ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ನಾಲ್ಕು ದಶಕಗಳಿಂದ ನಿತ್ಯದ ಬವಣೆಯಾಗಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಮರೀಚಿಕೆಯಾಗಿದೆ.
ಯಾವುದೇ ಪಕ್ಷದ ಸರ್ಕಾರಗಳು ಆಡಳಿತ ನಡೆಸಿದರೂ, ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ಆಯಾ ಸಂದರ್ಭದಲ್ಲಿ ಸಚಿವರು, ಮುಖ್ಯಮಂತ್ರಿ ನೀಡಿದ ಭರವಸೆಗಳೆಲ್ಲವೂ ಹಾಗೆಯೇ ಉಳಿದಿವೆ.
ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಎಷ್ಟೊಂದು ಬಿಗಡಾಯಿಸಿದೆ ಎಂದರೆ 1991 ರಿಂದ ಇಲ್ಲಿಯವರೆಗೆ ಆನೆ ದಾಳಿಯಿಂದ 80 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 55 ಕ್ಕೂ ಹೆಚ್ಚು ಆನೆಗಳು ಜೀವ ಕಳೆದುಕೊಂಡಿವೆ. ನೂರಾರು ಜನರು ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ಇತ್ತೀಚೆಗೆ ₹ 15 ಲಕ್ಷ . ಪರಿಹಾರ ನೀಡುತ್ತಿರುವುದನ್ನು ಬಿಟ್ಟರೆ, ಮತ್ತೇನೂ ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬದುಕುವುದು ಹೇಗೆ ಎಂಬ ಭೀತಿ ಈ ಭಾಗದ ಜನರನ್ನು ಕಾಡುತ್ತಿದೆ.
ಈ ನಡುವೆ ಈ ಭಾಗದಲ್ಲಿ ಆನೆಗಳ ಸಂತತಿಯೂ ಗಣನೀಯವಾಗಿ ಹೆಚ್ಚಾಗುತ್ತಿದೆ. 120ಕ್ಕೂ ಹೆಚ್ಚು ಆನೆಗಳು ಇಲ್ಲಿದ್ದು, ಸಮಸ್ಯೆ ಮತ್ತಷ್ಟು ಜಟಿಲವಾಗಲು ಕಾರಣವಾಗಿದೆ.
1991 ರಿಂದ ಇಲ್ಲಿಯವರೆಗೆ ಬೆಳೆ ಹಾನಿಗೆಂದು ₹16 ಕೋಟಿ ಪರಿಹಾರ ನೀಡಲಾಗಿದೆ. ಇದನ್ನು ಹೆಚ್ಚಳ ಮಾಡಬೇಕು ಎಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಆನೆ ಸಂತತಿಯ ಗೌರವ ಹೆಚ್ಚಿಸುವ ಯಾವುದೇ ಕೆಲಸ ಮಾಡಿದರೂ ನಮ್ಮ ಅಡ್ಡಿಯಿಲ್ಲ. ಆದರೆ ಅದೇ ಆನೆಗಳಿಂದ ಆಗುತ್ತಿರುವ ಅನಾಹುತ, ಬೆಳೆನಷ್ಟ ತಪ್ಪಿಸಿ ಎಂದು ಮಲೆನಾಡಿಗರು ಪದೇ ಪದೇ ಮನವಿ ಮಾಡುತ್ತಿದ್ದರೂ ಯಾವುದೇ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎನ್ನುವ ನೋವು ಇಲ್ಲಿನ ಜನರದ್ದು.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಅದರಲ್ಲೂ ಆಲೂರು, ಸಕಲೇಶಪುರ, ಬೇಲೂರು, ಅರಕಲಗೂಡು ತಾಲ್ಲೂಕುಗಳಲ್ಲಿ ಕಾಡಾನೆ-ಮಾನವ ಸಂಘರ್ಷ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ಸಾಕು ಪ್ರಾಣಿಗಳಂತೆ ಗಜಪಡೆ ಕಣ್ಣಿಗೆ ಬೀಳುತ್ತಿವೆ.
ಈಚೆಗೆ ಬೇಲೂರು ತಾಲ್ಲೂಕಿನ ಕಡೇಗರ್ಜೆ ಗ್ರಾಮದ ರೈತರೊಬ್ಬರು ಆನೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಯ ಮಹಡಿ ಏರಿದರೂ ಬಿಡದೇ ಆತನ ಜೀವ ತೆಗೆಯಲು ಅರ್ಧಗಂಟೆಗೂ ಹೆಚ್ಚು ಕಾಲ ಆನೆ ಮನೆ ಎದುರೇ ನಿಂತು ದಾಳಿಗೆ ಹೊಂಚು ಹಾಕುತ್ತಿದ್ದ ದೃಶ್ಯ, ಜನರನ್ನು ಈಗಲೂ ಭಯಪಡಿಸುತ್ತಿದೆ.
ಜಮೀನು ಬಿಟ್ಟುಕೊಡಲು ಸಿದ್ಧ:
ಜಿಲ್ಲೆಯಲ್ಲಿ ಆನೆ ಕಾರಿಡಾರ್ ನಿರ್ಮಿಸಬೇಕೆಂಬ ಸಾಕಷ್ಟು ಹಳ್ಳಿಗಳ ಜನರ ಕೂಗಿಗೆ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ.
ರಕ್ಷಿತಾರಣ್ಯ ಅರಣ್ಯ ವಿಸ್ತರಣೆ ಮಾಡಿ, ಕಾಡಾನೆ ಸಮಸ್ಯೆಯನ್ನು ಕೊನೆಗಾಣಿಸಿ ಎಂದು ಆನೆ ಕಾಟದಿಂದ ನೊಂದಿರುವ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಅರಣಿ, ಬಟ್ಟೆಕುಮರಿ, ಬಾಜೆಮನೆ, ಬಾಳೆಹಳ್ಳ, ಮಂಕನಹಳ್ಳಿ, ಬೋರನಮನೆ, ಯತ್ತಹಳ್ಳ, ಯಡಕುಮರಿ ಗ್ರಾಮಗಳ ಜನರು ಸ್ವಯಂಪ್ರೇರಿತವಾಗಿ ಜಮೀನು ಬಿಟ್ಟು ಕೊಡುವುದಾಗಿ ಒಂದು ದಶಕದಿಂದಲೂ ಹೇಳುತ್ತಿದ್ದಾರೆ.
2012 ರಿಂದಲೇ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳಿಗೆ ಪತ್ರ ಬರೆಯುತ್ತ ಬಂದಿದ್ದಾರೆ. 2013 ರಲ್ಲಿ ಆಗಿನ ಜಿಲ್ಲಾಧಿಕಾರಿ ಗ್ರಾಮಸ್ಥರ ಸಭೆ ನಡೆಸಿ ಜಮೀನು ಬಿಟ್ಟುಕೊಡುವ ನಿರ್ಣಯವನ್ನು ಸರ್ಕಾರಕ್ಕೂ ಕಳುಹಿಸಿದ್ದಾರೆ.
ಎತ್ತಿನಹೊಳೆ ಯೋಜನೆಗಾಗಿ ರೈತರಿಂದ ನೇರವಾಗಿ ಜಮೀನು ಖರೀದಿಸಿದ ಮಾನದಂಡವನ್ನು ಇಲ್ಲೂ ಅನುಸರಿಸಿದರೆ ಅದಕ್ಕೆ ಬದ್ಧ ಎಂದೂ ಹೇಳಿದ್ದಾರೆ.
ಈ ಎಲ್ಲ ಮಾಹಿತಿ ಆಧರಿಸಿ ಜೂನ್‌ನಲ್ಲಿ ಹಾಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೂ ಗ್ರಾಮಸ್ಥರು ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ.
ನಿರ್ವಹಣೆ: ಚಿದಂಬರಪ್ರಸಾದ
ಪೂರಕ ಮಾಹಿತಿ: ಸಂತೋಷ್ ಸಿ.ಬಿ., ಜಾನೇಕೆರೆ ಆರ್.ಪರಮೇಶ್, ಜಗದೀಶ್ ಆರ್. ಹೊರಟ್ಟಿ, ಎಂ.ಪಿ.ಹರೀಶ್.
