ಸೋಮವಾರ, ಮೇ 23, 2022
30 °C
ನಿಜಶರಣ ಅಂಬಿಗರ ಚೌಡಯ್ಯನವರ 900ನೇ ಜಯಂತ್ಯುತ್ಸವ * ಶಾಂತಮುನಿ ಸ್ವಾಮಿಗಳ 4ನೇ ಸ್ಮರಣೋತ್ಸವ

ಗಂಗಾಮತಸ್ಥರನ್ನು ಎಸ್‌ಟಿಗೆ ಸೇರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುತ್ತಲ (ಹಾವೇರಿ): ಗಂಗಾಮತಸ್ಥರನ್ನು 39 ಹೆಸರುಗಳಿಂದ ಕರೆಯಲಾಗುತ್ತದೆ. ಅವಕಾಶವಂಚಿತ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌.ಟಿ) ಸೇರಿಸಬೇಕು ಎಂದು ವಿವಿಧ ಮಠಾಧೀಶರು, ಮುಖಂಡರು ಹಾಗೂ ಸಮುದಾಯದ ಜನರು ಒಕ್ಕೊರಲಿನಿಂದ ಆಗ್ರಹಿಸಿದರು. 

ತಾಲ್ಲೂಕಿನ ನರಸೀಪುರ ಸುಕ್ಷೇತ್ರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ವತಿಯಿಂದ 2ನೇ ದಿನವಾದ ಬುಧವಾರ ಶರಣ ಸಂಸ್ಕೃತಿ ಉತ್ಸವ, ವಚನ ಮಹಾರಥೊತ್ಸವ, ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ, ಶಾಂತಮುನಿ ಸ್ವಾಮೀಜಿಗಳ 4ನೇ ಸ್ಮರಣೋತ್ಸವ, ಶಾಂತಭೀಷ್ಮಚೌಡಯ್ಯ ಸ್ವಾಮೀಜಿಗಳ ತೃತೀಯ ಪೀಠಾರೋಹಣ ವಾರ್ಷಿಕ ಮಹೋತ್ಸವ ಹಾಗೂ ಸರಳ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. 

ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ಮಾತನಾಡಿ, ಅಂಬಿಗರ ಚೌಡಯ್ಯನವರ ಜನ್ಮಸ್ಥಳ, ಐಕ್ಯಸ್ಥಳವಾದ ನರಸೀಪುರದಲ್ಲಿ ‘ಅಂಬಿಗರ ಚೌಡಯ್ಯ ಪ್ರಾಧಿಕಾರ’ ರಚಿಸಬೇಕು. ಅನುಭವಮಂಟಪದಲ್ಲಿ ‘ನಿಜಶರಣ’ ಎಂಬ ಬಿರುದಿಗೆ ಪಾತ್ರವಾದ ಚೌಡಯ್ಯ ಅವರು ವೈಚಾರಿಕತೆಗೆ ಹೆಸರುವಾಸಿಯಾಗಿದ್ದರು. ಖಡ್ಗದಂಥ ಮಾತು, ನ್ಯಾಯನಿಷ್ಠುರತೆ, ತತ್ವಜ್ಞಾನದಿಂದ ಎಲ್ಲ ಶರಣರಿಗಿಂತ ವಿಭಿನ್ನವಾಗಿದ್ದಾರೆ ಎಂದರು. 

ಶತಮಾನಗಳಿಂದ ಶೋಷಿತರಾದ ತಳ ಸಮುದಾಯಗಳು ಮೇಲೆ ಬರಬೇಕೆಂದರೆ, ಸಂಸ್ಕಾರ, ಸಂಘಟನೆ ಅವಶ್ಯವಾಗಿದೆ. ವೈಚಾರಿಕೆ ಕೆಲಸಗಳ ಮೂಲಕ ಗುರುಪೀಠ ಜನರ ಮನಸ್ಸಿಗೆ ಹತ್ತಿರವಾಗಿದೆ. ಗುರುಪೀಠ ಸ್ಥಾಪನೆಗೆ ಮತ್ತು ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ವಿಠ್ಠಲ್‌ ಹೇರೂರ ಅವರು ಮಹಾನ್‌ ಚೇತನ ಎಂದು ಬಣ್ಣಿಸಿದರು. 

ಇಳಕಲ್ ಚಿತ್ತರಗಿ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ಮಾತನಾಡಿ, ಗಂಗಾಳದಲ್ಲಿ ಸ್ವಲ್ಪವನ್ನೂ ಬಿಡದೆ ಪ್ರಸಾದ ಸೇವಿಸಬೇಕು. ಅದು ಸಂಸ್ಕೃತಿ. ಹೊಟ್ಟೆಗೆ ಸ್ವಲ್ಪ ಆಹಾರ ಕಡಿಮೆಯಾದರೂ ನಿಶ್ಯಕ್ತಿ ಕಾಡುತ್ತದೆ. ಹಾಗಾಗಿ ಪ್ರಸಾದದ ಮಹತ್ವವನ್ನು ಅರಿಯಬೇಕು ಎಂದರು.  

ನಿಡುಮಾಮಿಡಿ ಶ್ರೀ ಮಾತನಾಡಿ, ‘ಗುರುಪೀಠ ಬೆಳೆಯುವುದು ಅಧಿಕಾರಸ್ಥರು ಮತ್ತು ಶ್ರೀಮಂತರಿಂದಲ್ಲ. ನಿಜವಾದ ಭಕ್ತರಿಂದ. ತಾವು ಕೂಡಿಟ್ಟ ಒಂದೊಂದು ರೂಪಾಯಿಯನ್ನು ಮಠಕ್ಕೆ ನೀಡಿ ಮಠವನ್ನು ಬೆಳೆಸುತ್ತಾರೆ. ಸಮಾಜದಲ್ಲಿ ಸಾತ್ವಿಕ ಸ್ವಾಮೀಜಿ ಸಿಗುವುದು ಕಷ್ಟವಾಗಿದೆ. ಅಂಥ ಸ್ವಾತ್ವಿಕ ಸ್ವಾಮೀಜಿಯಾದ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ಗಂಗಾಮತಸ್ಥರಿಗೆ ಸಿಕ್ಕಿರುವುದು ಪುಣ್ಯ’ ಎಂದರು. 

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಮಾತನಾಡಿ, ಸಮಾಜದ ಜನತೆ ಯಾವ ಕಾರಣಕ್ಕೂ ಮದ್ಯಪಾನ ಮಾಡಬೇಡಿ. ನೀವು ಪ್ರಮಾಣ ನೀಡಿದರೆ ನಮ್ಮ ಸ್ವಾಮೀಜಿಗೆ ಸಂತಸವಾಗುತ್ತದೆ ಎಂದರು. 

ಬಸವಜ್ಞಾನ ಗುರುಕುಲದ ಡಾ.ಈಶ್ವರ ಮಂಟೂರ, ಹೊಸದುರ್ಗದ ಕುಂಚಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ, ಸಂಸದರಾದ ಜಿ.ಎಂ.ಸಿದ್ಧೇಶ್ವರ, ಬಿ.ವೈ.ರಾಘವೇಂದ್ರ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ನಾರಾಯಣರಾವ, ಲಾಲಾಜಿ ಮೆಂಡನ್‌, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಸಚಿವ ಪ್ರಮೋದ ಮದ್ವರಾಜ, ಆರ್‌.ಶಂಕರ್‌, ಗಂಗಾಮತ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಿ.ಮೌಲಾಲಿ, ಮುಖಂಡರು, ಗಣ್ಯರು ಇದ್ದರು. 

ನಿಜಶರಣ ಅಂಬಿಗರ ಚೌಡಯ್ಯನವರ ಮತ್ತು ಗಂಗಾಮಾತೆಯ ಭಕ್ತಿ ಗೀತೆಯೆ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಲಾಯಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು