ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯ ಈಡಿಗ ಸಮಾವೇಶ ಅ.10ರಂದು

Last Updated 2 ಸೆಪ್ಟೆಂಬರ್ 2021, 15:33 IST
ಅಕ್ಷರ ಗಾತ್ರ

ಹಾವೇರಿ: ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ಅ.10ರಂದು ಜಿಲ್ಲಾ ಮಟ್ಟದ ಆರ್ಯ ಈಡಿಗ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶದ ಅಧ್ಯಕ್ಷರಾಗಿ ಸತೀಶ ಈಳಿಗೇರ ಆಯ್ಕೆಯಾಗಿದ್ದಾರೆ ಎಂದು ಆರೇಮಲ್ಲಾಪುರದ ಪ್ರಣವಾನಂದರಾಮ ಸ್ವಾಮೀಜಿ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲು ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದೇವೆ. ಮಾಲೀಕಯ್ಯ ಗುತ್ತೇದಾರ, ಕುಮಾರ ಬಂಗಾರಪ್ಪ, ಮಧು ಬಂಗಾರಪ್ಪ ಸೇರಿದಂತೆ ಈಡಿಗ ಸಮಾಜದ ಶಾಸಕರು, ಮಂತ್ರಿಗಳು, ಗಣ್ಯರನ್ನೊಳಗೊಂಡು ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.

ರಾಜ್ಯದಲ್ಲಿ 26 ಒಳಪಂಗಡಗಳು ಸೇರಿದಂತೆ ಸುಮಾರು 70 ಲಕ್ಷ ಆರ್ಯ ಈಡಿಗ ಸಮುದಾಯದ ಜನಸಂಖ್ಯೆಯಿದೆ. 7 ಶಾಸಕರು ಮತ್ತು ಇಬ್ಬರು ಮಂತ್ರಿಗಳು ಇದ್ದಾರೆ. ಸೇಂದಿ ಇಳಿಸುವುದು ಮತ್ತು ಮಾರಾಟ ಮಾಡುವುದು ನಮ್ಮ ಸಮುದಾಯದ ಕುಲಕಸುಬು. ಆದರೆ, ಕುಲಕಸುಬನ್ನೇ ಕಸಿದುಕೊಂಡ ಸರ್ಕಾರ ನಮಗೆ ಪರ್ಯಾಯ ವ್ಯವಸ್ಥೆಯನ್ನೇ ಕಲ್ಪಿಸಿಲ್ಲ. ಕೇರಳ, ತಮಿಳುನಾಡು, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಸೇಂದಿ ಇಳಿಸಲು ಅವಕಾಶವಿದೆ ಎಂದರು.

ರಾಯಚೂರು, ಸಿಂಧನೂರು, ಗಂಗಾವತಿ ಮುಂತಾದ ಕಡೆ ಯಥೇಚ್ಚವಾಗಿ ಈಚಲ ಮತ್ತು ತಾಳೆ ಮರಗಳಿವೆ. ಸೇಂದಿ ಇಳಿಸಿ, ಮಾರಾಟ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡುತ್ತೇವೆ. ನೀರಾ ತೆಗೆಯುವುದನ್ನೂ ನಮ್ಮ ಸಮುದಾಯಕ್ಕೆ ಕೊಡಬೇಕು. ಎಂಎಸ್‌ಐಎಲ್‌ ಶಾಪ್‌ ತೆರೆಯಲು ಶೇ 50ರಷ್ಟು ಮೀಸಲಾತಿ ಕೊಡಬೇಕು. ನಮ್ಮ ಸಮುದಾಯವನ್ನು ಕಡೆಗಣಿಸಿದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಆರ್ಯ ಈಡಿಗ ಸಮಾಜಕ್ಕೆ ಬಹುಬೇಡಿಕೆಯ ನಿಗಮ ಮಂಡಳಿಯನ್ನೇ ಘೋಷಣೆ ಮಾಡಿಲ್ಲ. ಇದರಿಂದ ಆರ್ಯ ಈಡಿಗರ ಸಮುದಾಯಕ್ಕೆ ಅನ್ಯಾಯವಾಗಿದೆ. ಸಮುದಾಯದ ನಾಯಕರನ್ನು ಕಡೆಗಣಿಸುವ ರಾಜಕೀಯ ಹುನ್ನಾರ ನಡೆಯುತ್ತಿದೆ. ನಮ್ಮ ಸಮುದಾಯದ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸತೀಶ ಈಳಿಗೇರ, ಕಾಂತೇಶ ಈಳಿಗೇರ, ಮಲ್ಲಿಕಾರ್ಜುನ, ಮಾಲತೇಶ ಹಂಸಭಾವಿ, ಮುತ್ತಣ್ಣ ಈಳಿಗೇರ, ಪರಶುರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT