ಬುಧವಾರ, ಆಗಸ್ಟ್ 10, 2022
24 °C
ಬಸ್‌ ಮತ್ತು ಆಸ್ಪತ್ರೆ ಸೌಲಭ್ಯವಿಲ್ಲದೇ ಬಡಸಂಗಾಪುರ ಗ್ರಾಮಸ್ಥರ ಪರದಾಟ

ಹಾವೇರಿ: ಶಾಲೆಗಾಗಿ ನಿತ್ಯ 10 ಕಿ.ಮೀಟರ್‌ ವಿದ್ಯಾರ್ಥಿಗಳ ಕಾಲ್ನಡಿಗೆ!

ಪ್ರದೀಪ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ರಟ್ಟೀಹಳ್ಳಿ: ತಾಲ್ಲೂಕಿನ ಬಡಸಂಗಾಪುರ ಗ್ರಾಮದ ಮಕ್ಕಳು 6ನೇ ತರಗತಿ ಓದಲು ಕುಡುಪಲಿ ಗ್ರಾಮಕ್ಕೆ ಹೋಗಬೇಕು. ಬಸ್‌ ಸೌಲಭ್ಯವಿಲ್ಲದ ಕಾರಣ ಶಾಲೆಗೆ ಹೋಗಿ ಬರಲು ನಿತ್ಯ 10 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ಎದುರಾಗಿದೆ. 

ಬಡಸಂಗಾಪುರ–ಕುಡುಪಲಿ ಮಾರ್ಗ ಮಧ್ಯೆ ಕುಮದ್ವತಿ ನದಿಗೆ ಅಡ್ಡಲಾಗಿ ಬ್ಯಾರೇಜ್‌ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಕುಮದ್ವತಿ ನದಿ ಉಕ್ಕಿ ಹರಿದಾಗ ಬಾಂದಾರದ ಮೇಲೂ ನೀರು ಹರಿಯುತ್ತದೆ. ವರ್ಷದಲ್ಲಿ ಮೂರು ತಿಂಗಳು ಮಕ್ಕಳು ಶಾಲೆಗೆ ಹೋಗಿ ಬರುವುದೇ ದೊಡ್ಡ ಸವಾಲಾಗುತ್ತದೆ. 

ರಸ್ತೆ ಸಂಪೂರ್ಣವಾಗಿ ಕೆಸರುಗದ್ದೆಯಾಗಿ ಮಕ್ಕಳು ನಡೆದುಕೊಂಡು ಹೋಗುವುದು ದುಸ್ತರವಾಗುತ್ತದೆ. ಯಾವುದೇ ಸುರಕ್ಷಿತ ರಸ್ತೆಗಳಿಲ್ಲದೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ. ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಬಡಾಸಂಗಾಪುರದಿಂದ ದಂಡಗೀಹಳ್ಳಿ ಗ್ರಾಮಕ್ಕೆ ಸುಮಾರು 5 ಕಿ.ಮೀ. ನಡೆದುಕೊಂಡು ಬಂದು, ಅಲ್ಲಿಂದ ಬಸ್ ಮೂಲಕ ರಾಣೆಬೆನ್ನೂರಿಗೆ ಬರಬೇಕಾದ ಪರಿಸ್ಥಿತಿಯಿದೆ.

ಸೋರುವ ಅಂಗನವಾಡಿ

ಬಡಾಸಂಗಾಪುರ 580 ಜನಸಂಖ್ಯೆ ಹೊಂದಿರುವ ಪುಟ್ಟ ಗ್ರಾಮ. ಗ್ರಾಮದಲ್ಲಿ ಒಂದು ಅಂಗನವಾಡಿ ಕೇಂದ್ರ ಮತ್ತು 1ರಿಂದ 5ನೇ ತರಗತಿವರೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಗ್ರಾಮದಲ್ಲಿ ಅಂಗನವಾಡಿ ಕೇಂದ್ರವಿದ್ದು, ಅದು ಮಳೆಗಾಲದಲ್ಲಿ ಸೋರುತ್ತದೆ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗಿದೆ. 

ಗ್ರಾಮದಲ್ಲಿ ಶೇ 80ರಷ್ಟು ಪರಿಶಿಷ್ಟ ಪಂಗಡದ ಜನಾಂಗದವರು ವಾಸಿಸುತ್ತಿದ್ದಾರೆ. ಉಳಿದಂತೆ ರೆಡ್ಡಿ, ಪಂಚಮಸಾಲಿ, ಮುಸ್ಲಿಂ ಹಾಗೂ ಹರಿಜನ ಸಮಾಜದವರು ವಾಸವಾಗಿದ್ದಾರೆ. ಪ್ರಸ್ತುತ ಸರ್ಕಾರದ ಜೆ.ಜೆ.ಎಂ. ಯೋಜನೆಯಡಿ ಜಲಜೀವನ ಮಿಷನ್ ಅಡಿ ಗ್ರಾಮಸ್ಥರಿಗೆ ನದಿ ನೀರು ಪೂರೈಸಲಾಗುತ್ತಿದೆ. ಇಲ್ಲಿನ ಗ್ರಾಮಸ್ಥರು ಕೃಷಿ ಕಾರ್ಯಕೈಗೊಂಡಿದ್ದಾರೆ.

ಆಸ್ಪತ್ರೆ ಸೌಲಭ್ಯವಿಲ್ಲ

ಯಾವುದೇ ಆಸ್ಪತ್ರೆ ಹಾಗೂ ಪಶು ಚಿಕಿತ್ಸಾಲಯವಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಇಲ್ಲಿ ಪಂಚಾಯ್ತಿಯಿಂದ ಚರಂಡಿ ವ್ಯವಸ್ಥೆ, ಬೀದಿ ದೀಪಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಉತ್ತಮವಾಗಿದೆ. ಇದೀಗ ಗ್ರಾಮಸ್ಥರ ಹಲವಾರು ಪ್ರಯತ್ನಗಳ ನಂತರ ಸ್ಮಶಾನ ಭೂಮಿ ಮಂಜೂರಾಗಿದೆ.

ಬಸ್‌ ಸೌಕರ್ಯ ಕಲ್ಪಿಸಿ

ಬಸ್‌ಗಳ ಸಂಪರ್ಕವಿಲ್ಲದೆ ಗ್ರಾಮಸ್ಥರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಕಾಲ್ನಡಿಗೆಯಲ್ಲೇ ಪ್ರಯಾಣ ಬೆಳೆಸುವಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಕಂದಾಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಮಕ್ಳಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಯನ್ನು ಜನಪ್ರತಿನಿಧಿಗಳು ಕಲ್ಪಿಸಬೇಕು ಎಂದು ಕುಡಪಲಿ ಗ್ರಾಮ ಪಂಚಾಯ್ತಿ ಸದಸ್ಯ ಬಡಾಸಂಗಾಪುರ ನಿವಾಸಿ ಸುರೇಶ ತಳವಾರ ಒತ್ತಾಯಿಸಿದರು. 

ಬಡಸಂಗಾಪುರ ಗ್ರಾಮಕ್ಕೆ ಒಂದು ಆಸ್ಪತ್ರೆಯ ಅವಶ್ಯವಿದೆ. ಮಕ್ಕಳು, ವೃದ್ಧರು, ಬಾಣಂತಿಯರ ಚಿಕಿತ್ಸೆಗೆ ಕುಡಪಲಿ ಗ್ರಾಮಕ್ಕೆ ಹೋಗಿ ಬರಲು ಸಾರಿಗೆ ವ್ಯವಸ್ಥೆಯಿಲ್ಲ, ಬೈಕ್ ಮೇಲೆ ಹೋಗಲು ರಸ್ತೆ ದಾರಿ ಸಮರ್ಪಕವಾಗಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿ ಗುಳ್ಳನಗೌಡ ಪಾಟೀಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು