ಮಂಗಳವಾರ, ಮಾರ್ಚ್ 21, 2023
30 °C
ದೇವೇಗೌಡ ಆಶಯದಂತೆ ವಿಮಾನ ನಿಲ್ದಾಣ ನಿರ್ಮಾಣ

ತಜ್ಞರ ಸಮಿತಿ ತೀರ್ಮಾನವೇ ಅಂತಿಮ: ಶಾಸಕ ಪ್ರೀತಂಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಹಾಸನ ವಿಮಾನ ನಿಲ್ದಾಣ ಯಾವ ರೀತಿ ನಿರ್ಮಾಣವಾಗಬೇಕು ಎಂಬುದನ್ನು ತಜ್ಞರ ಸಮಿತಿ ತೀರ್ಮಾನ ಮಾಡಲಿದೆ. ರೇವಣ್ಣ ಒಬ್ಬ ಶಾಸಕ, ತಜ್ಞರಲ್ಲ ಎಂದು ಶಾಸಕ ಪ್ರೀತಂಗೌಡ ತಿರುಗೇಟು ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೀವಿತಾವಧಿಯಲ್ಲಿ ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕೆಂಬ ದೇವೇಗೌಡರ ಮನವಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸ್ಪಂದಿಸಿದ್ದಾರೆ. ಹಳೆ ಯೋಜನೆಯಂತೆ ವಿಮಾನ ನಿಲ್ದಾಣ ಮಾಡದಿದ್ದರೆ ಧರಣಿ ನಡೆಸುವುದಾಗಿ ರೇವಣ್ಣ ಎಚ್ಚರಿಕೆ ನೀಡಿದ್ದಾರೆ. ಹಾಸನದಿಂದ ಬೆಂಗಳೂರಿಗೆ ಎರಡು ತಾಸು ಪ್ರಯಾಣ. ಅಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಮೈಸೂರಿಗೂ ಎರಡು ಗಂಟೆ ಪ್ರಯಾಣ. ಅಲ್ಲಿಯೂ ವಿಮಾನ ನಿಲ್ದಾಣವಿದೆ. ಹಾಸನಕ್ಕೂ ‌ವಿಮಾನ‌ ನಿಲ್ದಾಣ ಬೇಕು. ಆದರೆ, ಅದು ‌ಹೇಗಿರಬೇಕೆಂದು ತಜ್ಞರು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.

‘ಹೆಚ್ಚುವರಿ ಭೂಮಿ ಡಿ ನೋಟಿಫೈ ಮಾಡಲು ಬಿಡಲ್ಲ’ ಎಂಬ ರೇವಣ್ಣ ಹೇಳಿಕೆ ಪ್ರತಿಕ್ರಿಯಿಸಿದ ಪ್ರೀತಂ, ‘ರೇವಣ್ಣ ಬೂವನಹಳ್ಳಿಗೆ ಬಂದು ಯಡಿಯೂರಪ್ಪ ನಿಮ್ಮ ಭೂಮಿ ವಾಪಸ್ ಕೊಡುತ್ತಿದ್ದಾರೆ. ಇದಕ್ಕೆ ನನ್ನ ವಿರೋಧ ಇದೆ’ಎಂದು ಹೇಳಲಿ. ನಾವ್ಯಾರು ಜಮೀನು ಬಿಡಿ ಎಂದು ಹೇಳಿಲ್ಲ. ತಜ್ಞರ‌‌ ತೀರ್ಮಾನದಂತೆ ಭೂಮಿ ವಾಪಸ್ ಕೊಡುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

‘ಯಾರನ್ನೋ‌ ಖುಷಿ ಪಡಿಸಲು ಯೋಜನೆ ಮಾಡಿಲ್ಲ. ರೇವಣ್ಣ ಹೇಳಿದಂತೆ ಏರ್‌ಪೋರ್ಟ್‌ ಮಾಡಲು, ಅದು ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ ಅಲ್ಲಾ. ಹತ್ತು ವರ್ಷ ಮಂತ್ರಿಯಾಗಿ ಒಂದು ವಿಮಾನ ನಿಲ್ದಾಣ ಮಾಡುವುದಕ್ಕೆ ಇವರಿಂದ ಆಗಿಲ್ಲ. ‘ತಜ್ಞರ ವರದಿ ಬಗ್ಗೆ ಸಂದೇಹ ಇದ್ದರೆ ಕೇಳಲಿ. ಏರ್‌ಪೋರ್ಟ್‌ ಗೆ ಬಂದು ಗಾಲ್ಫ್‌ ಆಟವಾಡುವವರು ಯಾರು ಇಲ್ಲಾ. ನಾವು ರಾಗಿ, ಆಲೂಗಡ್ಡೆ ಬೆಳೆಯೋರು. ರೈತರ ಭೂಮಿ ತೆಗೆದುಕೊಂಡು ಗಾಲ್ಫ್‌ ಕ್ಲಬ್ ಮಾಡ್ತಾರಾ’ ಎಂದು ಪ್ರೀತಂ ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು