ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಬಿತ್ತನೆ ಚುರುಕು: ಬಾನಿನತ್ತ ರೈತರ ಚಿತ್ತ

ಜಿಲ್ಲೆಯಲ್ಲಿ ಶೇ 69.10ರಷ್ಟು ಬಿತ್ತನೆ ಪೂರ್ಣ * ಮಳೆಗಾಗಿ ಕಾದಿರುವ ಅನ್ನದಾತ * ಬೀಜ, ಗೊಬ್ಬರ ದಾಸ್ತಾನು
Published 17 ಜೂನ್ 2024, 4:21 IST
Last Updated 17 ಜೂನ್ 2024, 4:21 IST
ಅಕ್ಷರ ಗಾತ್ರ

ಹಾವೇರಿ: ಮುಂಗಾರು ಆರಂಭದ ಮಳೆಯಿಂದ ಖುಷಿಯಾದ ರೈತರು ಹೊಲಗಳನ್ನು ಹದಗೊಳಿಸಿ ಬಿತ್ತನೆ ಮಾಡಿದ್ದು, ಇದೀಗ ಬೀಜ ಮೊಳಕೆಯೊಡೆಯಲು ಅಗತ್ಯವಿರುವ ಮಳೆಗಾಗಿ ಬಾನಿನತ್ತ ಮುಖ ಮಾಡಿ ಕಾಯುತ್ತಿದ್ದಾರೆ.

ಜಿಲ್ಲೆಯ 3,27,087 ಹೆಕ್ಟೇರ್‌ ಕೃಷಿ ಭೂಮಿ ಪೈಕಿ, 2,26,130 ಹೆಕ್ಟೇರ್‌ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಪೂರ್ಣಗೊಂಡಿದೆ. 

ಕಳೆದ ಬಾರಿ ಮುಂಗಾರು ಕೈ ಕೊಟ್ಟಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಸಾಕಷ್ಟು ಬೆಳೆ ಹಾನಿ ಉಂಟಾಗಿ, ರೈತರು ಆರ್ಥಿಕವಾಗಿಯೂ ತೊಂದರೆಗೆ ಸಿಲುಕಿದ್ದರು. ಈ ಬಾರಿ ಮುಂಗಾರು ಉತ್ತಮವಾಗಿದ್ದರಿಂದ, ರೈತರು ಸಂಭ್ರಮದಿಂದ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಈ ವಾರ ನಿತ್ಯವೂ ಮೋಡ ಕಾಣಿಸಿಕೊಂಡಿದ್ದು, ಜೋರಾದ ಗಾಳಿಯೂ ಬೀಸುತ್ತಿದೆ. ಆದರೆ, ವಾಡಿಕೆಗೆ ತಕ್ಕಷ್ಟು ಮಳೆಯಾಗಿಲ್ಲ. ಅಲ್ಲಲ್ಲಿ ಮಳೆಯಾದರೂ ತುಂತುರು ಮಾತ್ರ. ನಿಗದಿಯಂತೆ ಮಳೆಯಾದರೆ ಬೆಳೆಗಳಿಗೆ ಅನುಕೂಲವೆಂದು ರೈತರು ಹೇಳುತ್ತಿದ್ದಾರೆ.

‘ಮುಂಗಾರು ಆರಂಭದ ಮಳೆ ಉತ್ತಮವಾಗುತ್ತಿದ್ದಂತೆ, ಬೀಜ ಬಿತ್ತಿದ್ದೇವೆ. ಈಗ ಮೊಳಕೆಯೊಡೆಯುವುದನ್ನು ಕಾಯುತ್ತಿದ್ದೇವೆ. ಹೀಗಾಗಿ, ಮಳೆಯ ಅಗತ್ಯವಿದೆ’ ಎಂದು ಹಾವೇರಿ ತಾಲ್ಲೂಕಿನ ಕೊಡಲ ರೈತ ಧರ್ಮಣ್ಣ ತಿಳಿಸಿದರು.

ಮಳೆ ಬಗ್ಗೆ ಮಾಹಿತಿ ನೀಡಿದ ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ತಜ್ಞರು, ‘ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ ಸರಾಸರಿ 4 ದಿನಗಳಲ್ಲಿ 8.75 ಸೆಂ.ಮೀ. ಮಳೆ ದಾಖಲಾಗಿದೆ. ಜೂನ್‌ 12ರ ವರೆಗೆ ಸರಾಸರಿ 7.32 ಸೆಂ.ಮೀ ಮಳೆ ಆಗಿದೆ. ಜೂನ್ 13ರಿಂದ 16ರ ವರೆಗೆ ಉತ್ತಮ ಮಳೆಯಾಗುವ ಮುನ್ಸೂಚನೆ ಇತ್ತು. ಆದರೆ, ಸದ್ಯಕ್ಕೆ ಸರಾಸರಿ 0.18 ಸೆಂ.ಮೀ ಮಾತ್ರ ಅಲ್ಲಲ್ಲಿ ಮಳೆಯಾಗಿದೆ. ಇದನ್ನು ಗಮನಿಸಿದರೆ, ಮಳೆ ಪ್ರಮಾಣ ಕಡಿಮೆ ಆಗಿದೆ’ ಎಂದರು.

‘2011ರಿಂದ 2019ರ ವರೆಗಿನ ಮಳೆಯ ಅಂಕಿ–ಅಂಶ ಗಮನಿಸಿದಾಗ, ಜೂನ್‌ನಲ್ಲಿ ಸರಾಸರಿ 10.89 ಸೆಂ.ಮೀ ಮಳೆ ಆಗಿದೆ. ಈ ವರ್ಷ ಈಗಾಗಲೇ 7.32 ಸೆಂ.ಮೀ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯೂ ಇದೆ’ ಎಂದು ಹೇಳಿದರು.

ಬಿತ್ತನೆಯಲ್ಲಿ ಶೇ 69.1ರಷ್ಟು ಸಾಧನೆ: ‘ಜಿಲ್ಲೆಯಲ್ಲಿ ಈ ಬಾರಿ ಉತ್ತಮ ರೀತಿಯಲ್ಲಿ ಬಿತ್ತನೆ ಆಗಿದೆ. ಮಳೆ ಆಶ್ರಿತ ಹಾಗೂ ನೀರಾವರಿ ಸೇರಿದಂತೆ ಶೇ 69.1ರಷ್ಟು ಭಾಗದಲ್ಲಿ ಬಿತ್ತನೆ ಪೂರ್ಣಗೊಂಡಿದ್ದು, ಉಳಿದ ಭಾಗದಲ್ಲೂ ಬಿತ್ತನೆ ಆರಂಭವಾಗುವ ಲಕ್ಷಣಗಳಿವೆ’ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದರು.

‘ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ಪೂರೈಸಲಾಗಿದೆ. ಮುಂದಿನ ದಿನಗಳಲ್ಲೂ ಅಗತ್ಯ ಬೀಜಗಳು, ಗೊಬ್ಬರ ದಾಸ್ತಾನು ಇದೆ. ತೀರಾ ಅಗತ್ಯವಿದ್ದರೆ, ಪುನಃ ಬೇಡಿಕೆ ಸಲ್ಲಿಸಿ ಬೀಜ ಹಾಗೂ ಗೊಬ್ಬರ ತರಿಸಿಕೊಂಡು ಸಂಗ್ರಹಿಸಿಡಲಾಗುವುದು’ ಎಂದು ಹೇಳಿದರು.

ಅಂಕಿಅಂಶ
327087 ಹೆಕ್ಟೇರ್‌‌ಬಿತ್ತನೆಯ ಒಟ್ಟು ಕೃಷಿ ಪ್ರದೇಶ 226130 ಹೆಕ್ಟೇರ್‌ಬಿತ್ತೆನೆಯಾದ ಕೃಷಿ ಪ್ರದೇಶ 194528 ಹೆಕ್ಟೇರ್‌ಮಳೆ ಆಶ್ರಿತ ಪ್ರದೇಶ 31526 ಹೆಕ್ಟೇರ್‌ನೀರಾವರಿ ಪ್ರದೇಶ
ಪ್ರಮುಖ ಬೆಳೆಗಳ ಬಿತ್ತನೆ ಪ್ರಮಾಣ
ಬೆಳೆಗಳು;ಬಿತ್ತನೆ ಪ್ರದೇಶ (ಹೆಕ್ಟೇರ್‌ಗಳಲ್ಲಿ) ಗೋವಿನ ಜೋಳ; 164136 ಭತ್ತ; 8654 ಶೇಂಗಾ; 12546 ಸೊಯಾಬಿನ್; 10809 ಹತ್ತಿ; 21942 ಹೆಸರು; 485
ರಸಗೊಬ್ಬರ ಹಳೇ ದಾಸ್ತಾನು ವಿತರಣೆ
ಸದ್ಯದ ದಾಸ್ತಾನು (ಮೆಟ್ರಿಕ್ ಟನ್‌ಗಳಲ್ಲಿ) ರಸಗೊಬ್ಬರ;ಹಳೇ ದಾಸ್ತಾನು;ವಿತರಣೆ;ಸದ್ಯದ ದಾಸ್ತಾನು ಯೂರಿಯಾ; 45961; 25386; 20575 ಡಿಎಪಿ; 22086; 18822; 3264 ಎಂಒಪಿ; 1746; 822; 924 ಕಾಂಪ್ಲೆಕ್ಸ್‌; 34109; 22254; 11855 ಎಸ್‌ಎಸ್‌ಪಿ; 601; 30; 571
‘ನ್ಯಾನೊ ಡಿಎಪಿ ಬಳಸಿ’
‘ರೈತರಿಗೆ ಅವಶ್ಯವಿರುವ ರಸಗೊಬ್ಬರವನ್ನು ಸಕಾಲಕ್ಕೆ ಪೂರೈಸಲಾಗುತ್ತಿದೆ. ರೈತರು ಕೇವಲ ಡಿಎಪಿ ಮತ್ತು ಯೂರಿಯಾ ಬಳಸುವ ಬದಲು ಪರ್ಯಾಯವಾಗಿ ನ್ಯಾನೊ ಡಿಎಪಿ ಮತ್ತು ನ್ಯಾನೊ ಯೂರಿಯಾ ಬಳಸಬಹುದು’ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದ್ದಾರೆ. ಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡಿರುವ ಅವರು ‘ಪ್ರತಿ ಎಕರೆಗೆ 500 ಎಂ.ಎನ್ ನ್ಯಾನೊ ಯೂರಿಯಾ ಬಳಸುವುದರಿಂದ ಬೆಳೆಗಳಿಗೆ ನೇರವಾಗಿ ಸಾರಜನಕ ಒದಗಿಸಿದಂತಾಗುತ್ತದೆ ಇದು ಬೆಳೆಗಳಲ್ಲಿ ಇಳುವರಿ ಹೆಚ್ಚಿಸುವಲ್ಲಿ ನೆರವಾಗಲಿದೆ. ಪರಿಸರ ಸಂರಕ್ಷಣೆಯನ್ನೂ ಉತ್ತೇಜಿಸಿದಂತಾಗುತ್ತದೆ. ಬೆಳೆಗಳು ಹಳದಿ-ಕೆಂಪು ಆಗುವುದನ್ನು ತಪ್ಪಿಸಬಹುದಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT