ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಪೊಲೀಸರಿಗೆ ಸವಾಲಾದ ಗುಂಡೇಟು ಪ್ರಕರಣ

11 ದಿನ ಕಳೆದರೂ ಸೆರೆಯಾಗದ ಆರೋಪಿ: ಬಂಧನಕ್ಕೆ ಮುಗಳಿ ಗ್ರಾಮಸ್ಥರ ಒತ್ತಾಯ
Last Updated 29 ಏಪ್ರಿಲ್ 2022, 16:02 IST
ಅಕ್ಷರ ಗಾತ್ರ

ಹಾವೇರಿ: ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಗುಂಡೇಟು (ಶೂಟೌಟ್‌) ಘಟನೆ ನಡೆದು 11 ದಿನ ಕಳೆದರೂ ಆರೋಪಿ ಬಂಧನವಾಗದೇ ಇರುವುದು ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಆರೋಪಿಯನ್ನು ಬಂಧಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

‘ಸಿಎಂ ತವರು ಕ್ಷೇತ್ರ’ ಶಿಗ್ಗಾವಿಯಲ್ಲಿ ‘ಶೂಟೌಟ್‌’ ನಡೆದಿರುವುದರಿಂದ, ಪ್ರಕರಣವನ್ನು ಶೀಘ್ರ ಭೇದಿಸಿ, ಆರೋಪಿಯನ್ನು ಬಂಧಿಸಬೇಕು ಎಂಬ ಒತ್ತಡ ಸಹಜವಾಗಿಯೇ ಪೊಲೀಸ್‌ ಇಲಾಖೆ ಮೇಲಿದೆ. ಘಟನೆ ನಡೆದ ಎರಡು ದಿನಕ್ಕೆದಾವಣಗೆರೆ ಪೂರ್ವ ವಲಯದ ಐಜಿಪಿ ತ್ಯಾಗರಾಜನ್ ಅವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಚುರುಕುಗೊಳಿಸುವಂತೆ ತಾಕೀತು ಮಾಡಿದ್ದರು.

3 ವಿಶೇಷ ತಂಡ ರಚನೆ: ಆರೋಪಿಯ ಬಂಧನಕ್ಕೆ 3 ವಿಶೇಷ ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ. ಚೆನ್ನೈ, ಗೋವಾ ಹಾಗೂ ಹುಬ್ಬಳ್ಳಿ–ಧಾರವಾಡ ಈ ಮೂರು ಸ್ಥಳಗಳಿಗೆ ತನಿಖಾ ತಂಡದವರು ಹೋಗಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಇದುವರೆಗೆ ಆರೋಪಿಯ ಸುಳಿವು ಸಿಕ್ಕಿಲ್ಲ.

‘ಆರೋಪಿಯು ಮೊಬೈಲ್‌ ಬಳಕೆ ಮಾಡದ ಕಾರಣ, ಲೊಕೇಶನ್‌ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಆರೋಪಿಗೆ ಪೊಲೀಸರ ಎಲ್ಲ ತಂತ್ರಗಳ ಅರಿವು ಇರುವ ಕಾರಣ ಪದೇ ಪದೇ ಸ್ಥಳಗಳನ್ನು ಬದಲಿಸುತ್ತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಏನಿದು ಘಟನೆ?: ಏ.19ರಂದು ರಾತ್ರಿ 10.30ರ ಸಮಯದಲ್ಲಿ ರಾಜಶ್ರೀ ಚಿತ್ರಮಂದಿರದಲ್ಲಿ ‘ಕೆಜಿಎಫ್‌–2’ ಸಿನಿಮಾ ನೋಡುವ ಸಂದರ್ಭ, ಮುಂದಿನ ಸಾಲಿನ ಕುರ್ಚಿಯ ಮೇಲೆ ಕಾಲಿಟ್ಟ ಕಾರಣಕ್ಕೆ ಪ್ರೇಕ್ಷಕರಿಬ್ಬರ ನಡುವೆ ಗಲಾಟೆ ನಡೆದಿತ್ತು. ಇದನ್ನೇ ನೆಪವಾಗಿಸಿಕೊಂಡ ಆರೋಪಿ, ಮುಗಳಿ ಗ್ರಾಮದ ವಸಂತಕುಮಾರ ಶಿವಪುರ (28)ಮೇಲೆ ಪಿಸ್ತೂಲಿನಿಂದ ಮೂರು ಸುತ್ತು ಗುಂಡು ಹಾರಿಸಿದ್ದ.

ಎರಡು ಗುಂಡುಗಳು ಹೊಟ್ಟೆಗೆ ತಗುಲಿ, ವಸಂತಕುಮಾರ ಗಂಭೀರವಾಗಿ ಗಾಯಗೊಂಡಿದ್ದ. ದೇಹ ಹೊಕ್ಕಿದ್ದ ಎರಡು ಗುಂಡುಗಳನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಕಾರಣ, ವಸಂತಕುಮಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಿಸ್ತೂಲ್‌ ಎಲ್ಲಿಂದ ಬಂತು?: ಆರೋಪಿ ಬಳಸಿರುವುದು ‘ಕಂಟ್ರಿಮೇಡ್‌ ಪಿಸ್ತೂಲ್‌’ ಎನ್ನಲಾಗುತ್ತಿದ್ದು, ಆತನಿಗೆ ಪಿಸ್ತೂಲ್‌ ಎಲ್ಲಿಂದ ಬಂತು? ಪಿಸ್ತೂಲ್‌ಗೆ ಪರವಾನಗಿ ಇತ್ತೇ? ಘಟನೆಯ ಹಿಂದೆ ಯಾರ್‍ಯಾರು ಇದ್ದಾರೆ? ಇತ್ಯಾದಿ ಪ್ರಶ್ನೆಗಳು ಜನರನ್ನು ಕಾಡುತ್ತಿವೆ.

ಮಂಜುನಾಥ ಪಾಟೀಲ, ಆರೋಪಿ
ಮಂಜುನಾಥ ಪಾಟೀಲ, ಆರೋಪಿ

ತನಿಖೆಯ ಬಗ್ಗೆ ಅಸಮಾಧಾನ: ‘ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ಕಾರ್ಯವೈಖರಿ ನಮಗೆ ತೃಪ್ತಿಕರವಾಗಿಲ್ಲ.ಗುಂಡೇಟು ಪ್ರಕರಣದ ಆರೋಪಿಯನ್ನು ಶೀಘ್ರ ಬಂಧಿಸಬೇಕು ಹಾಗೂ ಸಂತ್ರಸ್ತ ಕುಟುಂಬದವರಿಗೆ ನ್ಯಾಯ ಒದಗಿಸಬೇಕು’ ಎಂದು ಮುಗಳಿ ಗ್ರಾಮಸ್ಥರು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

ಆರೋಪಿಯ ಫೋಟೊ ಬಿಡುಗಡೆ
ಶೂಟೌಟ್‌ ಪ್ರಕರಣದ ಆರೋಪಿ ಮಂಜುನಾಥ (ಸಂತೋಷ) ಪಾಟೀಲ ಭಾವಚಿತ್ರವನ್ನು ಪೊಲೀಸ್‌ ಇಲಾಖೆ ಈಚೆಗೆ ಬಿಡುಗಡೆ ಮಾಡಿದೆ. ಘಟನೆ ನಂತರ ಆರೋಪಿ ಪರಾರಿಯಾಗಿದ್ದು, ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಹಾವೇರಿ ಕಂಟ್ರೋಲ್‌ ರೂಂ. 08375–232143, ಶಿಗ್ಗಾವಿ ಪಿಎಸ್‌ಐ ಮೊ: 94808 04558 ಸಂಖ್ಯೆಗೆ ಕರೆ ಮಾಡಿ ಎಂದು ಹಾವೇರಿ ಜಿಲ್ಲಾ ಪೊಲೀಸ್‌ ಇಲಾಖೆ ಪ್ರಕಟಣೆ ತಿಳಿಸಿದೆ.

ಮಂಜುನಾಥ ವಿರುದ್ಧ 2021ರ ಡಿಸೆಂಬರ್‌ನಲ್ಲಿ ಶಿಗ್ಗಾವಿ ಪೊಲೀಸ್‌ ಠಾಣೆಯಲ್ಲಿ ‘ಕೊಲೆ ಯತ್ನ’ ಪ್ರಕರಣ ದಾಖಲಾಗಿದ್ದು, ಕ್ರಿಮಿನಲ್‌ ಹಿನ್ನೆಲೆ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.

***

3 ವಿಶೇಷ ತನಿಖಾ ತಂಡಗಳನ್ನು ರಚಿಸಿ, ಪೊಲೀಸ್ ಇಲಾಖೆ ಸತತವಾಗಿ ಶ್ರಮಿಸುತ್ತಿದೆ. ಶೀಘ್ರದಲ್ಲೇ ಆರೋಪಿ ಬಂಧಿಸುವ ವಿಶ್ವಾಸವಿದೆ.
– ವಿಜಯಕುಮಾರ ಸಂತೋಷ, ಹೆಚ್ಚುವರಿ ಎಸ್ಪಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT