ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಅಂಧ ಯುವತಿಯರಿಗೆ ಆರ್ಥಿಕ ನೆರವು ಘೋಷಿಸಲಿ

Published 13 ಸೆಪ್ಟೆಂಬರ್ 2023, 6:07 IST
Last Updated 13 ಸೆಪ್ಟೆಂಬರ್ 2023, 6:07 IST
ಅಕ್ಷರ ಗಾತ್ರ

ಶಿಗ್ಗಾವಿ: ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಪ್ರತಿನಿಧಿಸಿರುವ 3 ಅಂಧ ಯುವತಿಯರಿಗೆ ಸರ್ಕಾರ ₹25 ಲಕ್ಷ ಆರ್ಥಿಕ ನೆರವು ಘೋಷಿಸಲಿ ಎಂದು ಹಿರಿಯೂರಿನ ಆದಿ ಜಾಂಬವ ಕೋಡಿಹಳ್ಳಿ ಬ್ರಹನ್ಮಠದ ಷಡಕ್ಷರಿಮುನಿಶ್ರೀ ಆಗ್ರಹಿಸಿದರು.

ತಾಲ್ಲೂಕಿನ ಶಿಶುವಿನಹಾಳದಲ್ಲಿ ಮಂಗಳವಾರ ಮಹಿಳಾ ಅಂಧರ ತಂಡವನ್ನು ಪ್ರತಿನಿಧಿಸಿರುವ ಅಂಧ ಅಂಗವಿಕಲ ಗಂಗವ್ವ ನೀಲಪ್ಪ ಹರಿಜನರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಅನೇಕರು ದೈಹಿಕವಾಗಿ ಸದೃಢವಾಗಿದ್ದರೂ ಸಾಧಿಸಲು ಸಾಧ್ಯವಾಗದೇ ಕೈಚೆಲ್ಲಿರುವಾಗ, ಅಂಧತ್ವವನ್ನು ಸವಾಲಾಗಿ ಸ್ವೀಕರಿಸಿ ರಾಜ್ಯದ ಮೂವರು ಯುವತಿಯರು ಭಾರತದ ಅಂಧ ಮಹಿಳೆಯರ ಕ್ರಿಕೆಟ್ ತಂಡ ಪ್ರತಿನಿಧಿಸಿ ಇಂಗ್ಲೆಂಡ್‌, ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಜಯಗಳಿಸಿ ಚಿನ್ನದ ಪದಕ ಪಡೆದುಕೊಂಡಿರುವುದು ಸಣ್ಣ ಸಾಧನೆಯಲ್ಲ. ಈ ಸಾಧನೆ ಮಾಡಿರುವ ರಾಜ್ಯದ ಮೂವರು ಯುವತಿಯರಿಗೆ ರಾಜ್ಯ, ಕೇಂದ್ರ ಸರ್ಕಾರಗಳು ನೆರವಿಗೆ ಧಾವಿಸಬೇಕು ಎಂದರು.

ಭಾರತ ತಂಡವನ್ನು ಪ್ರತಿನಿಧಿಸಿರುವ ಶಿಶುನಾಳದ ಗಂಗಮ್ಮ, ಹಿರಿಯೂರಿನ ವರ್ಷ, ಶಿರಾದ ದೀಪಿಕಾ ಅವರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇವರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಮುಂದಾಗಬೇಕು. ಈ ಮೂವರಿಗೆ ತಲಾ ₹25 ಲಕ್ಷ ನೆರವು ನೀಡಬೇಕು. ಬೆಂಗಳೂರಿನಲ್ಲಿ ಮನೆ ನೀಡಬೇಕು. ಸರ್ಕಾರಿ ನೌಕರಿ ನೀಡಬೇಕೆಂದು ಅವರು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗಂಗಮ್ಮ ಹರಿಜನ, ನನ್ನ ತಂದೆ ಮೃತಪಟ್ಟಿದ್ದು, ನನ್ನ ತಾಯಿ ಗಂಗವ್ವ ನನಗೆ ಪ್ರೋತ್ಸಾಹ ನೀಡಿದ ಕಾರಣಕ್ಕೆ ನಾನು ಅಂಧರ ಕ್ರಿಕೆಟ್ ನಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಇಂಗ್ಲೆಂಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ನಾನು ಶತಕ ಗಳಿಸಲು ಸಾಧ್ಯವಾಯಿತು. ಕೇಂದ್ರ ಸರ್ಕಾರ ಹಾಗೂ ಬಿಸಿಸಿಐ ಕ್ರಿಕೆಟ್‌ಗೆ ನೀಡಿರುವ ಮಾನ್ಯತೆಯನ್ನು ಅಂಧರ ಕ್ರಿಕೆಟಿಗೂ ನೀಡಬೇಕು. ಅಂದಾಗ ನಮಗೆ ಹೆಚ್ಚಿನ ಆರ್ಥಿಕ ನೆರವು ದೊರೆಯಲು ಸಾಧ್ಯವಾಗುತ್ತದೆ ಎಂದರು.

ಬಸವರಾಜ ಹೆಡಿಗೊಂಡ, ಎಸ್.ಜಿ.ಹೊನ್ನಪ್ಪನವರ, ಡಾ.ಮಲ್ಲೇಶಪ್ಪ ಹರಿಜನ, ಮಾಲತೇಶ ಯಲ್ಲಾಪುರ, ಕರಿಯಪ್ಪ ಕಟ್ಟಿಮನಿ, ಭೀಮಣ್ಣ ಹೊಟ್ಟೂರ, ಶಿವಾನಂದ ಮಾದರ, ಸುರೇಶ ಮಾದರ, ಹನುಮಂತಪ್ಪ ಮಾದರ, ಏಳುಕೋಟೆಪ್ಪ ಪಾಟೀಲ, ಮರಿಯಪ್ಪ ನಡುವಿಮನಿ,ಅಜ್ಜಯ್ಯ ಮರಿಯಣ್ಣನವರ, ಅಜ್ಜಯ್ಯ ಆರಿಕಟ್ಟಿ, ಪುಟ್ಟಪ್ಪ ಕೋಟಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT