ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಶೋಷಿತರ ಹಿತರಕ್ಷಣೆ ಎಲ್ಲ ಇಲಾಖೆಗಳ ಹೊಣೆ

ಜಿಲ್ಲಾ ಮಟ್ಟದ ಜಾಗೃತಿ, ಉಸ್ತುವಾರಿ ಸಮಿತಿ ಸಭೆಯಲ್ಲಿ ಸಿಇಒ ಕಾಂತರಾಜು
Last Updated 30 ಜೂನ್ 2022, 2:11 IST
ಅಕ್ಷರ ಗಾತ್ರ

ಹಾಸನ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಹಿತರಕ್ಷಣೆ, ಶೋಷಣೆ ತಡೆಯುವುದು ಎಲ್ಲ ಇಲಾಖೆಗಳ ಜವಾಬ್ದಾರಿ, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾಂತರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ, ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ದಮನಿತ ಸಮುದಾಯದ ಜನರು ಸಮಸ್ಯೆಗಳನ್ನು ತಂದಾಗ ತಕ್ಷಣ ಸ್ಪಂದಿಸಿ, ಆದಷ್ಟು ಶೀಘ್ರ ಪರಿಹಾರ ಒದಗಿಸಬೇಕು. ಅವರಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದರು.

ಕುಡಿಯುವ ನೀರು ಪೂರೈಕೆ, ವಿದ್ಯುತ್ ಸಂಪರ್ಕ ಮತ್ತಿತರ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಅರಣ್ಯ ಇಲಾಖೆ ಅಡ್ಡಿ ಮಾಡಬಾರದು. ಸಾಧ್ಯವಾದಷ್ಟು ಜನಸಾಮಾನ್ಯರಿಗೆ, ದೀನ ದಲಿತರಿಗೆ ನಿಯಮದ ವ್ಯಾಪ್ತಿಯೊಳಗೆ ನೆರವಾಗಬೇಕು ಎಂದು ಕಿವಿಮಾತು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಮಾತನಾಡಿ, ‘ಹೇಮಾವತಿ ಪುನರ್ವಸತಿ ಯೋಜನೆ (ಎಚ್‌ಆರ್‌ಪಿ) ಅಡಿ ಹೊಸ ಮಂಜೂರಾತಿ ಮಾಡಲಾಗುವುದಿಲ್ಲ, ಹಾಲಿ ಪ್ರಕರಣ ಬಾಕಿ ಇದ್ದರೆ, ವಿಚಾರಣೆ ನಡೆಸಿ ಇತ್ಯರ್ಥ ಮಾಡಲಾಗುವುದು. ಪಿಟಿಸಿಎಲ್ ಪ್ರಕರಣಗಳು ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದ್ದು, ಅಲ್ಲಿ ಆ ಬಗ್ಗೆ ತೀರ್ಮಾನ ಆಗಲಿವೆ’ ಎಂದು ಹೇಳಿದರು.

ಮುಂದಿನ ಸಭೆಗೆ ಕಡ್ಡಾಯವಾಗಿ ವಿಶೇಷ ಭೂಸ್ವಾಧೀನ ಅಧಿಕಾರಿ ಹಾಜರಾಗಿ ಉತ್ತರ ನೀಡುವಂತೆ ಸೂಚನೆ ನೀಡಲಾಗುವುದು ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ನಂದಿನಿ ಮಾತನಾಡಿ, ‘ಬೇಲೂರು ರಸ್ತೆ ಬದಿಯಲ್ಲಿ ಹಕ್ಕಿ ಪಿಕ್ಕಿ ಸಮುದಾಯದವರು ವ್ಯಪಾರ ಮಾಡುತ್ತಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಸಂಚಾರ ಸುರಕ್ಷತೆ ದೃಷ್ಟಿಯಿಂದ ರಸ್ತೆ ಪಕ್ಕದಲ್ಲಿ ಅವಕಾಶ ಕಷ್ಟ. ವಿವಿಧ ಇಲಾಖೆಗಳು ಈ ಸಮುದಾಯಕ್ಕೆ ಮಳಿಗೆ ನಿರ್ಮಿಸಿ ಅವಕಾಶ ಕಲ್ಪಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ವಿಡಿಯೊ ಸಂವಾದದಲ್ಲಿ ಮಾತನಾಡಿದ ಸಕಲೇಶಪುರ ಉಪ ವಿಭಾಗಾಧಿಕಾರಿ ಪ್ರತೀಕ್ ಬಾಯಲ್, ‘ಬೈಸೂರು ಜಮೀನಿನಲ್ಲಿ ಜೀತ ವಿಮುಕ್ತರಿಗೆ ನಿವೇಶನ ಮಂಜೂರು ಮಾಡಲು ಪ್ರಸ್ತಾವ ಕಳಿಸಲಾಗಿದೆ. ಆದರೆ ಅರಣ್ಯ ಇಲಾಖೆಗೆ ಈ ಜಾಗ ಅಧೀಸೂಚನೆ ಆಗಿದೆಯೆ ಎಂಬ ಬಗ್ಗೆ ಗಮನ ಹರಿಸಬೇಕಿದೆ’ ಎಂದರು.

ಜೀತ ವಿಮುಕ್ತರ ಬಗ್ಗೆ ಹಿಂದಿನ ವಿವರಗಳನ್ನು ಪರಿಶೀಲಿಸಿ ಅರ್ಹರಿಗೆ ಹೊಸದಾಗಿ ಪ್ರಮಾಣಪತ್ರ ನೀಡುವ ಬಗ್ಗೆ ಅಥವಾ ಹೊಸದಾಗಿ ದಾಖಲೆ ಮರು ಸೃಷ್ಟಿ ಮಾಡುವ ಬಗ್ಗೆ ಪರಿಶೀಲಿಸಬಹುದು ಎಂದು ಹೇಳಿದರು.

ಅಂಗಡಿಹಳ್ಳಿ ಹಕ್ಕಿ ಪಿಕ್ಕಿ ಸಮುದಾಯದವರಿಗೆ ಹಂಗಾಮಿ ಸಾಗುವಳಿ ಚೀಟಿ ನೀಡಲಾಗಿದ್ದು, ಅವುಗಳನ್ನು ಭೂ ಪರಿವರ್ತನೆ ಮಾಡಿಕೊಡಬಹುದಾಗಿದೆ. ಇದರಿಂದ ಅವರ ಜಮೀನಿನಲ್ಲೇ ಸಾಂಪ್ರದಾಯಿಕ ಸಾಮಗ್ರಿಗಳ ಮಾರಾಟ ಮಾಡಿಕೊಳ್ಳಲು ಅವಕಾಶ ಸಿಗಲಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುನೀತ್, ವಾರ್ತಾಧಿಕಾರಿ ವಿನೋದ್ ಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಮುದಾಯದ ಪ್ರಮುಖರು ಭಾಗವಹಿಸಿದ್ದರು.

‘ಜೀತ ವಿಮುಕ್ತರಿಗೆ ನ್ಯಾಯ ಒದಗಿಸಿ’

ಪಿಟಿಸಿಎಲ್ ಕಾಯ್ದೆಯಡಿ ಪ್ರಕರಣಗಳನ್ನು ನ್ಯಾಯಸಮ್ಮತವಾಗಿ ವಿಲೇವಾರಿ ಮಾಡಬೇಕು. ವಿಳಂಬವಾಗಿದೆ ಎಂಬ ಕಾರಣಕ್ಕೆ ವಜಾ ಮಾಡಲಾಗುತ್ತಿದೆ. ಅದರೆ ಕೋರ್ಟ್‌ ಆದೇಶವನ್ನು ಸ್ಪಷ್ಟವಾಗಿ ಗಮನಿಸಿ ನಂತರ ತೀರ್ಪು ನೀಡಬೇಕು ಎಂದು ಸದಸ್ಯರಾದ ಮರಿ ಜೋಸೆಫ್, ಆರ್.ಪಿ.ಐ ಸತೀಶ್, ನಾರಾಯಣ ದಾಸ್, ಈರಪ್ಪ, ನಾರಾಯಣ, ಸಂದೇಶ್ ಹೇಳಿದರು.

ಜೀತ ವಿಮುಕ್ತರಿಗೆ 40 ವರ್ಷಗಳಿಂದ ನ್ಯಾಯ ದೊರೆತಿಲ್ಲ. ಜಾಗ ಮಂಜೂರಾಗಿಲ್ಲ. ಇನ್ನಾದರೂ ಲಭ್ಯ ಸರ್ಕಾರಿ ಜಾಗವನ್ನು ಆದ್ಯತೆ ಮೇರೆಗೆ ಒದಗಿಸಿ ಹಾಗೂ ದೌರ್ಜನ್ಯ ಪ್ರಕರಣಗಳಲ್ಲಿ ಪ್ರತಿದೂರು ದಾಖಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ, ಸತ್ಯ ಇಲ್ಲದ ಪ್ರಕರಣಗಳಲ್ಲಿ ಬಿ ರಿಪೋರ್ಟ್‌ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ವಸತಿ ರಹಿತರಿಗೆ ಸರ್ಕಾರಿ ಜಾಗ ನೀಡುವುದು, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತುರ್ತಾಗಿ ನ್ಯಾಯ ಒದಗಿಸುವುದು, ಹೇಮಾವತಿ ಹಾಗೂ ಯಗಚಿ ಜಲಾಶಯದ ಮುಳುಗಡೆ ಸಂತ್ರಸ್ತರಿಗೆ ಜಾಗ ಒದಗಿಸುವುದು, ಹಕ್ಕಿ ಪಿಕ್ಕಿ ಸಮುದಾಯದ ಜನರಿಗೆ ಜಾಗ ಒದಗಿಸುವುದು ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT