ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ತವರಿಗೆ ಮರಳಿದ ಲಕ್ಷಾಂತರ ಮಂದಿ

ಹೊರ ಜಿಲ್ಲೆಯಿಂದ 71,905, ಹೊರ ರಾಜ್ಯದಿಂದ 4,550 ಜನರ ಆಗಮನ
Last Updated 18 ಜುಲೈ 2020, 12:55 IST
ಅಕ್ಷರ ಗಾತ್ರ

ಹಾಸನ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊರ ಜಿಲ್ಲೆ, ರಾಜ್ಯ ಹಾಗೂ ದೇಶಗಳಲ್ಲಿ ನೆಲೆಸಿದ್ದ ಹಾಸನದ ಜನರು ತವರಿಗೆ ಮರಳುತ್ತಿದ್ದು, ಈವರೆಗೆ ಅಂದಾಜು ಲಕ್ಷಕ್ಕೂ ಅಧಿಕ ಮಂದಿ ವಾಪಸ್‌ ಆಗಿದ್ದಾರೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿಯಾದ ಬಳಿಕ ಮೂರು, ನಾಲ್ಕು ದಿನಗಳಿಂದ ಜಿಲ್ಲೆಗೆ ಮರಳುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ. ದಿನಗೂಲಿ ಕಾರ್ಮಿಕರು, ಉದ್ಯೋಗಸ್ಥರು, ಗಾರ್ಮೆಂಟ್ಸ್‌ ಮತ್ತು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವರು ಕುಟುಂಬ ಸಮೇತ ಮನೆ ಖಾಲಿ ಮಾಡಿಕೊಂಡು ಬಂದಿದ್ದಾರೆ. ಸಾವಿರಾರು ಜನರು ಮನೆಗಳನ್ನು ಖಾಲಿ ಮಾಡಿಕೊಂಡು ಮಹಾ ನಗರ ತೊರೆದು ಬರುತ್ತಲೇ ಇದ್ದಾರೆ.

ಜಿಲ್ಲೆಯ ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಹಿರೀಸಾವೆ, ಬೇಲೂರು, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ, ಅರಸೀಕೆರೆ, ಆಲೂರು, ಹಾಸನದ ಜನರು ಬೆಂಗಳೂರು, ಮುಂಬೈ, ಚೆನ್ನೈ, ಒಡಿಶಾ, ಕೋಲ್ಕತ್ತದಲ್ಲಿ ನೆಲೆ ಕಂಡುಕೊಂಡಿದ್ದರು.

ಸಾಮಾನ್ಯವಾಗಿ ಹಬ್ಬ, ಸುಗ್ಗಿ, ದೇವರ ಉತ್ಸವ, ಜಾತ್ರೆ, ಶುಭಾ ಸಮಾರಂಭಗಳಿಗೆ ಬರುತ್ತಿದ್ದರು. ಆದರೆ, ಈಗ ಸೋಂಕು ಹೆಚ್ಚುತ್ತಿರುವುದರಿಂದ ಅನೇಕರು ವಾಹನಗಳಲ್ಲಿ ಸಾಮಾನು ಸರಂಜಾಮು ತುಂಬಿಕೊಂಡು ಶಾಶ್ವತವಾಗಿ ಹಿಂದಿರುಗಿದ್ದಾರೆ.

ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆ ಆಗುತ್ತಿದ್ದಂತೆಯೇ ಹುಟ್ಟೂರಿಗೆ ಬಂದಿದ್ದ ಜನರು ಮೇ ನಲ್ಲಿ ಲಾಕ್‌ಡೌನ್ ಸಡಿಲಿಕೆ ನಂತರ ಕೆಲವರು ಮಹಾನಗರಗಳಿಗೆ ಹಿಂದಿರುಗಿದ್ದರು. ಬೆಂಗಳೂರು ನಗರ ಸೇರಿದಂತೆ ಹೊರ ರಾಜ್ಯಗಳಲ್ಲಿ ಜೀವನ ಕಂಡುಕೊಂಡಿದ್ದವರು ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಕಾರಣ ಜೀವ ಉಳಿಸಿಕೊಂಡರೆ ಸಾಕೆಂದುಕೊಂಡು ತಮ್ಮ ಹುಟ್ಟೂರಿನತ್ತ ಹೆಜ್ಜೆ ಹಾಕುತ್ತಿದ್ದಾರೆ.

ಕಟ್ಟಡ ನಿರ್ಮಾಣ, ಗಾರ್ಮೆಂಟ್‌, ಕಾರ್ಖಾನೆಗಳು, ಮಾರುಕಟ್ಟೆ, ಹೋಟೆಲ್‌, ರೆಸ್ಟೋರೇಂಟ್‌, ರಿಯಲ್‌ ಎಸ್ಟೇಟ್‌ ವ್ಯಾಪಾರ ಹಾಗೂ ವಿವಿಧ ಕೆಲಸ ಮಾಡುತ್ತಿದ್ದವರು ನಗರ ತೊರೆದು ಬರುತ್ತಿದ್ದಾರೆ. ಸಾವಿರಾರು ಕಾರ್ಖಾನೆ, ಕಂಪನಿ ಹಾಗೂ ಉದ್ಯೋಗ ಸಂಸ್ಥೆಗಳು ಸಹ ನಷ್ಟದಲ್ಲಿರುವುದರಿಂದ ಕೆಲಸ ಇಲ್ಲದಂತಾಗಿದೆ. ಹಲವು ಕಂಪನಿಗಳಲ್ಲಿ ಕೆಲಸ ಮಾಡುವವರು ತಮ್ಮೂರಿನಿಂದಲೇ ವರ್ಕ್‌ ಫ್ರಂ ಹೋಂ ಮಾಡುತ್ತಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ‘ಲಾಕ್‌ಡೌನ್‌ ಅವಧಿಯಲ್ಲಿ ಹೊರ ಜಿಲ್ಲೆಯಿಂದ 71,905, ಹೊರ ರಾಜ್ಯದಿಂದ 4,560, ಹೊರ ದೇಶದಿಂದ 984 ಮಂದಿ ಬಂದಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿ ಬಳಿಕ ಅಂದಾಜು ಇಪ್ಪತ್ತು ಸಾವಿರ ಕ್ಕೂ ಹೆಚ್ಚು ಜನರು ಜಿಲ್ಲೆಗೆ ವಾಪಸ್‌ ಬಂದಿದ್ದಾರೆ. ಲಾಕ್‌ಡೌನ್‌ ಅವಧಿಯಿಂದ ಈವರೆಗೂ ಅಂದಾಜು ಲಕ್ಷಕ್ಕೂ ಅಧಿಕ ಮಂದಿ ಜಿಲ್ಲೆಗೆ ಬಂದಿದ್ದಾರೆ. ಹೊರಗಿನಿಂದ ಸಾಕಷ್ಟು ಜನರು ಬರುತ್ತಿದ್ದಾರೆ. ಅವರನ್ನ ಕ್ವಾರಂಟೈನ್‌ ಮಾಡುವಂತೆ ಗ್ರಾಮೀಣ ಭಾಗದಿಂದ ಹಲವು ಕರೆಗಳು ಬರುತ್ತಿವೆ’ ಎಂದು ಮಾಹಿತಿ ನೀಡಿದರು.

‘ಆರಂಭದಲ್ಲಿ ಮಹಾರಾಷ್ಟ್ರದಿಂದ ಮರಳಿದವರಲ್ಲಿ ಕೊರೊನಾ ಪ್ರಕರಣಗಳು ಹೆಚ್ಚು ಪತ್ತೆಯಾಗಿತ್ತು. ಈಗ ಬೆಂಗಳೂರು
ಪ್ರಯಾಣ ಹಿನ್ನಲೆ ಹೊಂದಿದವವರು ಹಾಗೂ ಸ್ಥಳೀಯರಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ. ಸೋಂಕಿನ ಮೂಲ ಪತ್ತೆ ಮಾಡುವುದು ಸವಾಲು ಆಗಿದೆ. ಮಾಸ್ಕ್ ‌ ಧರಿಸದೆ ಓಡಾಡಿದರೆ ಸ್ಥಳೀಯ ಆಡಳಿತ ವತಿಯಿಂದ ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕರು ಅಂತರ ಪಾಲನೆ ಮಾಡಬೇಕು. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಬಾರದು’ಎಂದು ಮನವಿ ಮಾಡಿದರು.

ರಾಜಧಾನಿಯಿಂದ ಗ್ರಾಮೀಣ ಭಾಗಗಳಿಗೆ ಬಂದಿರುವ ಜನರಿಂದ ಅಲ್ಲಿರುವ ನಿವಾಸಿಗಳಿಗೆ ಸೋಂಕು ಹರಡುವ ಆತಂಕ
ಆರಂಭವಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ನಗರ ಪ್ರದೇಶ ಹಾಗೂ ಹೊರ ರಾಜ್ಯಗಳಿಂದ ಬಂದವರನ್ನ ಕ್ವಾರಂಟೈನ್‌ಗೆ
ಒಳಪಡಿಸಲಾಗುತ್ತಿತ್ತು. ಈಗ ಹೊರ ರಾಜ್ಯದಿಂದ ಬಂದವರಿಗೆ 14 ದಿನ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಹಾಗಾಗಿ ಹೊರಗಿನಿಂದ ಗ್ರಾಮಗಳಿಗೆ ವಾಪಸ್‌ಆಗಿರುವವರ ಮೇಲೆ ಗ್ರಾಮಸ್ಥರೇ ನಿಗಾ ಇಡಲು ಆರಂಭಿಸಿದ್ದಾರೆ. ಕೆಲವು ಕಡೆ ಆಶಾ ಕಾರ್ಯಕರ್ತೆಯರಿಗೆ ಕರೆ ಮಾಡಿ, ಅವರನ್ನು ಕ್ವಾರಂಟೈನ್ ಮಾಡುವಂತೆ ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT