ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾನಗಲ್: ಉತ್ಕೃಷ್ಟ ರುಚಿಯ ಆಪೂಸ್‌ ವಿದೇಶಕ್ಕೆ ರಪ್ತು

Published 20 ಮೇ 2024, 5:55 IST
Last Updated 20 ಮೇ 2024, 5:55 IST
ಅಕ್ಷರ ಗಾತ್ರ

ಹಾನಗಲ್: ಹಾನಗಲ್ ತಾಲ್ಲೂಕಿನ ಮಾವಿನ ತೋಟಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತಿದ್ದ ಉತ್ಕೃಷ್ಟ ರುಚಿಯ ಆಪೂಸ್‌ ಮಾವು ಇಳುವರಿ ಹವಾಮಾನ ವೈಪರಿತ್ಯ ಕಾರಣದಿಂದ ಕಡಿಮೆಯಾಗುತ್ತಿದೆ.

ಎರಡು ವರ್ಷ ಅಧಿಕ ಮಳೆ, ಇಬ್ಬನಿ ಕಾಟ, ಈ ವರ್ಷ ಉಷ್ಣಾಂಶ ಹೆಚ್ಚಳದ ಪರಿಣಾಮ ಮಾವು ಇಳುವರಿಯಲ್ಲಿ ಇಳಿಮುಖವಾಗಿದೆ.

ತಾಲ್ಲೂಕಿನಲ್ಲಿ 3500 ಹೆಕ್ಟರ್‌ ಮಾವು ಬೆಳೆಯಲಾಗುತ್ತದೆ. ಮಳೆ ಅಭಾವ ಹೊರತುಪಡಿಸಿದರೆ, ಈಗಲೂ ಹಾನಗಲ್ ಹವಾಗುಣ ಮಾವು ಬೆಳೆಗೆ ಉತ್ತಮವಾಗಿದೆ ಎಂಬ ವರದಿ ತೋಟಗಾರಿಕೆ ಇಲಾಖೆ ಹೊಂದಿದೆ. ಆದರೆ ಮಾವು ಬೆಳೆಗಾರರು ಅಡಿಕೆ ತೋಟಗಳತ್ತ ಆಕರ್ಷಿತರಾಗಿ ಮಾವು ಬೆಳೆಯಿಂದ ವಿಮುಖರಾಗುತ್ತಿದ್ದಾರೆ.

ಮುಖ್ಯವಾಗಿ ಆಪೂಸ್ ಮಾವು ಅಧಿಕ ಇಳುವರಿ ಮತ್ತು ರುಚಿಯ ಉತ್ಕೃಷ್ಟತೆ ಪಡೆಯಲು ಕೆಲವು ಕ್ರಮಗಳನ್ನು ಅನುಸರಿಸಬೇಕಾದ ಅಗತ್ಯವಿದೆ. ತೋಟಗಾರಿಕೆ ಇಲಾಖೆಯ ಸಸ್ಯ ಸಂರಕ್ಷಣಾ ಕ್ರಮಗಳ ಜೊತೆಯಲ್ಲಿ ಆಗಾಗ ಮಾವಿನ ತೋಟಗಳಿಗೆ ನೀರುಣಿಸುವ ವ್ಯವಸ್ಥೆಯಾದಾಗ ಮಾವು ಇಳುವರಿ ಸುಧಾರಣೆಗೊಳ್ಳಬಹುದು ಎಂಬುದು ಪರಿಣತರ ಅಭಿಮತ.

ಮಾವು ತೋಟ ಮಾಡಿದ ಹೊಸತರಲ್ಲಿ ಬೆಳೆ ಜೋಪಾನ ಮಾಡುವ ಕಾಳಜಿಯನ್ನೇ ಮುಂದುವರಿಸಿಕೊಂಡು ಬಂದ ತೋಟಗಾರರು ಈಗಲೂ ಉತ್ತಮ ಇಳುವರಿ ಪಡೆಯುತ್ತಿರುವುದು ಹಾನಗಲ್ ಭಾಗದಲ್ಲಿ ಕಾಣಬಹುದು.

ಜನವರಿ ಸಮಯದಲ್ಲಿ ಮಾವಿನ ತೋಟದಲ್ಲಿ ಹೂವು ಅರಳಿ ಕಾಯಿ ಕಚ್ಚಿಕೊಳ್ಳುವ ವೇಳೆಗಾಗಲೇ ವ್ಯಾಪಾರಸ್ಥರಿಗೆ ತೋಟವನ್ನು ಲೀಸ್ ಕೊಡುವ ಪದ್ಧತಿ ಬೆಳೆಯುತ್ತಿದ್ದು, ಸಾಕಷ್ಟು ಸಂರಕ್ಷಣಾ ಕ್ರಮಗಳು ಇಲ್ಲದಂತಾಗಿ ಇಳುವರಿ ಕೂಡ ಇಳಿಮುಖವಾಗಲು ಕಾರಣವಾಗುತ್ತಿದೆ.

ತಾಲ್ಲೂಕಿನಲ್ಲಿ ಕಳೆದ ವರ್ಷ ಮಾವು ಬೆಳೆ ಇಳುವರಿ ನೆಲಕಚ್ಚಿತ್ತು. ಮಂಜು ಅಧಿಕವಾಗಿ ಮರದಲ್ಲಿ ಹೂವು ಉದುರತೊಡಗಿತ್ತು. ಈ ವರ್ಷ ಹೆಚ್ಚು ಇಳುವರಿಯ ನಿರೀಕ್ಷೆ ಹೊಂದಲಾಗಿತ್ತು. ಗಿಡದಲ್ಲಿ ಹೂವು ಕಾಣಸಿಕೊಂಡಿದ್ದವು. ಆದರೆ ಅಧಿಕ ಉಷ್ಣಾಂಶ ಮತ್ತೆ ಮಾವು ಬೆಳೆಗೆ ಕಂಟಕವಾಗಿದೆ.

ಕೊಳವೆಬಾವಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೇಗವಾಗಿ ಹೆಚ್ಚುತ್ತಿದ್ದು, ಅಂತರ್ಜಲಮಟ್ಟ 800 ಅಡಿ ತನಕ ತಲುಪುತ್ತಿದೆ. ತೋಟದ ಬೆಳೆಗಳನ್ನು ಉಳಿಸಿಕೊಳ್ಳಲು ಎರಡ್ಮೂರು ಕಿ.ಮೀ ದೂರದಿಂದ ನೀರನ್ನು ತರುವ ಹರಸಾಹಸಕ್ಕೂ ರೈತ ಮುಂದಾಗುತ್ತಿದ್ದಾನೆ. ಇನ್ನೊಂದೆಡೆ ತೋಟಗಾರಿಕೆ ಬೆಳೆಗೆ ಹಾನಗಲ್ ಸೂಕ್ತ ಅಲ್ಲ ಎಂದು ಕೈಚೆಲ್ಲಿ ಕುಳಿತ ರೈತರೂ ಇದ್ದಾರೆ ಎನ್ನುವುದು ಮಾವು ಬೆಳೆಗಾರ ಮಾರುತಿ ಶಿಡ್ಲಾಪುರ ಅವರ ಅಭಿಪ್ರಾಯ.

ಹಾನಗಲ್ ಮಾವು ಸೌದಿ ರಾಷ್ಟ್ರಗಳು, ಜಪಾನ್‌ ಮತ್ತಿತರ ರಾಷ್ಟ್ರಗಳಿಗೆ ರಫ್ತಾಗುತ್ತವೆ. ಮಾವಿನ ಅವಧಿಯಲ್ಲಿ ತಲೆ ಎತ್ತುವ ಇಲ್ಲಿನ ಮಾವಿನ ಮಂಡಿಗಳಲ್ಲಿ ರೈತರು ತಮ್ಮ ಮಾವು ತಂದು
ಮಾರುತ್ತಾರೆ. ಈ ಮಾವು ಬಾಂಬೆ ಮಾರುಕಟ್ಟೆಗೆ ರವಾನೆಯಾಗುತ್ತದೆ.

ಆಪೂಸ್‌, ಪೈರಿ, ರತ್ನಾಪುರಿ, ತೋತಾಪುರಿ, ಬೆನಿಷಾ, ನಾಟಿ, ಮಲ್ಲಿಕಾ, ಸಿಂಧುಲಾ ತಳಿಯ ಮಾವು ಇಲ್ಲಿಂದ ಬೆಳೆದು ಬಾಂಬೆ ರವಾನೆಯಾಗುತ್ತದೆ. ಇದರಲ್ಲಿ ಬಹುಪಾಲು ಉತ್ಕೃಷ್ಟ ರುಚಿಯ ಆಪೂಸ್‌ ಮಾವು ಇರುತ್ತದೆ.

ಇಳುವರಿ ಕಡಿಮೆ ಜೊತೆಯಲ್ಲಿ ಮಾವಿನ ಬೆಲೆಯೂ ಈ ಬಾರಿ ಕಡಿಮೆಯಾಗಿದೆ. ಹವಾಮಾನದ ಕಾರಣಕ್ಕಾಗಿ ದೇಶದ ಎಲ್ಲೆಡೆ ಒಂದೇ ಬಾರಿಗೆ ಮಾವು ಇಳುವರಿ ಬಂದಿದೆ. ಅಲ್ಲದೆ, ಈಗ ಬಂದಿರುವ ಮಾವು ಅಧಿಕ ಉಷ್ಣಾಂಶದ ಅಡ್ಡ ಪರಿಣಾಮ ಹೊಂದಿರುವ ಕಾರಣಕ್ಕಾಗಿ ಬೆಲೆಯನ್ನು ಇಳಿಸಿಕೊಂಡಿದೆ ಎಂದು ಮಾವು ತೋಟ ಬಾಡಿಗೆ ಪಡೆಯುವ ವ್ಯಾಪಾರಿಗಳು ಹೇಳುತ್ತಾರೆ.

ಹಾನಗಲ್‌ನಲ್ಲಿ ಮಾವಿನ ಮಾರುಕಟ್ಟೆ ವ್ಯವಸ್ಥೆ ಮಾಡಿದ್ದೇವೆ. ಎಲ್ಲವೂ ಪಾರದರ್ಶಕವಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ರೈತರಿಗೆ ಪೈಪೋಟಿ ಬೆಲೆ ಸಿಗುತ್ತದೆ. ಆದರೆ ಒಂದೇ ಬಾರಿಗೆ ಮಾವು ಫಸಲು ಬಂದಿರುವುದು ರೈತರಿಗೆ ಮಾವಿನ ಬೆಲೆ ಕಡಿಮೆಯಾಗಿದೆ ಎಂದು ಎಚ್‌ಕೆಎಚ್‌ ಮಾವಿನ ಮಂಡಿಯ ಮಾಲೀಕ ಅಬ್ದುಲ್‌ ಕರಂಸಾಬ್‌ ಹೇಳುತ್ತಾರೆ.

ಹಾನಗಲ್‌ನ ಕರಂಸಾಬ್‌ ಅವರ ಮಾವಿನ ಮಂಡಿಯಲ್ಲಿ ರೈತರು ಮಾರಾಟಕ್ಕೆ ತಂದಿರುವ ಆಪೂಸ್‌ ತಳಿಯ ಮಾವು
ಹಾನಗಲ್‌ನ ಕರಂಸಾಬ್‌ ಅವರ ಮಾವಿನ ಮಂಡಿಯಲ್ಲಿ ರೈತರು ಮಾರಾಟಕ್ಕೆ ತಂದಿರುವ ಆಪೂಸ್‌ ತಳಿಯ ಮಾವು
ಹಾನಗಲ್ ಮಾವಿನ ಮಂಡಿಗಳಲ್ಲಿ ಈ ದಿನಗಳಲ್ಲಿ ಮಾವಿನ ವ್ಯಾಪಾರ ಜೋರಾಗಿದೆ
ಹಾನಗಲ್ ಮಾವಿನ ಮಂಡಿಗಳಲ್ಲಿ ಈ ದಿನಗಳಲ್ಲಿ ಮಾವಿನ ವ್ಯಾಪಾರ ಜೋರಾಗಿದೆ
‘ಸಸ್ಯ ಸಂರಕ್ಷಣಾ ಕ್ರಮ ಅಗತ್ಯ’
ಈ ಬಾರಿ ಶೇ 30 ರಷ್ಟು ಮಾತ್ರ ಮಾವು ಇಳುವರಿ ಇದೆ. ಎರಡು ವರ್ಷದ ಹಿಂದೆ ರಾಮತೀರ್ಥ ಹೊಸಕೊಪ್ಪ ಗುಡಗುಡಿ ಬೈಚವಳ್ಳಿ ಚೀರನಹಳ್ಳಿ ಮತ್ತಿತರ ಗ್ರಾಮ ಭಾಗದಲ್ಲಿ ಮಾವು ಬೆಳೆಗೆ ವಿಪರೀತ ಅಂಟು ರೋಗ ಕಾಣಿಸಿಕೊಂಡಿತ್ತು. ಗಿಡದಲ್ಲಿ ಒಂದೂ ಕಾಯಿ ಉಳಿದಿರಲಿಲ್ಲ. ಆಗಾಗ್ಗೆ ಎದುರಾಗುವ ಹವಾಮಾನ ವೈಪರೀತ್ಯದ ಜೊತೆಯಲ್ಲಿ ಇದಕ್ಕೆಲ್ಲ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳದಿರುವುದು ಕಾರಣ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ. ಏಪ್ರಿಲ್‌ನಿಂದ ಮೇ ವರೆಗೆ ಮಾವು ಅವಧಿ ಮುಗಿಯುತ್ತದೆ. ಆ ಬಳಿಕ ಮಾವಿನ ಗಿಡಗಳ ಕಾಳಜಿ ಮುಖ್ಯ. ಜುಲೈ ಸಮಯದಲ್ಲಿ ಅನಗತ್ಯ ರೆಂಬೆ -ಕೊಂಬೆ ಕತ್ತರಿಸಬೇಕು. ಜನವರಿ ವರೆಗೆ ಮೂರ್ನಾಲ್ಕು ಬಾರಿ ಉತ್ತಮವಾಗಿ ತೋಟಗಳಿಗೆ ನೀರು ಹಾಯಿಸಬೇಕು. ಅಂಟು ರೋಗ ಬಾಧಿಸದಂತೆ ಔಷಧ ಸಿಂಪಡಣೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT