ಶುಕ್ರವಾರ, ಫೆಬ್ರವರಿ 26, 2021
30 °C
ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗೆ ಸಂಪರ್ಕ

₹1865 ಕೋಟಿ ಹೆದ್ದಾರಿ ಯೋಜನೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹಾಸನ: ಹಾಸನದಿಂದ ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ₹ 1865 ಕೋಟಿ ವೆಚ್ಚದ ಮೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದರು.

ಹೊಸ ಬಸ್ ನಿಲ್ದಾಣ ಬಳಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗಡ್ಕರಿ, ಬೆಂಗಳೂರು-ಮಂಗಳೂರು ನಡುವೆ ನೇರ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ನಲ್ಲಿ 23 ಕಿ.ಮೀ. ಉದ್ದದ ಸುರಂಗ ನಿರ್ಮಾಣ ಮಾಡಲು ಈಗಾಗಲೇ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ತಯಾರು ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಒಟ್ಟು ₹ 10 ಸಾವಿರ ಕೋಟಿ ವೆಚ್ಚದ ಕಾಮಗಾರಿಗೆ ಮುಂದಿನ 6 ತಿಂಗಳ ವೇಳೆಗೆ ಟೆಂಡರ್ ಕರೆಯಲಾಗುವುದು. ಈ ಯೋಜನೆ ಕಾರ್ಯಗತವಾದರೆ, ಕರ್ನಾಟಕ ಹಾಗೂ ಮಂಗಳೂರು ಬಂದರು ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ನುಡಿದರು.

ರಾಜ್ಯದಲ್ಲಿ ಮುಂದಿನ ವರ್ಷಗಳಲ್ಲಿ ₹ 2 ಲಕ್ಷ ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಭೂ ಸ್ವಾಧೀನ ಸಮಸ್ಯೆಯಿಂದ ವಿಳಂಬವಾಗಿದ್ದ 117 ಕಿ.ಮೀ, ಉದ್ದದ ₹ 7 ಸಾವಿರ ಕೋಟಿ ವೆಚ್ಚದ ಮೈಸೂರು–ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಜನವರಿಯಿಂದ ಆರಂಭಗೊಳ್ಳಲಿದೆ. ಅದೇ ರೀತಿ ಮೂರು ಹಂತಗಳಲ್ಲಿ ₹ 16 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರು ಹೊರ ವರ್ತುಲ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಬೆಂಗಳೂರು–ಚೆನೈ ಎಕ್ಸೆಪ್ರೆಸ್‌ ಮಾರ್ಗದ ಬಗ್ಗೆ ಪ್ರಸ್ತಾಪಿಸಿದ ಗಡ್ಕರಿ, ಇದು ಬಂದರು ನಗರಿಗೆ ಸಂಪರ್ಕ ಕಲ್ಪಿಸುವ ಹೊಸ ಕೊಂಡಿಯಾಗಿರುವ ಕಾರಣ ಆಮದು, ರಫ್ತು ಕೇಂದ್ರವಾಗಲಿದೆ. ಈ ಮಾರ್ಗ ಕರ್ನಾಟಕದಲ್ಲಿ 76 ಕಿ.ಮೀ, ಆಂದ್ರಪ್ರದೇಶದಲ್ಲಿ 91 ಕಿ.ಮೀ ಮತ್ತು ತಮಿಳುನಾಡಿನಲ್ಲಿ 116 ಕಿ.ಮೀ. ಹಾದು ಹೋಗುತ್ತದೆ. ಇದರ ಅಂದಾಜು ವೆಚ್ಚ ₹ 18 ಸಾವಿರ ಕೋಟಿ ಎಂದು ಸಚಿವರು ವಿವರಿಸಿದರು.

ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಸರ್ಕಾರ ಕೇವಲ ಹಳೇ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಎಲ್‌.ಆರ್‌.ಶಿವರಾಮೇಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೊಯಲ್‌ ಇದ್ದರು.

ಯೋಜನೆ ಅಂಕಿ ಅಂಶ

₹191.6 ಕೋಟಿ -ಬಾಣಾವಾರ– ಹುಳಿಯಾರು (48.2 ಕಿ.ಮೀ.)

₹849.39 ಕೋಟಿ -ಬೇಲೂರು– ಬಿಳಿಕೆರೆ (128.35 ಕಿ.ಮೀ.)

₹823.4 ಕೋಟಿ -ಚನ್ನರಾಯಪಟ್ಟಣ– ಹಾಸನ ಬೈಪಾಸ್‌ ದ್ವಿಪಥದಿಂದ ಚತುಷ್ಪಥಕ್ಕೆ ವಿಸ್ತರಣೆ (20.71 ಕಿ.ಮೀ.)

***

ಜೈವಿಕ ಇಂಧನಕ್ಕೆ ಆದ್ಯತೆ

ರೈತರು ಸಾಂಪ್ರದಾಯಿಕ ಬೆಳೆಗಳಿಂದ ಜೈವಿಕ ಇಂಧನ ಉತ್ಪಾದನೆಯತ್ತ ಕೃಷಿ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳದಿದ್ದರೆ ಭವಿಷ್ಯವಿಲ್ಲ ಎಂದು ನಿತಿನ್ ಗಡ್ಕರಿ ಎಚ್ಚರಿಸಿದರು.

ಕರ್ನಾಟಕದಲ್ಲಿ ಸಾಕಷ್ಟು ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಕೇಂದ್ರಗಳಿವೆ. ಈ ಶೈಕ್ಷಣಿಕ ಕೇಂದ್ರಗಳಲ್ಲಿ ಜೈವಿಕ ಇಂಧನ ತಂತ್ರಜ್ಞಾನ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯ ಇಂಧನ ಕಂಡುಕೊಳ್ಳುವುದು ದೇಶಕ್ಕೆ ಅನಿವಾರ್ಯವಾಗಿದೆ. ದೇಶವು ಪ್ರತಿ ವರ್ಷ 
₹ 8 ಲಕ್ಷ ಕೋಟಿಯಷ್ಟು ಇಂಧನ ಆಮದು ಮಾಡಿಕೊಳ್ಳುತ್ತಿದೆ. ಆದ್ದರಿಂದ ಈ ಹೊರೆ ಇಳಿಸಲು ಇಥೆನಾಲ್, ಬಯೋ ಇಥೆನಾಲ್‌ನಂತಹ ಜೈವಿಕ ಇಂಧನ ಬಳಕೆಯನ್ನು ಪ್ರೋತ್ಸಾಹಿಸುತ್ತಿದೆ. ಜೈವಿಕ ಇಂಧನ ಬಳಕೆಗೆ ಪೂರಕವಾದ ಹೊಸ ವಾಹನಗಳನ್ನು ನಿರ್ಮಿಸುವಲ್ಲಿ ಕಂಪನಿಗಳೂ ಮುಂದಾಗಿವೆ ಎಂದರು.

***

ಗೋದಾವರಿ ನದಿ ಜೋಡಣೆ

ಕಾವೇರಿ ವಿವಾದಕ್ಕೆ ನದಿ ಜೋಡಣೆಯೇ ಮದ್ದು. ಈ ನಿಟ್ಟಿನಲ್ಲಿ ಗೋದಾವರಿ– ಕಾವೇರಿ ನದಿ ಜೋಡಣೆಯ ₹ 80 ಸಾವಿರ ಕೋಟಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಮುಂದಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದರು.

ಗೋದಾವರಿಯಲ್ಲಿ 500 ಟಿಎಂಸಿ ಅಡಿಗೂ ಹೆಚ್ಚು ನೀರು ಸಮುದ್ರ ಸೇರುತ್ತಿದೆ. ಅದನ್ನು ಕಾವೇರಿ ನದಿಗೆ ಹರಿಸುವ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಗೋದಾವರಿಯಿಂದ ಕೃಷ್ಣಾ ನದಿಗೆ, ಕೃಷ್ಣಾ ನದಿಯಿಂದ ಪೆನ್ನಾರ್ ನದಿಗೆ, ಪೆನ್ನಾರ್‌ ನದಿಯಿಂದ ಕಾವೇರಿ ನದಿ ಜೋಡಣೆ ಮಾಡುವುದರಿಂದ 450 ಟಿಎಂಸಿ ನೀರು ಪಡೆದುಕೊಳ್ಳಲು ಸಾಧ್ಯವಿದೆ. ಆಗ ತಮಿಳುನಾಡಿನ ಕಡೆ ಭಾಗಕ್ಕೂ ನೀರು ಲಭ್ಯವಾಗುತ್ತದೆ. ಇದರಿಂದ ಕರ್ನಾಟಕ– ತಮಿಳುನಾಡು ನಡುವಿನ ಕಾವೇರಿ ವಿವಾದ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.