ಅರಣ್ಯ ವಿಸ್ತರಣೆಯೇ ಪರಿಹಾರ ಈಗಲೂ ಯಸಳೂರು ವಲಯ ವ್ಯಾಪ್ತಿಯ 8 ಗ್ರಾಮಗಳ ರೈತರು ಬಿಟ್ಟುಕೊಡಲು ತಯಾರಿರುವ ರಕ್ಷಿತಾರಣ್ಯದ ಅಂಚಿನ ಸುಮಾರು 3300 ಎಕರೆ ಹಿಡುವಳಿ ಖಾಸಗಿ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡು ಅರಣ್ಯ ಸೇರ್ಪಡೆ ಮಾಡಬೇಕು. ಇದರೊಂದಿಗೆ ಸುತ್ತಲಿನ 15 ಸಾವಿರ ಎಕರೆ ಡೀಮ್ಡ್ ಫಾರೆಸ್ಟ್ ಜಾಗವೂ ಸೇರಿದಂತೆ 20 ಸಾವಿರ ಎಕರೆ ಅರಣ್ಯವನ್ನು ಪಶ್ಚಿಮ ಘಟ್ಟದಲ್ಲಿ ಮರು ನಿರ್ಮಾಣ ಮಾಡಿದಂತಾಗುತ್ತದೆ. ಇದರಿಂದ ವನ್ಯಜೀವಿಗಳಿಗೆ ವಾಸಸ್ಥಳ ವಲಸೆ ಮಾರ್ಗ ಮತ್ತು ಆಹಾರ ಲಭ್ಯತೆ ಪ್ರಮಾಣ ಹೆಚ್ಚಾಗುತ್ತದೆ. ಆನೆ ಕಾರಿಡಾರ್ ಕೈಬಿಟ್ಟ ಸರ್ಕಾರ 2011 ರಲ್ಲಿ ನಡೆದ ಸಭೆಯಲ್ಲಿ ಬೇಲೂರು ಸಕಲೇಶಪುರ ತಾಲ್ಲೂಕಿನ 7 ಮೀಸಲು ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ 30 ಗ್ರಾಮಗಳ ವ್ಯಾಪ್ತಿಯ ಒಟ್ಟು 2325424 ಎಕರೆ ಅರಣ್ಯ ಲಕ್ಷಣ ಹೊಂದಿರುವ ಸರ್ಕಾರಿ ಜಮೀನಿಗೆ 2500 ಎಕರೆ ರೈತರ ಹಿಡುವಳಿ ಪ್ರದೇಶವನ್ನೂ ಸೇರಿಸಿ ಆನೆ ಕಾರಿಡಾರ್ ಎಂದು ಘೋಷಿಸುವ ಬಗ್ಗೆ ಅರಣ್ಯ ಇಲಾಖೆಗೆ ವರ್ಗಾಯಿಸಲು ತೀರ್ಮಾನಿಸಲಾಗಿತ್ತು. ಖಾಸಗಿ ಜಮೀನು ಸ್ವಾಧೀಪ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಒಪ್ಪಿಗೆ ದೊರೆಯದೇ 2014 ರಲ್ಲಿ ಆನೆ ಕಾರಿಡಾರ್ ಯೋಜನೆ ಕೈ ಬಿಡುವ ನಿರ್ಧಾರಕ್ಕೆ ಬರಲಾಗಿದೆ.
ಸರ್ಕಾರ ಸ್ಪಂದಿಸಿಲ್ಲ ಆನೆ ಕಾರಿಡಾರ್ ಜೊತೆಗೆ ಶ್ರೀಲಂಕಾ ಮಾದರಿ ಆನೆಧಾಮ ನಿರ್ಮಾಣಕ್ಕೆ ಸ್ವಂತ ಜಮೀನು ಬಿಟ್ಟು ಕೊಡುವುದಾಗಿ ಮುಂದೆ ಬಂದರೂ ಇದುವರೆಗೂ ಯಾವುದೇ ಸರ್ಕಾರ ಸ್ಪಂದಿಸಿಲ್ಲ. ಎ.ಆರ್.ಜಗದೀಶ್ ಅತ್ತಿಹಳ್ಳಿ ಗ್ರಾಮಸ್ಥ ಗಣಿಗಾರಿಕೆ ನಿಷೇಧಿಸಿ ಆನೆ ಹಾವಳಿ ಹೆಚ್ಚಾಗಿರುವ ಆಸ್ಸಾಂನ ಅರಣ್ಯ ಅರಣ್ಯದಲ್ಲಿ ಗಣಿಗಾರಿಕೆ ನಡೆಸುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ. ಇದರಿಂದ ಆನೆಗಳ ಉಪಟಳ ನಿಯಂತ್ರಣಕ್ಕೆ ಬಂದಿದೆ. ಹಾಸನ ಜಿಲ್ಲೆಯಲ್ಲೂ ಅಂತಹ ತೀರ್ಮಾನ ಅಗತ್ಯ. ಹೇಮಂತಕುಮಾರ್ ರಾಧಮ್ಮ ಜನಸ್ಪಂದನ ವೇದಿಕೆ ಅಧ್ಯಕ್ಷ ಹಿತ್ತಲಲ್ಲೇ ಆನೆಗಳ ವಾಸ ಕಾಡಾನೆ ಸಮಸ್ಯೆಯಿಂದ ಜೀವ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಕಳೆದ 20 ವರ್ಷಗಳಿಂದ ಮುಂದುವರೆದಿದೆ. ಕಾಡಿನಲ್ಲಿ ಇರಬೇಕಾದ ಆನೆಗಳೆಲ್ಲಾ ಕಾಫಿ ತೋಟ ಮನೆಯ ಹಿತ್ತಲಲ್ಲಿಯೇ ವಾಸ ಮಾಡುತ್ತಿವೆ. ಕಾಡಾನೆಗಳಿಂದಾಗಿ ಜೀವ ಭಯದಲ್ಲಿಯೇ ನೆಮ್ಮದಿ ಕಳೆದುಕೊಂಡು ಜೀವನ ಮಾಡಬೇಕಾಗಿದೆ. ಪರಮೇಶ್ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಭಯದ ನೆರಳಲ್ಲೇ ಜೀವನ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಆಗಲೇಬೇಕು. ವರ್ಷದಲ್ಲಿ ತೋಟಗಳಿಗೆ ಹತ್ತಾರು ಬಾರಿ ಕಾಡಾನೆಗಳು ದಾಳಿ ಮಾಡಿ ಪದೇ ಪದೇ ಬೆಳೆ ನಾಶ ಮಾಡುತ್ತಲೇ ಇವೆ. ಸಕಲೇಶಪುರ ತಾಲ್ಲೂಕಿನಲ್ಲಿ 90ಕ್ಕೂ ಹೆಚ್ಚು ಕಾಡಾನೆಗಳಿವೆ. ಸದಾ ಭಯದ ನೆರಳಿನಲ್ಲಿ ಬದುಕು ಸಾಗುತ್ತಿದೆ. ಕೆ. ಸತ್ಯನಾರಾಯಣ ಭಾರತೀಯ ಸಾಂಬಾರ್ ಮಂಡಳಿ ಉಪಾಧ್ಯಕ್ಷ ಯೋಜನೆಗಳಿಂದ ಸಮಸ್ಯೆ ಉದ್ಭವ ಕಾಡಾನೆಗಳ ಸಮಸ್ಯೆ ಕಳೆದ ಎರಡು ದಶಕಗಳಿಂದ ಈ ಭಾಗದಲ್ಲಿ ನಿರಂತರವಾಗಿದೆ. ಜಲವಿದ್ಯುತ್ ಯೋಜನೆಗಳು ಎತ್ತಿನಹೊಳೆಯಂತಹ ಯೋಜನೆಗಳಿಂದ ಕಾಡಾನೆ ಈಗ ಕಾಟಿಗಳ ಸಮಸ್ಯೆ ಕಾಡಾನೆ ಸಮಸ್ಯೆಗಿಂತಲೂ ಹೆಚ್ಚಾಗಿದೆ. ಕೆ.ಎಂ. ಉದಯ್‌ಶಂಕರ್ ಕುಂಬರಡಿ ಗ್ರಾಮ ಸಮಸ್ಯೆ ಇರುವೆಡೆ ಕಾರ್ಯಕ್ರಮ ಮಾಡಿ ಬೆಂಗಳೂರಿನಲ್ಲಿ ಆನೆಗಳ ದಿನಾಚರಣೆ ಮಾಡುವ ಬದಲು ಕಾಡಾನೆ ಉಪಟಳ ಹೆಚ್ಚಿರುವ ಪ್ರದೇಶದಲ್ಲಿ ಮಾಡಿದ್ದರೆ ಇಲ್ಲಿನ ಜನರ ಬವಣೆಯನ್ನಾದರೂ ತಿಳಿಯಬಹುದಿತ್ತು. ಕಾಟಾಚಾರಕ್ಕೆ ಕಾರ್ಯಕ್ರಮಕ್ಕೆ ಮಾಡಲಾಗುತ್ತಿದೆ. ನೈಜ ಸಮಸ್ಯೆ ಪರಿಹರಿಸಿ. ಎಚ್.ಕೆ. ಕುಮಾರಸ್ವಾಮಿ ಮಾಜಿ ಶಾಸಕ ಆನೆ ಸೆರೆಗೆ ಅನುಮತಿ ನೀಡಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿ ಆಗುತ್ತಿದೆ. ಉಪಟಳ ನೀಡುವ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಆನೆ ಕಾರಿಡಾರ್ ಮಾಡುವ ಪರಿಹಾರ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕು. ಮುರುಳಿಮೋಹನ್ ಕಾಂಗ್ರೆಸ್ ಮುಖಂಡ ಕಾರಿಡಾರ್‌ಗೆ ಸ್ಪಂದಿಸದ ಸರ್ಕಾರ ಆನೆ ಕಾರಿಡಾರ್ ನಿರ್ಮಾಣ ಮಾಡಲು ವಿಧಾನಸಭೆಯಲ್ಲಿಯೇ ಪ್ರಸ್ತಾಪಿಸಿದ್ದೇನೆ. ಆದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಕನಿಷ್ಠ ಆನೆ ಧಾಮವನ್ನಾದರೂ ನಿರ್ಮಾಣ ಮಾಡಬೇಕು. ಸಿಮೆಂಟ್ ಮಂಜು ಸಕಲೇಶಪುರ ಶಾಸಕ ಹೆಚ್ಚಿದ ಉಪಟಳ ಮಲೆನಾಡು ಭಾಗದಲ್ಲಿ ವಾಸದ ಮನೆ ಸಮೀಪವೇ ಕಾಡಾನೆಗಳು ಇನ್ನಿಲ್ಲದ ಉಪಟಳ ನೀಡುತ್ತಿವೆ. ಭತ್ತದ ಗದ್ದೆ ಕಾಫಿ ತೋಟ ಬೆಳೆಗಾರರು ತೆಗೆಸಿರುವ ಕೆರೆಗಳೇ ಕಾಡಾನೆಗಳ ನೆಚ್ಚಿನ ತಾಣವಾಗಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಿಗಟ್ಟಿದರೂ ಮತ್ತೆ ವಾಪಸಾಗುತ್ತಿವೆ. ಎಚ್.ಸಿ. ಗಗನ್ ಹಾಡ್ಲಹಳ್ಳಿ ನಿವಾಸಿ ಈಗಲಾದರೂ ಎಚ್ಚೆತ್ತುಕೊಳ್ಳಿ ಈಗಾಗಲೇ ರೈತರು ತಮ್ಮ ಜಮೀನುಗಳಿಗೆ ಲಕ್ಷಾಂತರ ವ್ಯಯಿಸಿ ಸೌರ ವಿದ್ಯುತ್ ಬೇಲಿ ಅಳವಡಿಸಿದ್ದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಮಲೆನಾಡಿನಲ್ಲಿ ಇನ್ನಷ್ಟು ಪ್ರಾಣ ಬೆಳೆ ಹಾನಿಯಾಗುವ ಮೊದಲು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ವಿದ್ಯಾ ನಂದನ್ ಅತ್ತಿಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.