ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀನ್‌ ಪಾರ್ಥೀವ ಶರೀರ ತರಲು ಕ್ರಮ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

8 ಸಾವಿರ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಸರ್ವಪ್ರಯತ್ನ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Last Updated 2 ಮಾರ್ಚ್ 2022, 13:36 IST
ಅಕ್ಷರ ಗಾತ್ರ

ಹಾವೇರಿ: ‘ಉಕ್ರೇನ್ ದೇಶದಲ್ಲಿ ಶೆಲ್ ದಾಳಿಯಿಂದ ನವೀನ ಗ್ಯಾನಗೌಡರ್‌ ಮೃತಪಟ್ಟಿದ್ದು, ನಮ್ಮೆಲ್ಲರಿಗೂ ಆಘಾತ ಉಂಟು ಮಾಡಿದೆ. ನವೀನ ಅವರ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲು ನಿರಂತರವಾಗಿ ಪ್ರಯತ್ನ ಮಾಡಲಾಗುತ್ತಿದೆ. ಜತೆಗೆ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ’ ಎಂದುಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ರಾಣೆಬೆನ್ನೂರು ತಾಲ್ಲೂಕು ಚಳಗೇರಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಸಂದರ್ಭ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ವಿದೇಶಾಂಗ ಸಚಿವ ಜೈಶಂಕರ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ನಾಲ್ಕು ಸಚಿವರನ್ನು ಗಡಿ ರೇಖೆಗೆ ನೇಮಕ ಮಾಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಶೆಲ್ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೃತದೇಹ ತರಲು ಸಮಸ್ಯೆಯಾಗಿದೆ. ಸ್ವಲ್ಪ ಬಿಡುವು ನೀಡಲು ಉಕ್ರೇನ್ ಹಾಗೂ ರಷ್ಯಾ ದೇಶಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.

12 ಸಾವಿರ ವಿದ್ಯಾರ್ಥಿಗಳ ರಕ್ಷಣೆ

ಬಹಳ ಕಠಿಣ ಪರಿಸ್ಥಿತಿಯಲ್ಲಿಯೂ ಉಕ್ರೇನ್‌ನಿಂದ ಈವರೆಗೆ 12 ಸಾವಿರ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆತರಲಾಗಿದೆ. ಇನ್ನೂ 8 ಸಾವಿರ ವಿದ್ಯಾರ್ಥಿಗಳನ್ನು ಕರೆತರಬೇಕಾಗಿದೆ. ನುರಿತ ಮಿಲಿಟರಿ ಪಡೆಯನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇಂದು (ಬುಧವಾರ) ಒಂಬತ್ತು ವಿಮಾನಗಳು ಆಗಮಿಸುವ ನಿರೀಕ್ಷೆ ಇದೆ. ದೇಶದ ಕೊನೆಯ ಪ್ರಜೆಯನ್ನೂ ಸಹ ಸುರಕ್ಷಿತವಾಗಿ ಕರೆತರುವ ತನಕ ನಮಗೆ ಸಮಾಧಾನವಿಲ್ಲ ಎಂದರು.

ಉಕ್ರೇನ್‍ನಲ್ಲಿ ವಿದ್ಯಾಭ್ಯಾಸಕ್ಕಾಗಿ ಏಜೆಂಟರ ಮೂಲಕ ವಿದೇಶಕ್ಕೆ ತೆರಳಿದವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ನಂತರ ಅವರ ಶಿಕ್ಷಣ ಮುಂದುವರಿಕೆ ಕುರಿತಂತೆ ಸಕಾರಾತ್ಮಕ ಚಿಂತನೆ ಮಾಡಲಾಗುವುದು. ಇದು ಪಾಲಿಸಿ ವಿಷಯವಾಗಿರುವುದರಿಂದ ಈ ಕುರಿತಂತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

ನವೀನರ ಅಣ್ಣನಿಗೆ ಉದ್ಯೋಗ ಭರವಸೆ

ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮೃತ ನವೀನ್ ಸಹೋದರ ಹರ್ಷ ಅವರು ಸ್ನಾತಕೋತ್ತರ ಪದವೀಧರರಾಗಿದ್ದು, ಸದ್ಯ ಪಿಎಚ್‌ಡಿ ಮಾಡುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿದ ನಂತರ ಯಾವುದಾದರೂ ಪ್ರತಿಷ್ಠಿತ ಕಾಲೇಜಿನಲ್ಲಿಸಹಾಯಕ ಪ್ರಾಧ್ಯಾಪಕ ಹುದ್ದೆಯನ್ನು ಕೊಡಿಸುವ ಭರವಸೆ ನೀಡಿದರು.

‘ನಮ್ಮ ಮಕ್ಕಳನ್ನು ಜೀವಂತವಾಗಿ ಕರೆತನ್ನಿ’

‘ಉಕ್ರೇನ್‌ನಲ್ಲಿರುವ ನಮ್ಮ ಮಕ್ಕಳ (ಅಮಿತ್‌ ವೈಶ್ಯರ ಮತ್ತು ಸುಮನ್‌ ವೈಶ್ಯರ) ಜೀವಕ್ಕೆ ಅಪಾಯವಿದೆ. ಕೂಡಲೇ ಅವರನ್ನು ತಾಯ್ನಾಡಿಗೆ ಜೀವಂತವಾಗಿ ಕರೆತನ್ನಿ’ ಎಂದು ಅಮಿತ್‌ ವೈಶ್ಯರ ತಂದೆ ವೆಂಕಟೇಶ ವೈಶ್ಯರ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಕೈ ಮುಗಿದು ಬೇಡಿಕೊಂಡರು.

ನಮ್ಮಲ್ಲಿ ಎಂಬಿಬಿಎಸ್‌ ಸೀಟಿಗೆ ದುಬಾರಿ ಹಣ ಕೇಳಿದರು. ಆ ಹಣ ಕಟ್ಟಲು ಸಾಧ್ಯವಾಗದೆ ಮಗನನ್ನು (ಅಮಿತ್‌ ವೈಶ್ಯರ) ಉಕ್ರೇನ್‌ಗೆ ಕಳುಹಿಸಬೇಕಾಯಿತು. ಇಲ್ಲಿ ಒಬ್ಬೊಬ್ಬ ಸಚಿವನಿಗೆ ಒಂದೊಂದು ಕಾಲೇಜು ಇದೆ. ಅವರು ಹಣವನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.

ಮೃತ ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್‌ ಹಾಗೂ ತಾಯಿ ವಿಜಯಲಕ್ಷ್ಮಿ ಅವರಿಗೆ ಪ್ರಲ್ಹಾದ ಜೋಶಿ ಅವರು ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT