ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಮಲೆನಾಡಿನಲ್ಲಿ ಮತದಾನ ಬಹಿಷ್ಕಾರದ ಅಸ್ತ್ರ

ಕಸ್ತೂರಿ ರಂಗನ್‌ ವರದಿ ಜಾರಿಗೆ ವಿರೋಧ: ಚುನಾವಣೆ ಸಮಯದಲ್ಲಿ ಆಕ್ರೋಶ
Last Updated 17 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಹಾಸನ: ಗ್ರಾಮೀಣ ಪ್ರದೇಶದಲ್ಲಿ ಹಳ್ಳಿ ರಾಜಕೀಯ ರಂಗು ಪಡೆದುಕೊಂಡಿದೆ. ಮತ್ತೊಂದೆಡೆ ಜಿಲ್ಲೆಯ ಮಲೆನಾಡು ಭಾಗದ ಜನರು ಕಸ್ತೂರಿ ರಂಗನ್‌ ವರದಿ ಅನುಷ್ಠಾನ ವಿರೋಧಿಸಿ ಮತದಾನ ಬಹಿಷ್ಕಾರದ ಅಸ್ತ್ರ ಪ್ರಯೋಗಿಸುವ ಬೆದರಿಕೆ ಹಾಕಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಹೆತ್ತೂರು, ಹೊಂಗಡಹಳ್ಳ, ಹೆಗ್ಗದ್ದೆ ಗ್ರಾಮ ಪಂಚಾಯಿತಿಗೆ ಯಾವುದೇ ನಾಮಪತ್ರ ಸಲ್ಲಿಸಿಲ್ಲ.
ದೇವಾಲದಕೆರೆ ಗ್ರಾಮ ಪಂಚಾಯಿತಿ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ್ದ 28 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದಾರೆ. ಅದೇ ರೀತಿ, ಹಾನುಬಾಳು ಗ್ರಾಮ ಪಂಚಾಯಿತಿಯ ಅಗನಿ ಗ್ರಾಮದಿಂದ ಒಂದು ಸ್ಥಾನಕ್ಕೆ ಸಲ್ಲಿಕೆಯಾಗಿದ್ದ 5 ನಾಮಪತ್ರಗಳನ್ನು ಸಹ ಹಿಂದಕ್ಕೆ ಪಡೆಯಲಾಗಿದೆ.

ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದ ಗ್ರಾಮಗಳಿಗೆ ಪೊಲೀಸ್‌, ಕಂದಾಯ ಇಲಾಖೆ, ಅಧಿಕಾರಿಗಳ ಹಾಗೂ
ಉಪವಿಭಾಗಾಧಿಕಾರಿ ಭೇಟಿ ನೀಡಿ ಮಾತುಕತೆ ನಡೆಸಿ, ಸಾಂವಿಧಾನಿಕ ಹಕ್ಕು ಕಾಯ್ದುಕೊಳ್ಳಲು ಸಾಕಷ್ಟು ಮನವಿ ಮಾಡಿದರು. ಆದರೆ, ಅಭ್ಯರ್ಥಿಗಳು ಅವರ ಮನವಿಗೆ ಕಿವಿಗೊಡಲಿಲ್ಲ. ನಾಮಪತ್ರ ಸಲ್ಲಿಸುವಂತೆ ಪೊಲೀಸರು ಧ್ವನಿವರ್ಧಕ ಮೂಲಕ ಮಾಡಿದ ಮನವಿಯೂ ಫಲ ನೀಡಲಿಲ್ಲ.

ಮಲೆನಾಡು ಭಾಗದಲ್ಲಿ ಸಾಕಷ್ಟು ಸಮಸ್ಯೆ ಇದೆ. ದಶಕಗಳಿಂದ ಕಾಡಾನೆ ಸಮಸ್ಯೆಯಿಂದ ಹೈರಾಣಾಗಿರುವ ಕಾಡಂಚಿನ ಜನರ ಸಮಸ್ಯೆಗೆ ಪರಿಹಾರ ಇನ್ನೂ ದೊರೆತಿಲ್ಲ. ಅಮಾಯಕರು ಕಾಡಾನೆಗೆ ಬಲಿಯಾಗಿದ್ದಾರೆ. ಮಳೆಗಾಲದಲ್ಲಿ ರಸ್ತೆ, ವಿದ್ಯುತ್‌ ಸಮಸ್ಯೆ ಹೇಳತೀರದು. ಇದರ ನಡುವೆ ಕಸ್ತೂರಿ ರಂಗನ್‌ ವರದಿ ಜಾರಿಯಾದರೆ ಹಲವು ನಿರ್ಬಂಧ ಹೇರಲಾಗುತ್ತದೆ ಎಂಬ ಆತಂಕ ಜನರನ್ನು ಕಾಡುತ್ತಿದೆ. ಹಾಗಾಗಿ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ವರದಿ ಅನುಷ್ಠಾನಕ್ಕಾಗಿ ಹಸಿರು ನ್ಯಾಯಪೀಠ ಗಡುವು ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ಕ್ರಮ ಆರಂಭಿಸಿದೆ. ಇದು ಪರಿಸರ ಸೂಕ್ಷ್ಮವಲಯ ಎಂದು ಗುರುತಿಸಿರುವ ಪ್ರದೇಶಗಳ ಜನರ ನೆಮ್ಮದಿ ಕೆಡಿಸಿದೆ. ಹಾಗಾಗಿ ಸಕಲೇಶಪುರ ತಾಲ್ಲೂಕಿನ ವಿವಿಧ ಹಳ್ಳಿಗಳ ಜನರು ಚುನಾವಣೆ ಬಹಿಷ್ಕರಿಸುವ ಮೂಲಕ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವರದಿಯಲ್ಲಿನ ಅಂಶಗಳ ಜತೆಗೆ ಕೆಲ ವದಂತಿಗಳು ಸೇರಿರುವುದು ಜನರ ಆತಂಕ ಹೆಚ್ಚಿಸಿದೆ.

ಕಸ್ತೂರಿ ರಂಗನ್ ವರದಿಯಲ್ಲಿ ಏನಿದೆ ಎನ್ನವು ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಕೆಲವರಿಗೆ ಆಯ್ದ ಭಾಗಗಳ ಬಗ್ಗೆಯಷ್ಟೇ ಅರಿವಿದೆ. ಸ್ಥಳೀಯ ಭಾಷೆಯಲ್ಲಿ ವರದಿಯನ್ನು ಮುದ್ರಿಸಿ ಜಾಗೃತಿ ಮೂಡಿಸಬೇಕು. ನಂತರವಷ್ಟೇ ಅದನ್ನು ಜಾರಿಗೊಳಿಸುವ ಬಗ್ಗೆ ತೀರ್ಮಾನಿಸಬೇಕು ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹ.

‘ಐದು ರೀತಿಯ ಕಾಮಗಾರಿ ನಡೆಸದಂತೆ ಕಸ್ತೂರಿ ರಂಗನ್‌ ವರದಿಯಲ್ಲಿ ಹೇಳಿದೆ. ಕೆಮಿಕಲ್‌ ಕಾರ್ಖಾನೆ, ಉಷ್ಣ ವಿದ್ಯುತ್ ಸ್ಥಾವರ, ಗಣಿಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ. ಸಕಲೇಶಪುರ ಭಾಗದಲ್ಲಿ ಪರಿಸರ ನಾಶಕ್ಕೆ ಕಾರಣವಾಗಿರುವ ಕಿರು ಹಾಗೂ ಬೃಹತ್‌ ಜಲ ವಿದ್ಯುತ್ ಯೋಜನೆ, ನದಿ ತಿರುವು ಯೋಜನೆಗಳಿಗೆ ವರದಿಯಲ್ಲಿ ತಡೆ ಹೇರಿಲ್ಲ. ಎತ್ತಿನಹೊಳೆ, ಗುಂಡ್ಯಾ ಜಲವಿದ್ಯುತ್‌ ಯೋಜನೆ ಪರಿಸರಕ್ಕೆ ಮಾರಕವಾದ ಯೋಜನೆ ಆಗಿದೆ. ಇದರಿಂದಾಗಿಯೇ ವನ್ಯಜೀವಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿವೆ'ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎ.ಕಿಶೋರ್ ಕುಮಾರ್‌ ‘ಪ್ರಜಾವಾಣಿ’ ತಿಳಿಸಿದರು.

"ಕೇವಲ ಉಪಗ್ರಹ ಸರ್ವೆ ಆಧರಿಸಿ ವರದಿ ತಯಾರಿಸಲಾಗಿದ್ದು, ಹಸಿರಾಗಿ ಕಾಣಿಸುವ ಗದ್ದೆ, ತೋಟಗಳನ್ನೆಲ್ಲ ಸೂಕ್ಷ್ಮ ವಲಯ ಎಂದು ಅಕ್ಷಾಂಶ, ರೇಖಾಂಶದ ಮೂಲಕ ಗುರುತಿಸಲಾಗಿದೆ. ಪಶ್ಚಿಮಘಟ್ಟದಿಂದ ಅಂದಾಜು 40 ಕಿ.ಮೀ. ದೂರದ ಅರೆಮಲೆನಾಡು–ಬಯಲು ಪ್ರದೇಶ ಕೂಡುವ ಆಲೂರು ತಾಲ್ಲೂಕಿನ ಅಡಿಬೈಲು ಗ್ರಾಮ ಪಟ್ಟಿಯಲ್ಲಿ ಸೇರಿಕೊಂಡಿದೆ' ಎಂದರು.

‘ವರದಿಯನ್ನು ಕನ್ನಡ ಭಾಷೆಯಲ್ಲಿ ಮುದ್ರಿಸಿ ಗ್ರಾಮ ಪಂಚಾಯಿತಿವಾರು ವಿತರಣೆ ಮಾಡಬೇಕು. ವಾಸದ ಮನೆಗಳಿಗೆ ಹಸಿರು ಬಣ್ಣ ಬಳಿಯಬೇಕು. ರಾತ್ರಿ 7ರ ಬಳಿಕ ವಿದ್ಯುತ್‌ ದೀಪ ಹಚ್ಚಬಾರದು. ರಸ್ತೆ ಡಾಂಬರೀಕರಣ ಮಾಡಬಾರದು ಎಂಬ ವದಂತಿ ಹರಿದಾಡುತ್ತಿದೆ. ಈ ಗೊಂದಲ ಹೋಗಲಾಡಿಸಬೇಕು. ರಕ್ಷಿತಾರಣ್ಯಗಳು ಸಂಪೂರ್ಣ ರಕ್ಷಣೆಯಾಗಬೇಕು. ಸ್ಥಳೀಯರ ಸಹಕಾರ ಪಡೆದು ಅರಣ್ಯ ಮತ್ತು ವನ್ಯಜೀವಿ ರಕ್ಷಣೆ ಮಾಡಬೇಕು. ಅರಣ್ಯ ರಕ್ಷಣೆಗೆ ಸಂಬಂಧಟ್ಟ ಕಾನೂನುಗಳು ಜಾರಿಯಾಗಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT