ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ಶುಂಠಿ ಬೆಳೆಗೂ ಬಂತು ಗುಳಿಗೆ

ಶುಂಠಿ ಬೆಳೆಯಲ್ಲಿ ಟ್ರೈಕೋಡರ್ಮಾ, ರೈಜೋಬ್ಯಾಕ್ಟಿರಿಯಾ ಮಾತ್ರೆ ಬಳಸುವ ಪ್ರಾತ್ಯಕ್ಷಿಕೆ
Last Updated 30 ಜೂನ್ 2022, 16:25 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಕೃಷಿಯಲ್ಲಿ ಗುಳಿಗೆಗಳ (ಬಯೋ ಕ್ಯಾಪ್ಸೂಲ್) ತಂತ್ರಜ್ಞಾನವು ಉಪಯುಕ್ತವಾದ ಸೂಕ್ಷ್ಮಾಣು ಜೀವಿಗಳನ್ನು ಮಾತ್ರೆಗಳ ರೂಪದಲ್ಲಿ ಸಂಗ್ರಹಿಸಿ ಬಳಕೆ ಮಾಡುವ ವಿಧಾನವಾಗಿದೆ. ಈ ತಂತ್ರಜ್ಞಾನವನ್ನು ಕೇರಳದ ಕ್ಯಾಲಿಕಟ್‌ನ ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ’ ಎಂದು ಧಾರವಾಡ ಸಹವಿಸ್ತರಣಾ ನಿರ್ದೇಶಕ ಡಾ.ಪಿ.ಎಸ್.ಹೂಗಾರ ಹೇಳಿದರು.

ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಗುರುವಾರ ರಟ್ಟೀಹಳ್ಳಿ ತಾಲ್ಲೂಕಿನ ಮಕರಿ ಗ್ರಾಮದ ರೈತ ಏಕಾಂತಯ್ಯ ಮತ್ತು ಬಸವರಾಜ ಅವರ ಹೊಲಕ್ಕೆ ಭೇಟಿ ನೀಡಿ, ಶುಂಠಿ ಬೆಳೆಯಲ್ಲಿ ಟ್ರೈಕೋಡರ್ಮಾ ಮತ್ತು ರೈಜೋಬ್ಯಾಕ್ಟಿರಿಯಾ ಗುಳಿಗೆಗಳನ್ನು (ಮಾತ್ರೆ) ಬಳಸುವ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿ ಮಾತನಾಡಿದರು.

‘ಬಯೋ ಕ್ಯಾಪ್ಸೂಲ್ ತಂತ್ರಜ್ಞಾನದಲ್ಲಿ ತೋಟಗಾರಿಕೆ ಬೆಳೆಗಳಿಗೆ ಬೇಕಾದ ಟ್ರೈಕೋಡರ್ಮಾ, ಬೆಸಿಲಸ್ ಇತ್ಯಾದಿ ಸೂಕ್ಷ್ಮಾಣು ಜೀವಿಗಳನ್ನು ಮಾತ್ರೆಗಳ ರೂಪದಲ್ಲಿ ಪ್ಯಾಕಿಂಗ್ ಮಾಡಲಾಗಿದೆ. ಈ ತಂತ್ರಜ್ಞಾನದಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಶೇಖರಿಸಿಡುವುದು, ಸಾಕಣೆ ಮಾಡುವುದು. ಹೆಚ್ಚು ಸಂಖ್ಯೆಯ ಸೂಕ್ಷ್ಮಾಣು ಜೀವಿಗಳನ್ನು ಸಣ್ಣ–ಸಣ್ಣ ಮಾತ್ರೆಗಳಲ್ಲಿ ಪ್ಯಾಕ್ ಮಾಡಲಾಗಿರುತ್ತದೆ. ಮಾತ್ರೆಗಳ ಬಳಕೆಯಿಂದ ಶುಂಠಿ ಬೆಳೆಯಲ್ಲಿ ಬರುವ ಮತ್ತು ಹೆಚ್ಚಾಗಿ ಹಾನಿಯುಂಟು ಮಾಡುವ ಗಡ್ಡೆ ಕೊಳೆ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು’ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಪಿ.ಅಶೋಕ ಮಾತನಾಡಿ, ‘ಈ ಬಯೋ ಕ್ಯಾಪ್ಸೂಲ್‌ ಅನ್ನು ಎಲ್ಲಾ ರೀತಿಯ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬಳಸಬಹುದಾಗಿದೆ. ಟ್ರೈಕೋಡರ್ಮಾ ಸೂಕ್ಷ್ಮಾಣುಗಳು ಬೆಳೆಯ ಬೆಳವಣಿಗೆ ಹೆಚ್ಚಿಸುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನು ನೀಡುತ್ತವೆ. ರೈಜೋಬ್ಯಾಕ್ಟೀರಿಯಾ ಸೂಕ್ಷ್ಮಾಣುಗಳು ಬೇರಿನ ವಲಯದಲ್ಲಿ ಬೆಳೆದು, ಸಸ್ಯದ ಬೆಳವಣಿಗೆಯನ್ನು ವೃದ್ಧಿಸುತ್ತವೆ. ಬೆಳವಣಿಗೆಗೆ ಪೂರಕವಾದ ಹಾರ್ಮೊನುಗಳನ್ನು ಉತ್ಪಾದಿಸುವ ಮೂಲಕ ರಂಜಕ ಮತ್ತು ಪೋಟ್ಯಾಷ್‌ ಮತ್ತು ಇತರೆ ಲಘುಪೋಷಕಾಂಶಗಳ ಚಲನೆಯನ್ನು ಹೆಚ್ಚಿಸಿ ಸಸ್ಯದ ಆಂತರಿಕ ನಿರೋಧಕತೆಯನ್ನು ಪ್ರಚೋದಿಸುತ್ತವೆ’ ಎಂದರು.

ರೈತರು ಯಾವುದೇ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೊದಲು ಮಣ್ಣು ಮತ್ತು ನೀರು ಪರೀಕ್ಷೆ ಮಾಡಿಸಿ ಅದರ ಗುಣಧರ್ಮಗಳ ಪ್ರಕಾರ ಕೇಂದ್ರದ ವಿಜ್ಞಾನಿಗಳಿಂದ ತಾಂತ್ರಿಕ ಮಾಹಿತಿಯನ್ನು ಪಡೆದು ಬೆಳೆಗಳನ್ನು ಬೆಳೆದರೆ ರೈತರ ಆದಾಯ ಹೆಚ್ಚುತ್ತದೆ. ಖರ್ಚು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದರು.

ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞರಾದ ಡಾ.ಸಂತೋಷ ಎಚ್.ಎಂ ಹಾಗೂ ಮಣ್ಣು ವಿಜ್ಞಾನಿ ಡಾ.ರಾಜಕುಮಾರ ಜಿ.ಆರ್ ಮತ್ತು ಮಕರಿ ಗ್ರಾಮದ ಶುಂಠಿ ಬೆಳೆಯುವ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT