ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಾಹಿಗಳಿಗೆ ಸಿಗದ ‘ಅನುಗ್ರಹ’ ಭಾಗ್ಯ

ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ₹65 ಕೋಟಿ ಬಾಕಿ
Published 14 ಡಿಸೆಂಬರ್ 2023, 2:51 IST
Last Updated 14 ಡಿಸೆಂಬರ್ 2023, 2:51 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯ ಸರ್ಕಾರ ‘ಅನುಗ್ರಹ’ ಯೋಜನೆಯಡಿ 1.34 ಲಕ್ಷ ಪ್ರಕರಣಗಳಿಗೆ ಸಂಬಂಧಪಟ್ಟಂತೆ ₹65.34 ಕೋಟಿ ಪರಿಹಾರ ಧನ ಬಿಡುಗಡೆ ಮಾಡದ ಕಾರಣ ಕುರಿ–ಮೇಕೆ ಕಳೆದುಕೊಂಡ ಕುರಿಗಾಹಿಗಳು ಪರಿಹಾರ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. 

2021–22ನೇ ಸಾಲಿನಲ್ಲಿ 30,449 ಪ್ರಕರಣಗಳಿಗೆ ಸಂಬಂಧಿಸಿದಂತೆ ₹14.93 ಕೋಟಿ ಮತ್ತು 2022–23ನೇ ಸಾಲಿನಲ್ಲಿ 1.03 ಲಕ್ಷ ಪ್ರಕರಣಗಳಿಗೆ ಸಂಬಂಧಿಸಿದಂತೆ ₹50.41 ಕೋಟಿ ಪರಿಹಾರ ಧನವನ್ನು ರಾಜ್ಯ ಸರ್ಕಾರ ಈವರೆಗೆ ಬಿಡುಗಡೆ ಮಾಡಿಲ್ಲ.

ನೈಸರ್ಗಿಕ ವಿಪತ್ತು, ಅಪಘಾತ ಮತ್ತು ಕಾಯಿಲೆಗಳಿಂದ ಕುರಿ–ಮೇಕೆಗಳು ಮೃತಪಟ್ಟರೆ, ರಾಜ್ಯ ಸರ್ಕಾರ ಕುರಿ–ಮೇಕೆಗೆ ತಲಾ ₹5 ಸಾವಿರ ಪರಿಹಾರ ಧನ ಕೊಡುವ ಯೋಜನೆ ಇದು. ಎರಡು ಮೂರು ವರ್ಷಗಳಿಂದ ಪರಿಹಾರಕ್ಕಾಗಿ ಕುರಿಗಾಹಿಗಳು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ಅಲೆದಾಡುವಂತಹ ಪರಿಸ್ಥಿತಿ ತಲೆದೋರಿದೆ. 

15 ಕುರಿಗಳಿಗೆ ಪರಿಹಾರವೇ ಸಿಕ್ಕಿಲ್ಲ:

‘ಎರಡು ಮೂರು ವರ್ಷಗಳಲ್ಲಿ 20ಕ್ಕೂ ಹೆಚ್ಚು ಕುರಿಗಳು ಸತ್ತಿವೆ. 20ರ ಪೈಕಿ 5 ಕುರಿಗಳಿಗೆ ಮಾತ್ರ ಪರಿಹಾರ ಸಿಕ್ಕಿದೆ. ವೈದ್ಯರ ಕೊರತೆಯಿಂದ ಕುರಿಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿಲ್ಲ. ಸಾವುಗಳ ಕುರಿತು ರೈತರು ನೀಡುವ ಮಾಹಿತಿಯನ್ನು ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿ ಸಮರ್ಪಕವಾಗಿ ದಾಖಲು ಮಾಡುತ್ತಿಲ್ಲ. ಈ ಎಲ್ಲದರಿಂದ ಪರಿಹಾರ ಸಿಗದಂತಾಗಿದೆ’ ಎಂದು ರಾಣೆಬೆನ್ನೂರು ತಾಲ್ಲೂಕಿನ ಮೈದೂರು ಗ್ರಾಮದ ಕುರಿಗಾಹಿ ಸಂಜೀವ ದೊಡ್ಡಮನಿ ಸಮಸ್ಯೆ ತೋಡಿಕೊಂಡರು. 

‘₹8 ಸಾವಿರ ಕೊಟ್ಟು ಕುರಿಮರಿ ಖರೀದಿಸುತ್ತೇವೆ. ಆದರೆ, ಕುರಿ ಸತ್ತಾಗ ಸರ್ಕಾರ ₹5 ಸಾವಿರ ಮಾತ್ರ ಪರಿಹಾರ ಕೊಡುತ್ತದೆ. ₹25 ಸಾವಿರ ಮೌಲ್ಯದ ಟಗರು ಸೇರಿ ಒಟ್ಟು 15 ಕುರಿಗಳು ಸತ್ತಿದ್ದರೂ ಬಿಡಿಗಾಸು ಪರಿಹಾರ ಸಿಕ್ಕಿಲ್ಲ’ ಎಂದು ಹೊಸರಿತ್ತಿಯ ಕುರಿಗಾಹಿ ನಾಗರಾಜು ತಿಳಿಸಿದರು.

ಸಿಬ್ಬಂದಿ ಕೊರತೆ– ಸಿಗದ ಚಿಕಿತ್ಸೆ:

‘ಕಾಲುಬೇನೆ, ಜ್ವರ, ಉಸಿರಾಟದ ಸಮಸ್ಯೆ ಸೇರಿ ಇತರ ಕಾರಣಗಳಿಂದ ಕುರಿ–ಮೇಕೆಗಳು ಸಾಯುತ್ತವೆ.  ಗ್ರಾಮೀಣ ಪ್ರದೇಶದ ಪಶು ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಸಕಾಲಕ್ಕೆ ಚಿಕಿತ್ಸೆ ಸಿಗುವುದಿಲ್ಲ. ಇಲಾಖೆಯಿಂದ ಟೆಂಟ್‌, ಸೌರದೀಪ, ಔಷಧ ಮುಂತಾದ ಸೌಲಭ್ಯಗಳು ಕುರಿಗಾಹಿಗಳಿಗೆ ಸರಿಯಾಗಿ ತಲುಪಿಲ್ಲ. ಸಾಲ ಸೌಲಭ್ಯಗಳು ಅರ್ಹರಿಗೆ ಸಿಗುತ್ತಿಲ್ಲ’ ಎಂದು ಕುರಿಗಾಹಿಗಳು ದೂರಿದರು. 

‘ಕುರಿಗಾಹಿಗಳ ಬವಣೆ ಸಿ.ಎಂ.ಗೆ ಗೊತ್ತು’

‘ಅನುಗ್ರಹ ಯೋಜನೆಯನ್ನು ಪುನಃ ಜಾರಿಗೊಳಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಹೋರಾಟ ಮಾಡುತ್ತೇನೆ. ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಯೋಜನೆಯನ್ನು ಸ್ಥಗಿತಗೊಳಿಸಿದೆ. ₹30 ಕೋಟಿಯಷ್ಟು ಹಳೆ ಬಾಕಿಯನ್ನು ಬಿಡುಗಡೆ ಮಾಡಿಲ್ಲ’ ಎಂದು 2021ರ ಮಾರ್ಚ್‌ನಲ್ಲಿ ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯ ಅವರಿಗೆ ಕುರಿಗಾಹಿಗಳ ಬವಣೆ ಚೆನ್ನಾಗಿ ತಿಳಿದಿದೆ. ಹೀಗಾಗಿ ‘ಅನುಗ್ರಹ’ ಯೋಜನೆಯ ಪರಿಹಾರ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕುರಿಗಾಹಿಗಳು ಆಗ್ರಹಿಸಿದ್ದಾರೆ. 

ಹಾವೇರಿ ಜಿಲ್ಲೆಯಲ್ಲಿ 18 ಸಾವಿರ ಪ್ರಕರಣಗಳಿಗೆ ₹8.95 ಕೋಟಿ ಪರಿಹಾರ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಸರ್ಕಾರದಿಂದ ಅನುದಾನ ಸಿಕ್ಕ ತಕ್ಷಣ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ

-ಡಾ.ಎಸ್‌.ವಿ.ಸಂತಿ ಉಪನಿರ್ದೇಶಕ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT