ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ಖರೀದಿಗೆ ಆಧಾರ್ ಕಡ್ಡಾಯ

ದರ ಪಟ್ಟಿ ಪ್ರದರ್ಶಿಸಲು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಸೂಚನೆ
Published 2 ಜೂನ್ 2023, 14:16 IST
Last Updated 2 ಜೂನ್ 2023, 14:16 IST
ಅಕ್ಷರ ಗಾತ್ರ

ಹಾವೇರಿ: ರೈತರು ರಸಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ಆಧಾರ್‌ ಸಂಖ್ಯೆಯನ್ನು ತೆಗೆದುಕೊಂಡು ಹೋಗಬೇಕು. ಯೂರಿಯಾ ರಸಗೊಬ್ಬರ ಖರೀದಿಗೆ ಮುಗಿಬೀಳದೆ ಅವಶ್ಯವಿದ್ದಷ್ಟು ರಸಗೊಬ್ಬರ ಖರೀದಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಅವರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರಸಗೊಬ್ಬರ ಮಾರಾಟಗಾರರು ದರ ಪಟ್ಟಿಯನ್ನು ಮಾರಾಟ ಮಳಿಗೆಯಲ್ಲಿ ರೈತರಿಗೆ ಕಾಣುವಂತೆ ಪ್ರದರ್ಶಿಸುವುದು ಕಡ್ಡಾಯ. ರಸಗೊಬ್ಬರದ ಜೊತೆ ಯಾವುದೇ ಲಘು ಪೋಷಕಾಂಶ ಅಥವಾ ಇತರೆ ಉತ್ಪನ್ನಗಳನ್ನು ಲಿಂಕ್ ಮಾಡದೆ ಮಾರಾಟ ಮಾಡಬೇಕು ಎಂದು ಸೂಚಿಸಿದ್ದಾರೆ.

ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಬಿಲ್ ನೀಡದೇ ಇರುವುದು ಅಥವಾ ಇತರೆ ಉತ್ಪನ್ನಗಳನ್ನು ಲಿಂಕ್ ಮಾಡುವುದು, ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿ ಮಾಡುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಂತಹ ಮಾರಾಟಗಾರರ ಪರವಾನಗಿ ರದ್ದು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರು ರಸಗೊಬ್ಬರ ಖರೀದಿಸುವಾಗ ಚೀಲದ ಮೇಲೆ ಮುದ್ರಿತ ದರ ಗಮನಿಸಿ, ಅದರ ಪ್ರಕಾರ ಖರೀದಿಸಬೇಕು. ಮಾರಾಟಗಾರರು ಚೀಲದ ಮೇಲೆ ಮುದ್ರಿತ ಧಾರಣೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದಲ್ಲಿ ರೈತರು ಹತ್ತಿರದ ಕೃಷಿ ಇಲಾಖೆಯ ಕಚೇರಿ ಸಂಪರ್ಕಿಸಿ ದೂರು ನೀಡಬಹುದು. ರೈತರ ಆಧಾರ ಸಂಖ್ಯೆಯನ್ನು ಪಾಯಿಂಟ್ ಆಪ್ ಸೇಲ್ ಯಂತ್ರದಲ್ಲಿ ಕಡ್ಡಾಯವಾಗಿ ದಾಖಲಿಸಿ ರಸಗೊಬ್ಬರ ಮಾರಾಟ ಮಾಡಬೇಕಾಗಿರುತ್ತದೆ. ಆದ್ದರಿಂದ ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ಈ ಕುರಿತು ರೈತರಿಗೆ ಸೂಕ್ತ ತಿಳಿವಳಿಕೆ ನೀಡಿ ಕಡ್ಡಾಯವಾಗಿ ಆಧಾರ್‌ ಸಂಖ್ಯೆಯನ್ನು ಪಡೆದು ರಸಗೊಬ್ಬರ ವಿತರಣೆ ಮಾಡಬೇಕು ಎಂದು ಸೂಚಿಸಿದ್ದಾರೆ.

‘ನಿಗದಿಗಿಂತ ಹೆಚ್ಚಿನ ದರ ವಿಧಿಸುವಂತಿಲ್ಲ’ ‘ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡುವಂತಿಲ್ಲ’ ‘ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದು’

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು ಬಿತ್ತನೆ ಕಾರ್ಯ ಶುರುವಾಗಿದೆ. ಅವಶ್ಯಕ್ಕೆ ತಕ್ಕಂತೆ ಹಂತ ಹಂತವಾಗಿ ರಸಗೊಬ್ಬರ ಸರಬರಾಜು ಆಗುತ್ತಿದ್ದು ಯಾವುದೇ ಕೊರತೆ ಇಲ್ಲ.

–ಚೇತನಾ ಪಾಟೀಲ, ಜಂಟಿ ಕೃಷಿ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT