋಷಕರು ಶಾಂತತೆ ಕಾಪಾಡಬೇಕು. ಮನೆಯಲ್ಲಿ ಹಿತಕರ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಆರೋಗ್ಯಕರವಾದ ಆಹಾರ ಕೊಡಬೇಕು. ಬೆಳಿಗ್ಗೆ 5 ಗಂಟೆ ಎದ್ದು ಓದಬೇಕು. ಶಾಲೆ ಬಿಟ್ಟ ನಂತರ ಒಂದು ಗಂಟೆ ವಿಶ್ರಾಂತಿ ಪಡೆದು, ರಾತ್ರಿ 11 ಗಂಟೆಯವರೆಗೆ ಓದಿಸಬೇಕು. ಭಯದ ವಾತಾವರಣ ಇಲ್ಲದಂತೆ ನೋಡಿಕೊಳ್ಳಬೇಕು. ಪರೀಕ್ಷೆ ಸಮಯದಲ್ಲಿ ಆರೋಗ್ಯಕ್ಕೆ ತೊಂದರೆ ಆಗದಂತಹ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ಕೊಡಬೇಕು ಎಂದು ಶಿಕ್ಷಕ ವರ್ಗ ಪೋಷಕರಿಗೆ ತಿಳಿವಳಿಕೆ ನೀಡುತ್ತಿದೆ.

ಪೂರಕ ಪರೀಕ್ಷೆ:

‘ಇಲಾಖೆ ಆದೇಶದಂತೆ ಮೂರು ಪೂರಕ ಪರೀಕ್ಷೆ ಮಾತ್ರವಲ್ಲದೇ, ಶಾಲಾ ಹಂತದಲ್ಲಿಯೂ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪಬ್ಲಿಕ್ ಪರೀಕ್ಷೆ ಭಯ ಇಲ್ಲದಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗುತ್ತಿದೆ. ಪಬ್ಲಿಕ್ ಪರೀಕ್ಷೆ ಮಾದರಿಯಲ್ಲಿಯೇ ಶಾಲೆಯಲ್ಲಿ ಪರೀಕ್ಷೆ ನಡೆಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವ ಧೈರ್ಯ ತುಂಬಲಾಗಿದೆ’ ಎಂದು ಉಪ ಪ್ರಾಂಶುಪಾಲ ಮುಳ್ಳಯ್ಯ ವಿವರಿಸಿದರು.

ಹಳೇಬೀಡಿನ ದ್ವಾರಸಮುದ್ರ ಕೆರೆಯ ಕೋಡಿ ಹಳ್ಳ ಹಾಗೂ ಕಾಲುವೆ ಬಳಿಯ ಬೂದಿಗುಡಿ ಪ್ರದೇಶದ ಸಾಕಷ್ಟು ಮಕ್ಕಳು ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಈ ಪ್ರದೇಶ ಕಿಷ್ಕಿಂಧೆಯಾಗಿದ್ದು, ಮನೆಗಳು ಪುಟ್ಟದಾಗಿವೆ. ಒಬ್ಬರು ಕೂತರೆ ಮತ್ತೊಬ್ಬರು ನಿಲ್ಲುವಂತಹ ಸ್ಥಿತಿ ಇದೆ. ಮಕ್ಕಳು ಕುಳಿತು ಓದುವುದಕ್ಕೆ ಮನೆಗಳಲ್ಲಿ ಜಾಗವೇ ಇಲ್ಲ. ಕೆಲವು ಮನೆಯಲ್ಲಿ ಪ್ರತ್ಯೇಕ ಕೋಣೆ ಇದ್ದರೂ, ಸರಕು ತುಂಬಲಾಗಿದೆ. ಇರುವ ವ್ಯವಸ್ಥೆಯಲ್ಲಿಯೇ ಸಾಧಿಸಿ ತೋರಿಸಬೇಕು ಎಂದು ಪೋಷಕರು ಹಾಗೂ ಮಕ್ಕಳಿಗೆ ಶಿಕ್ಷಕರು ಧೈರ್ಯ ತುಂಬಿದ್ದಾರೆ.

ಶೈಕ್ಷಣಿಕ ವರ್ಷ ಆರಂಭದಿಂದಲೂ ಶ್ರಮ ಹಾಕಲಾಗಿದೆ. ಶಾಲೆಗಳಿಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಗಮನಿಸುತ್ತಿದ್ದೇವೆ. ಪ್ರತಿ ಮಗುವಿನ ಶೈಕ್ಷಣಿಕ ಸಾಧನೆಗೆ ಹೆಜ್ಜೆ ಇಟ್ಟಿದ್ದೇವೆ
ಕೆ.ಪಿ.ನಾರಾಯಣ್ ಕ್ಷೇತ್ರ ಶಿಕ್ಷಣಾಧಿಕಾರಿ
ಮನೆಗಳಿಗೆ ಶಿಕ್ಷಕರು ಭೇಟಿ ನೀಡಿದ್ದರಿಂದ ಸಾಧಿಸುವ ಛಲ ಬಂದಿದೆ. ಕಲಿಕೆಯ ಆಸಕ್ತಿ ಹೆಚ್ಚಾಗಿದೆ. ಶಿಕ್ಷಕ ವೃಂದದ ಕಾಳಜಿಯಿಂದ ಮನಸ್ಸಿಗೆ ಹಿತ ದೊರಕಿದೆ
ಹೇಮಾವತಿ ವಿದ್ಯಾರ್ಥಿನಿ
ಬಹುತೇಕ ಮಕ್ಕಳು ಶಿಕ್ಷಕರನ್ನು ಗೌರವಿಸುತ್ತಾರೆ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡುವುದರಿಂದ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ದೊರಕಿದಂತಾಗಿದೆ
ಸವಿತಾ ಪೋಷಕಿ
ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳ ಮನೆಗೆ ಶಿಕ್ಷಕರೊಂದಿಗೆ ಭೇಟಿ ನೀಡುತ್ತಿದ್ದು ಮಕ್ಕಳು ಮನೆಯಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಒತ್ತಡಕ್ಕಾಗಿ ಪುಸ್ತಕ ಹಿಡಿಯದೇ ಅರ್ಥ ಮಾಡಿಕೊಂಡು ಓದಿದರೆ ಅನುಕೂಲ
ಮುಳ್ಳಯ್ಯ ಕೆಪಿಎಸ್ ಶಾಲೆ ಉಪ ಪ್ರಾಂಶುಪಾಲ
ನಿತ್ಯ ಸಂಜೆ ಗುಂಪು ಅಧ್ಯಯನ
ಪ್ರತಿ ದಿನ ಸಂಜೆ ಶಾಲೆಯ ಅಂಗಳದಲ್ಲಿ ಮಕ್ಕಳನ್ನು ಕೂರಿಸಿ ಗುಂಪು ಅಧ್ಯಯನ ನಡೆಸಲಾಗುತ್ತಿದೆ. 10 ವಿದ್ಯಾರ್ಥಿಗಳ ಒಂದೊಂದು ಗುಂಪನ್ನು ವೃತ್ತಾಕಾರದಲ್ಲಿ ಕೂರಿಸಿ ಓದಿಸುವ ಪ್ರಕ್ರಿಯೆ ಪ್ರತಿ ದಿನ ಸಂಜೆ ನಡೆಯುತ್ತಿದೆ. ‘ಮಕ್ಕಳು ಮನಸ್ಸು ಬೇರೆಡೆಗೆ ಹರಿಯದಂತೆ ಶಿಕ್ಷಕರು ನೋಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕಠಿಣ ವಿಷಯಗಳನ್ನು ಶಿಕ್ಷಕರಿಂದ ಪರಿಹರಿಸಿಕೊಳ್ಳುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಬುದ್ಧಿವಂತ ಹಾಗೂ ಮಧ್ಯಮ ಕಲಿಕಾ ಸಾಮರ್ಥ್ಯದ ಮಕ್ಕಳನ್ನು ಶಾಲೆಗಳಲ್ಲಿ ವಿಂಗಡಣೆ ಮಾಡಿಕೊಂಡಿದ್ದಾರೆ. ಪಾಸಿಂಗ್ ಪ್ಯಾಕೇಜ್ ಮೂಲಕ ಹಿಂದುಳಿದ ಮಕ್ಕಳಿಗೆ ಕಲಿಸಲಾಗುತ್ತಿದೆ. ಬುದ್ಧಿವಂತ ಮಕ್ಕಳಿಗೆ ಪಠ್ಯಪುಸ್ತಕ ಓದಿಸಲಾಗುತ್ತಿದೆ. ಮಧ್ಯಮ ವರ್ಗದ ಮಕ್ಕಳನ್ನು ಪ್ರೋತ್ಸಾಹಿಸಿ ಪಠ್ಯಪುಸ್ತಕ ಕಲಿಕೆ ಮಟ್ಟಕ್ಕೆ ಬೆಳೆಸಲಾಗುತ್ತಿದೆ’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT