ಭಾನುವಾರ, ಸೆಪ್ಟೆಂಬರ್ 19, 2021
24 °C
ಬಿ.ಸಿ. ರೋಡ್‌ ಚತುಷ್ಪಥ ಕಾಮಗಾರಿ ಅವೈಜ್ಞಾನಿಕ, ಆಮೆಗತಿ

ಹಾಸನ: ಪ್ರಯಾಣ ದುಸ್ತರ, ವ್ಯಾಪಾರಕ್ಕೆ ಭಾರಿ ಹೊಡೆತ

ಜಾನೇಕೆರೆ ಆರ್. ಪರಮೇಶ್ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ರಾಜಧಾನಿ ಹಾಗೂ ಬಂದರು ನಗರ ಕರಾವಳಿ ನಡುವಿನ ಶಿರಾಡಿ ಘಾಟ್‌ ಮಾರ್ಗದ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್‌ ಆಗಿರುವುದರಿಂದ ಸರಕು ಸಾಗಣೆ ಹಾಗೂ ಆರ್ಥಿಕ ಚಟುವಟಿಕೆಗೆ ಭಾರಿ ಹೊಡೆತ ಬಿದ್ದಿದೆ.

ದೋಣಿಗಾಲ್‌ ಬಳಿ ಭೂ–ಕುಸಿತ ಉಂಟಾಗಿರುವುದರಿಂದ ಆರು ದಿನಗಳಿಂದ ವಾಹನ ಸಂಚಾರವನ್ನು ಬಂದ್‌ ಮಾಡಿ ಚಾರ್ಮಾಡಿ ಘಾಟ್ ಹಾಗೂ ಮಡಿಕೇರಿ– ಸಂಪಾಜೆ– ಪುತ್ತೂರು ಮಾರ್ಗಕ್ಕೆ ಬದಲಿಸಲಾಗಿದೆ. ಆದರೆ ಈ ಮಾರ್ಗಗಳೂ ಹೆಚ್ಚು ಸುರಕ್ಷಿತವಾಗಿಲ್ಲ ಎನ್ನಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ 24 ಗಂಟೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ವಾಹನಗಳು ಶಿರಾಡಿ ಘಾಟ್ ಮಾರ್ಗದಲ್ಲಿ ಸಂಚರಿಸುತ್ತವೆ. ಮಂಗಳೂರು ಬಂದರಿನಿಂದ ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಿಗೆ ಅನಿಲ, ಪೆಟ್ರೋಲಿಯಂ ಸೇರಿದಂತೆ ಅಗತ್ಯ ವಸ್ತುಗಳು ಹಾಗೂ ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುವುದರಿಂದ ಇದು ರಾಜ್ಯದ ಜೀವನಾಡಿ ಆಗಿದೆ. ಆದರೆ, ಭೂಕುಸಿತ ಹಾಗೂ ಇನ್ನಿತರ ಕಾರಣದಿಂದಾಗಿ 2018ರಿಂದಲೂ ಬಂದ್‌ ಆಗುತ್ತಲೇ ಇದೆ. ಈಗ ಲಾಕ್‌ಡೌನ್ ತೆರವಾಗಿ ಅಂಗಡಿಗಳು, ಹೋಟೆಲ್‌ಗಳು ಬಾಗಿಲು ತೆರೆದ ಬೆನ್ನ ಹಿಂದೆಯೇ ಹೆದ್ದಾರಿ ಬಂದ್‌ನಿಂದ ವ್ಯಾಪಾರ ವಹಿವಾಟು ಹಾಗೂ ಸಾರ್ವಜನಿಕರಿಗೆ ನಷ್ಟ ಉಂಟಾಗುತ್ತಿದೆ.

‘ಚತುಷ್ಪಥ ವಿಸ್ತರಣಾ ಕಾಮಗಾರಿಯಲ್ಲಿ ದಿಬ್ಬವನ್ನು ಇಳಿಜಾರು (ಸ್ಲೋಪ್‌ ಕಟ್ಟಿಂಗ್‌) ಮಾಡದೆ, ನೇರವಾಗಿ 90 ಡಿಗ್ರಿಯಲ್ಲಿ ಕತ್ತರಿಸಿದ್ದಾರೆ. ವೈಜ್ಞಾನಿಕವಾಗಿ 5 ಮೀಟರ್‌ ಎತ್ತರವನ್ನು ಕಟ್ಟಿಂಗ್ ಮಾಡುವಾಗ 5 ಮೀಟರ್ ಇಳಿಜಾರು ಇರಬೇಕು, ಕನಿಷ್ಠ 2.5 ಮೀಟರ್ ಆದರೂ ಇರಬೇಕು. ಮಲೆನಾಡಿನ ಈ ಭಾಗದಲ್ಲಿ ಸಡಿಲ ಮಣ್ಣು ಇರುವುದರಿಂದ ಸಹಜವಾಗಿ ಕುಸಿಯುತ್ತದೆ’ ಎಂದು ಹೆಸರು ಹೇಳಲು ಪ್ರಕಟವಾಗಲು ಬಯಸದ ನಿವೃತ್ತ ಅಧಿಕಾರಿಯೊಬ್ಬರು ಹೇಳಿದರು.

ತಡೆಗೋಡೆ ನಿರ್ಮಿಸದೆ 90 ಡಿಗ್ರಿ ಅಳತೆಯಲ್ಲಿ ವಿಸ್ತರಣೆ ಮಾಡಿದ್ದರಿಂದ 2019ರಲ್ಲಿ ದೊಡ್ಡತಪ್ಪಲೆ ಬಳಿ ಮಳೆ ನೀರಿನೊಂದಿಗೆ ಮೇಲ್ಭಾಗದ ಸುಮಾರು ಎರಡು ಎಕರೆ ಪ್ರದೇಶದ ಕಾಫಿ ತೋಟ ರಸ್ತೆಗೆ ಕುಸಿದು, ಟ್ಯಾಂಕರ್ ಮೇಲೆ ಬಿದ್ದಿದ್ದರಿಂದ ಟ್ಯಾಂಕರ್‌ ಸುಮಾರು 300 ಅಡಿ ಆಳದ ಕಂದಕಕ್ಕೆ ಬಿದ್ದು ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದರು. ಒಂದು ವಾರದ ನಂತರ ಅವರ ಮೃತದೇಹ ಪತ್ತೆ ಆಗಿತ್ತು.

‘2017ರಲ್ಲಿ ಶುರುವಾದ ಹಾಸನ– ಬಿ.ಸಿ. ರೋಡ್‌ ಚತುಷ್ಪಥ ನಿರ್ಮಾಣ ಕಾರ್ಯ ನಾಲ್ಕು ವರ್ಷವಾದರೂ ಶೇ 20ರಷ್ಟೂ ಪೂರ್ಣಗೊಂಡಿಲ್ಲ. ಆ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಶಿರಾಡಿ ರಸ್ತೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸಂಜಿತ್‌ ಶೆಟ್ಟಿ ಹೇಳಿದರು.

‘ನಿರ್ಮಾಣದ ಗುತ್ತಿಗೆ ಪಡೆದಿದ್ದ ಐಸೋಲಕ್ಸ್‌ ಕಾರ್ಸನ್‌ ಇಂಡಿಯಾ ಎಂಜಿನಿಯರಿಂಗ್ ಅಂಡ್ ಕನ್ಟ್ರಕ್ಷನ್‌ ಕಂಪನಿ ಆರ್ಥಿಕವಾಗಿ ದಿವಾಳಿಗಿದೆ ಎಂದು ಘೋಷಿಸಿಕೊಂಡಿದ್ದು, ಉಪಗುತ್ತಿಗೆ ಪಡೆದ ರಾಜ್‌ಕಮಲ್‌ ಬಿಲ್ಡರ್ಸ್‌ ಹಾಗೂ ಐಸೋಲಕ್ಸ್‌ ಕಾರ್ಸನ್‌ ನಡುವಿನ ಆರ್ಥಿಕ ಗೊಂದಲ, ಕಲ್ಲು ಗಣಿಗಾರಿಕೆ ಅನುಮತಿ ವಿಳಂಬ ಹಾಗೂ ಕೋವಿಡ್‌–19 ಕಾರಣಕ್ಕೆ ವಿಳಂಬವಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್‌ ಡೈರೆಕ್ಟರ್‌ ಎ.ಕೆ. ಜಾನ್‌ಬಾಜ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.