ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನದಿ ದಡದಲ್ಲೇ ವಾಸ: ಮಳೆ ಬಂದರೆ ವನವಾಸ- ಹೊಳೆನರಸೀಪುರ ಮೀನುಗಾರರ ಬವಣೆ

ಎಚ್.ವಿ. ಸುರೇಶ್‌ಕುಮಾರ್
Published : 9 ನವೆಂಬರ್ 2023, 6:28 IST
Last Updated : 9 ನವೆಂಬರ್ 2023, 6:28 IST
ಫಾಲೋ ಮಾಡಿ
Comments

ಹೊಳೆನರಸೀಪುರ: ಹೇಮಾವತಿ ನದಿ ದಡದಲ್ಲಿ 35 ವರ್ಷಗಳಿಂದ 9 ಮೀನುಗಾರರ ಕುಟುಂಬಗಳು ಜೀವನ ನಡೆಸುತ್ತಿದ್ದು, ಗಟ್ಟಿ ಸೂರಿಲ್ಲದೇ ಅಭದ್ರತೆಯಲ್ಲಿ ಜೀವನ ನಡೆಸುತ್ತಿವೆ.

ಮೀನನ್ನು ಮಾರಿ ಬದುಕು ಕಟ್ಟಿಕೊಂಡಿರುವ ಈ ಕುಟುಂಬಗಳಿಗೆ ಶಾಶ್ವತ ಸೂರು ಸಿಕ್ಕಿಲ್ಲ. ಇಲ್ಲಿನ ಅರಕಲಗೂಡು ರಸ್ತೆಯ ಹೇಮಾವತಿ ನದಿ ದಡದಲ್ಲಿ 9 ಮೀನುಗಾರರ ಕುಟುಂಬದ 45 ಜನರು ಹಾಗೂ 10ಕ್ಕೂ ಹೆಚ್ಚು ಮಕ್ಕಳು, ಪ್ಲಾಸ್ಟಿಕ್ ಹೊದಿಕೆಯ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ರಾತ್ರಿ ವೇಳೆ ನದಿಗೆ ಬಲೆ ಹಾಕುವುದು, ಬೆಳಿಗ್ಗೆ ಎದ್ದು ಬಲೆಗೆ ಬಿದ್ದ ಮೀನು ಹಾಗೂ ಏಡಿಗಳನ್ನು ಅರಕಲಗೂಡು ರಸ್ತೆಯಲ್ಲಿ ಮಾರಿ, ಬಂದ ಹಣದಲ್ಲಿ ಜೀವನ ನಡೆಸುವುದು ಇವರ ನಿತ್ಯದ ಕೆಲಸ.

‘ನಮ್ಮ ಹಿರಿಯರೊಂದಿಗೆ ನಾವು ಮೀನುಗಾರಿಕೆ ನಡೆಸಿ ಬದುಕು ರೂಪಿಸಿಕೊಳ್ಳಲು ಚಿಕ್ಕಮಗಳೂರು ಹಾಗೂ ಬೇಲೂರು ತಾಲ್ಲೂಕಿನ ವಿವಿಧ ಭಾಗಗಳಿಂದ ಈ ನದಿ ದಡಕ್ಕೆ ಬಂದಿದ್ದೇವೆ. ಅಂದಿನಿಂದ ಇಂದಿನವರೆಗೂ ನಾವು ಇದೇ ಜಾಗದಲ್ಲಿ ವಾಸ ಇದ್ದೇವೆ. ನಮಗೆ ಪಡಿತರ ಚೀಟಿ ಇದೆ. ಮತದಾನದ ಹಕ್ಕನ್ನೂ ಪಡೆದುಕೊಂಡಿದ್ದೇವೆ’ ಎನ್ನುತ್ತಾರೆ ಫಕೀರಪ್ಪ.

‘ಇಷ್ಟು ವರ್ಷದಲ್ಲಿ 2 ಬಾರಿ ನದಿಯಲ್ಲಿ ನೀರು ಹೆಚ್ಚಾಗಿ, ನಮ್ಮ ಗುಡಿಸಲುಗಳು ಮುಳುಗಿ ಹೋದವು. ಆಗ ಸಚಿವರಾಗಿದ್ದ ರೇವಣ್ಣ ಅವರು ನಮ್ಮನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಿ ಅಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದರು. ಆ ಸಮಯದಲ್ಲಿ ಶಾಸಕರು, ವಿವಿಧ ಸಂಘಟನೆಗಳ ಸದಸ್ಯರು ನಿತ್ಯ ಜೀವನಕ್ಕೆ ಬೇಕಾದ ಆಹಾರ ಪದಾರ್ಥಗಳು, ಹಾಸಿಗೆ, ಹೊದಿಕೆ, ಅಡುಗೆ ಮಾಡಲು ಬೇಕಾದ ಪರಿಕರಗಳನ್ನು ನೀಡಿ ಸಹಕರಿಸಿದರು’ ಎಂದು ಸಿದ್ದಪ್ಪ, ಗಿರೀಶ, ರಂಗಸ್ವಾಮಿ ಹೇಳುತ್ತಾರೆ.

‘ನಮಗೆ ಆಶ್ರಯ ಮನೆಗಳನ್ನು ನೀಡಿ ಎಂದು ಎಷ್ಟೇ ವಿನಂತಿಸಿದರೂ ಇನ್ನೂ ನೀಡಿಲ್ಲ’ ಎನ್ನುತ್ತಾರೆ ಅವರು.

‘ಅಪ್ಪ ನಮಗೇಕೆ ಮನೆ ಇಲ್ಲ ಎಂದು ಕೇಳಿದಾಗ ಇದೇ ನಮ್ಮ ಅರಮನೆ ಎಂದು ಹೇಳುತ್ತಾರೆ. ನಾನು ಮೀನು ಹಿಡಿಯಲ್ಲ. ನಾನು ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿ ಮನೆ ಕಟ್ಟಿಕೊಳ್ಳುತ್ತೇನೆ. ನಮ್ಮ ಕುಟುಂಬದರನ್ನು ನದಿ ದಡದಿಂದ ಬಿಡಿಸಿ ಊರೊಳಗೆ ವಾಸ ಮಾಡುವಂತೆ ಮಾಡುತ್ತೇನೆ’ ಎನ್ನುತ್ತಾನೆ ಗುಡಿಸಲಿನಲ್ಲಿ ವಾಸಿಸುವ 9ನೇ ತರಗತಿ ಮಹೇಶ್‌.

ನದಿಯಲ್ಲಿ ನೀರು ಹೆಚ್ಚಾಗಿ ಮೀನು ಹಿಡಿಯಲು ಸಾಧ್ಯವಾಗದಿದ್ದಾಗ ನದಿ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ ಎನ್ನುತ್ತಾರೆ ಮೀನು ಮಾರುವ ಮಹಿಳೆಯರು.

ಹೇಮಾವತಿ ನದಿ ದಡದ ಮೀನುಗಾರರ ಪುಟ್ಟ ಗುಡಿಸಲು
ಹೇಮಾವತಿ ನದಿ ದಡದ ಮೀನುಗಾರರ ಪುಟ್ಟ ಗುಡಿಸಲು
ಹೊಳೆನರಸೀಪುರದ ಅರಕಲಗೂಡು ರಸ್ತೆಯಲ್ಲಿ ಮೀನು ಏಡಿ ಮಾರಾಟ ಮಾಡುತ್ತಿರುವ ಮಹಿಳೆ
ಹೊಳೆನರಸೀಪುರದ ಅರಕಲಗೂಡು ರಸ್ತೆಯಲ್ಲಿ ಮೀನು ಏಡಿ ಮಾರಾಟ ಮಾಡುತ್ತಿರುವ ಮಹಿಳೆ

‘ಮನೆ ನೀಡಲು ಯೋಜನೆ ಇಲ್ಲ’

‘ಮೀನುಗಾರರು ಹಲವಾರು ವರ್ಷಗಳಿಂದ ನದಿ ದಡದಲ್ಲೇ ವಾಸ ಇದ್ದಾರೆ. ಅವರಿಗೆ ಉಚಿತವಾಗಿ ನಮ್ಮ ಇಲಾಖೆಯಿಂದ ಬಲೆ ನೀಡಿದ್ದೇವೆ. ನಿಗದಿತ ಶುಲ್ಕ ಪಾವತಿಸಿಕೊಂಡು ನದಿಯಲ್ಲಿ ಬಲೆ ಹಾಕಿ ಮೀನುಹಿಡಿಯಲು ಪರವಾನಗಿ ನೀಡಿದ್ದೇವೆ’ ಎನ್ನುತ್ತಾರೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಾ. ಇಲಾಖೆಯಲ್ಲಿ ಇರುವ ಸೌಲಭ್ಯಗಳನ್ನು ಅವರಿಗೆ ಕಾಲಕಾಲಕ್ಕೆ ತಲುಪಿಸುತ್ತೇವೆ. ಅವರಲ್ಲಿ ಕೆಲವರಿಗೆ ಮಾತ್ರ ಅವರ ಮೂಲ ಊರಿನಲ್ಲಿ ಆಧಾರ್‌ ಕಾರ್ಡ್‌ ಇದೆ. ಕೆಲವರಿಗೆ ಇಲ್ಲ. ಇವರಿಗೆ ನೆಲೆ ಒದಗಿಸಲು ನಿವೇಶನ ಅಥವಾ ಮನೆ ನೀಡಲು ನಮ್ಮಲ್ಲಿ ಯಾವುದೇ ಯೋಜನೆಗಳಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT